ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಆಧುನಿಕತೆಯಲ್ಲಿ ಮುಳುಗಿದ ಮನುಷ್ಯ ಕೌಟುಂಬಿಕ ಸಂಬಂಧಗಳಿಂದ ದೂರ ಉಳಿಯುತ್ತಿದ್ದಾನೆ. ವಿಭಕ್ತ ಕುಟುಂಬದಿಂದ ಮಾನವೀಯ ಮೌಲ್ಯಗಳು ಮರೆಯುತ್ತಿವೆ. ಸಂಸ್ಕೃತಿ, ಸಂದ್ರಾಯಗಳಿಂದ ಯುವಕ-ಯುವತಿಯರು ವಿಮುಖರಾಗುತ್ತಿದ್ದಾರೆ. ಮಾನಸಿಕ ದುಗುಡ ದುಮ್ಮಾನಗಳಿಂದ ಹೊರಬೇಕಾದರೆ ಸಂಗೀತ, ಸಾಂಸ್ಕೃತಿಕ, ಧಾರ್ಮಿಕ ಆಚರಣೆಗಳಲ್ಲಿ ತೊಡಗಿಕೊಳ್ಳಬೇಕು. ಉತ್ತಮ ಸಂಗೀತ, ಸಾಹಿತ್ಯ ಮತ್ತು ಕಲೆಗಳು ಮನುಷ್ಯನ ನೆಮ್ಮದಿಯ ಜೀವನದ ಸಂಗಾತಿಗಳು ಎಂದು ದರಬಾರ ಕಾಲೇಜಿನ ಉಪನ್ಯಾಸಕ ಹಾಗೂ ಪಂಡಿತ ಡಾ. ವೇದನಿಧಿ ಆಚಾರ್ಯ ಹೇಳಿದರು.
ನಗರದ ಕರ್ನಾಟಕ ಕಲಾ ಸಂಘವು, ಬಿಡಿಈ ಬಾಲಕೀಯರ ಪ.ಪೂ. ಕಾಲೇಜಿನಲ್ಲಿ ಹಮ್ಮಿಕೊಂಡ ಸಾಧಕರ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಇಂದಿನ ಶಿಕ್ಷಣ ಅಂಕಗಳಿಗೆ ಸೀಮಿತವಾಗಿದೆ. ಇಂದು ವಿದ್ಯೆಗೆ ಕೊರತೆಯಿಲ್ಲ. ಆದರೆ ಕೌಟುಂಬಿಕ ಬೆಲೆ ಅರಿತುಕೊಳ್ಳುತ್ತಿಲ್ಲ. ಪರಸ್ಪರ ಪ್ರೀತಿ, ಸಹೋದರತೆ ಭಾವ ಮೂಡಿದಾಗ ಮಾತ್ರ ಶಿಕ್ಷಣಕ್ಕೆ ಬೆಲೆ ಸಿಗುತ್ತದೆ ಎಂದರು.
ಮುಖ್ಯ ಅತಿಥಿಗಳಾಗಿದ್ದ ಡಯಟ್ ಉಪನ್ಯಾಸಕ ನಾರಾಯಣ ಬಾಬಾನಗರ ಮಾತನಾಡಿ, ಕಳೆದ ೩೦ ವರ್ಷಗಳಿಂದ ಯಾವುದೇ ಫಲಾಪೆಕ್ಷೆಯಿಲ್ಲದೆ ಸಮಾಜಮುಖಿ ಕೆಲಸ ಮಾಡುತ್ತಿರುವ ಕರ್ನಾಟಕ ಕಲಾ ಸಂಘದ ಕಾರ್ಯ ಶ್ಲಾಘನೀಯವಾಗಿದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಪ್ರಾಮಾಣಿಕ ಸೇವೆ ಮಾಡಿದ ವ್ಯಕ್ತಿಗಳನ್ನು ಗೌರವಿಸುತ್ತ ಬಂದಿದೆ. ಸಾಹಿತ್ಯ, ಕಲೆ, ಗಮಕ ಕ್ಷೇತ್ರದ ಅನೇಕ ದಿಗ್ಗಜರನ್ನು ವಿಜಯಪುರಕ್ಕೆ ಪರಿಚಯಿಸಿದ ಶ್ರೇಯಸ್ಸು ಕರ್ನಾಟಕ ಕಲಾ ಸಂಘಕ್ಕಿದೆ. ಭಾರತೀಯ ಪರಂಪರೆಯನ್ನು ಪರಿಚಯಿಸಿ ಬೆಳೆಸುತ್ತಿರುವ ಈ ಸಂಘ ನೂರು ಕಾಲ ಸಮಾಜಸೇವೆ ಮಾಡುವಂತಾಗಲಿ ಎಂದು ಹಾರೈಸಿದರು.
ರಾಜ್ಯ ಸರಕಾರದ ಕುಮಾರವ್ಯಾಸ ಪ್ರಶಸ್ತಿ ಪುರಸ್ಕೃತ ಹಿರಿಯ ಗಮಕ ಗಾಯಕಿ ಹಾಗೂ ಹಿಂದೂಸ್ಥಾನಿ ಗಾಯಕಿ ಶಾಂತಾಬಾಯಿ ಕೌತಾಳ ಅಧ್ಯಕ್ಷತೆ ವಹಿಸಿದ್ದರು. ಸಂಘದ ಹಿರಿಯ ಸದಸ್ಯ ರಾಜಶೇಖರ ಕಲ್ಮಠ, ಶ್ರೀತನಯ ಕಾವ್ಯನಾಮದ ಬಳವಂತರಾಯ ಕುಲಕರ್ಣಿ ಕಾರ್ಯಕ್ರಮ ಕುರಿತು ಮಾತನಾಡಿದರು.
ವಾಗ್ದೇವಿ ಗಮಕ ಕಲಾ ಪ್ರಶಸ್ತಿಗೆ ಭಾಜನರಾದ ಹಿರಿಯ ಗಮಕ ವ್ಯಾಖ್ಯಾನಕಾರ ಕಲ್ಯಾಣರಾವ ದೇಶಪಾಂಡೆ ಅವರನ್ನು ಹಾಗೂ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದ ಡಾ. ಸುಭಾಸಚಂದ್ರ ಕನ್ನೂರ ಅವರನ್ನು ಕರ್ನಾಟಕ ಕಲಾ ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಕುಮಾರಿ ರಕ್ಷಿತ ದಿಕ್ಷೀತ ಹಾಗೂ ರಾಧಿಕಾ ದಿಕ್ಷೀತ ಭಕ್ತಿಗೀತೆಗಳಿಗೆ ನೃತ್ಯ ಮಾಡಿದರು. ಸಂಘದ ಸದಸ್ಯ ವಸಂತರಾವ ಕೋರ್ತಿ ಪ್ರಾರ್ಥಿಸಿದರು. ಸಂಘದ ಅಧ್ಯಕ್ಷ ಬಾಬುರಾವ ಕುಲಕರ್ಣಿ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸದಸ್ಯ ಪ್ರಕಾಶ ಇನಾಮದಾರ ಪರಿಚಯಿಸಿದರು. ಪ್ರೊ. ರಾಮಚಂದ್ರ ದಿಕ್ಷೀತ ನಿರೂಪಿಸಿದರು. ಬಿ.ಎಸ್. ಕಳ್ಳಿಮಠ ವಂದಿಸಿದರು.
ಕಾರ್ಯಕ್ರಮದಲ್ಲಿ ಸುಧೀಂದ್ರ ಜಕಾತಿ, ಚಂದ್ರಿಕಾ ಇನಾಮದಾರ,ಶ್ರೀದೇವಿ ಕುಲಕರ್ಣಿ, ಭಾಗೀರಥಿ ಕರಜಗಿ, ಡಿ.ವಿ. ಕುಲಕರ್ಣಿ, ಎಸ್.ಎಲ್. ಕುಲಕರ್ಣಿ, ಯಲಗೂರೇಶ ಕುಲಕರ್ಣಿ, ಗಾಯತ್ರಿ ದಿಕ್ಷೀತ, ನೀಲಾಬಾಯಿ ದಿಕ್ಷೀತ ಸೌರಭ ನ್ಯಾಮಣ್ಣವರ, ಗಿರೀಶ ಕುಲಕರ್ಣಿ, ಶಂಕರ ದಡ್ಡಿ, ಪ್ರೊ. ಜಿ.ಎನ್. ದೇಶಪಾಂಡೆ, ಎಂ.ಪಿ. ಕುಲಕರ್ಣಿ, ಮಯೂರ ತಿಳಗುಳಕರ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.

