ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಸುಪ್ರೀಂ ಕೋರ್ಟ್ ಆದೇಶಾನುಸಾರ ಚಿಂಚೋಳಿಯ ಸಿದ್ದಸಿರಿ ಎಥೆನಾಲ್ ಹಾಗೂ ಕಾರ್ಖಾನೆಗೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಕಾರ್ಖಾನೆ ಅಧ್ಯಕ್ಷರು ಹಾಗೂ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ರವರು ಶುಕ್ರವಾರ ನಾಡದೇವತೆ ಮೈಸೂರು ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.
ಚಿಂಚೋಳಿ ತಾಲ್ಲೂಕಿನಲ್ಲಿರುವ ನಮ್ಮ ಸಿದ್ದಸಿರಿ ಕಾರ್ಖಾನೆ ಆರಂಭವಾಗುವುದರಿಂದ ನೂರಾರು ಜನರಿಗೆ ಉದ್ಯೋಗ ಸೃಷ್ಟಿಯಾಗುತ್ತದೆ ಹಾಗು ರೈತರ ಏಳಿಗೆಗೆ ನಾಂದಿಯಾಗುತ್ತದೆ. ಕಾರ್ಖಾನೆ ಸ್ತಗಿತದಿಂದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಬ್ಬು ಬೆಳೆಯುವ ರೈತರು 100 ಕಿ.ಮೀ ಹೆಚ್ಚು ದೂರದ ಕಾರ್ಖಾನೆಗೆ ಕಬ್ಬು ತೆಗೆದುಕೊಂಡು ಹೋಗುವಂತಾಗಿತ್ತು. ಇದರಿಂದ ಗಾಡಿ ಬಾಡಿಗೆ ಹೊರೆ ಆಗುವ ಜೊತೆಗೆ ಸರಿಯಾದ ಸಮಯಕ್ಕೆ ಕಟಾವು ಮಾಡದೆ ಕಬ್ಬು ಒಣಗಿ ಹೋಗುವ ಪರಿಸ್ಥಿತಿ ನಿರ್ಮಾಣ ವಾಗಿತ್ತು. ಹಲವು ರೈತರು ಕಟಾವು ವಿಳಂಬದಿಂದ ಬೇಸತ್ತು ಕಬ್ಬಿಗೆ ಸುಟ್ಟು ಹಾಕಿರುವ ಪ್ರಕರಣಗಳು ನಡೆದಿರುವುದು ಬೇಸರ ಸಂಗತಿಯಾಗಿತ್ತು.
ಅಲ್ಲದೆ, ನಮ್ಮ ಸಿದ್ದಸಿರಿ ಎಥೆನಾಲ್ ಮತ್ತು ಪವರ್ ಘಟಕದಿಂದ ರೈತರಿಗೆ ಅತೀ ಹೆಚ್ಚು ಬೆಲೆ ನೀಡುವ ಏಕೈಕ ಕಾರ್ಖಾನೆಯಾಗಿ ಆ ಭಾಗದಲ್ಲಿ ಹೊರಹೊಮ್ಮಿದಲ್ಲದೆ, ರೈತರಿಗೆ ತಕ್ಷಣವೇ ಕಬ್ಬಿನ ಬಿಲ್ ಪಾವತಿ ಮಾಡಲಾಗುತ್ತಿತ್ತು. ಇದನ್ನು ಸಹಿಸದ ಆ ಪ್ರದೇಶದಲ್ಲಿ ತಮ್ಮ ಸ್ವಂತ ಸಕ್ಕರೆ ಕಾರ್ಖಾನೆ ಹೊಂದಿರುವ ಸಚಿವರೊಬ್ಬರು, ಪರಿಸರ ಖಾತೆಯನ್ನು ಹೊಂದಿದ್ದರಿಂದ ಮಾಲಿನ್ಯ ನಿಯಂತ್ರಣ ಮಂಡಳಿಗೆ ಪ್ರಭಾವ ಬೀರಿ ನಮ್ಮ ಕಾರ್ಖಾನೆ ಪ್ರಾರಂಭಕ್ಕೆ ಅಡತಡೆ ಉಂಟು ಮಾಡಿದಲ್ಲದೆ, ಸುಪ್ರಿಂ ಕೋರ್ಟ್ ದಲ್ಲಿ ದಾವೆ ಹೂಡಿದ್ದರು. ನ್ಯಾಯಾಲಯ ಕೂಡ ಕಾರ್ಖಾನೆಗೆ ಅನುಮತಿ ನೀಡಲು ಆದೇಶ ನೀಡುವ ಮೂಲಕ ಸತ್ಯಕ್ಕೆ ಜಯ ಸಿಕ್ಕಿತ್ತು. ನಂತರವೂ ಕೆಲ ದಿನಗಳ ಕಾಲ ಅನುಮತಿ ನೀಡಲು ವಿಳಂಬ ಮಾಡಿದ್ದರು.
ಇದೀಗ ನಮ್ಮ ಕಾರ್ಖಾನೆಗೆ ಸುಪ್ರೀಂ ಕೋರ್ಟ್ ಆದೇಶಾನುಸಾರ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಿದ್ದರಿಂದ ರೈತರ ಸಮಸ್ಯೆಗೆ ಪರಿಹಾರ ಸಿಕ್ಕಿದಂತಾಗಿದೆ ಎಂದು ತಿಳಿಸಿದ್ದಾರೆ.

