ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಅಧಿಕಾರಿಗಳು ಮತ್ತು ಚುನಾಯಿತ ಜನಪ್ರತಿನಿಧಿಗಳು ಸಹಕಾರ ಮನೋಬಾವದಿಂದ ಆಡಳಿತ ನಡೆಸಿದರೆ ಗ್ರಾಮ ಪಟ್ಟಣಗಳ ಸಮಗ್ರ ಅಭಿವೃದ್ದಿ ಮಾಡಬಹುದು ಎಂದು ತಹಶೀಲ್ದಾರ ಎಸ್.ಎಸ್. ನಾಯಕಲಮಠ ಹೇಳಿದರು.
ಸ್ಥಳೀಯ ಪಟ್ಟಣ ಪಂಚಾಯತಿಯಲ್ಲಿ ನಡೆದ ಪೂಜಾ ಕಾರ್ಯಕ್ರಮ ಅಧಿಕಾರ ಹಸ್ತಾಂತರ ಮತ್ತು ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
ಮೂರು ವರ್ಷದಿಂದ ಚುನಾಯಿತ ಸದಸ್ಯರಾಗಿದ್ದರೂ ಅಧಿಕಾರವಿಲ್ಲದೆ ಜನರ ಸೇವೆ ಮಾಡಿರುವ ತಾವುಗಳು ಈಗ ಪೂರ್ಣಪ್ರಮಾಣದ ಅಧಿಕಾರವನ್ನು ಅಧ್ಯಕ್ಷ ಉಪಾಧ್ಯಕ್ಷ ಮತ್ತು ಸದಸ್ಯರಿಗೆ ಸರಕಾರ ಕೊಟ್ಟಿದ್ದು ತಮ್ಮ ಅಧಿಕಾರ ಅವದಿಯಲ್ಲಿ ಪಟ್ಟಣದ ಸರ್ವಜನಾಂಗದ ಜನರ ಏಳ್ಗೇಗಾಗಿ ಶ್ರಮಿಸುತ್ತಾ ಬದಲಾವಣೆ ದಿಕ್ಕಿನತ್ತ ಸಾಗಲಿ ಎಂದು ಹಾರೈಸಿದರು.
ಹಿರೇಮಠದ ಮುರುಘೇಂದ್ರ ಮಹಾಸ್ವಾಮಿಗಳು ವೇದಮಂತ್ರ ಪಠಣದೊಂದಿಗೆ ಪೂಜಾ ಕಾರ್ಯಕ್ರಮ ನಡೆಸಿ ನೂತನವಾಗಿ ಆಯ್ಕೇಯಾದ ಅಧ್ಯಕ್ಷ ಚನಮಲ್ಲಪ್ಪ ಗಿಡ್ಡಪ್ಫಗೋಳ ಮತ್ತು ಉಪಾಧ್ಯಕ್ಷರಾದ ಶ್ರಿಮತಿ ರಾಜಮಾ ನಧಾಪ ಹಾಗೂ ಸರ್ವಸದಸ್ಯರ ಹೆಸರಿಗೆ ಕೊಲ್ಹಾರ ಪಟ್ಟಣಕ್ಕೆ ಅಂಟಿರುವ ಕಳಂಕ ದೂರಾಗಿ ರಾಜ್ಯದ ಮಾದರಿ ಪಟ್ಟಣವಾಗಿ ಪ್ರಗತಿಯ ಪಥದತ್ತ ಸಾಗಲಿ ಎಂದು ಸಂಕಲ್ಪ ಮಾಡಿದರು.
ಪ್ರಥಮ ಬಾರಿಗೆ ಅಧ್ಯಕ್ಷರಾಗಿ ಆಯ್ಕೇಯಾದ ಚನಮಲ್ಲಪ್ಪ ಗಿಡ್ಡಪ್ಪಗೋಳ ಉಪಾಧ್ಯಕ್ಷರಾದ ರಾಜಮಾ ನಧಾಪ ಪಂಚಾಯತ ಕಾರ್ಯಾಲಯದಲ್ಲಿರುವ ತಮ್ಮ ತಮ್ಮ ಕೊಠಡಿಗಳಲ್ಲಿ ಪೂಜೆಗೈದು ಸಾಮಾನ್ಯ ಸಭೆಯಲ್ಲಿ ಬಾಗವಹಿಸಿದರು.
ಈ ಸಂದರ್ಭದಲ್ಲಿ ಪಪಂ ಮುಖ್ಯಾಧಿಕಾರಿ ಉಮೇಶ ಚಲವಾದಿ, ಪಪಂ ಸರ್ವ ಸದಸ್ಯರು, ಊರಿನ ಹಿರಿಯರಾದ ಶ್ರಿಶೈಲ ಪತಂಗಿ, ರಪೀಕ ಪಕಾಲಿ, ಎಮ್.ಆರ್. ಕಲಾದಗಿ ಮೋಹಶೀನ ಕಾಖಂಡಕಿ, ದಾದಾ ಗೂಗಿಹಾಳ, ಸಲಿಂ ಅತ್ತಾರ, ದಸರತ್ ಈಟಿ, ಮಲ್ಲು ಹೆರಕಲ್ ಸೇರಿದಂತೆ ಅನೇಕರು ಬಾಗವಹಿಸಿದ್ದರು.

