ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಮೂಲಭೂತ ಸೌಲಭ್ಯಗಳಿಲ್ಲದೇ ಪರದಾಡುತ್ತಿರುವ ಕೂಡಗಿ ಎನ್‌ಟಿಪಿಸಿ ಕಾರ್ಮಿಕರ ಗೋಳು ಕೇಳದೇ ಇಲ್ಲಿನ ಅಧಿಕಾರಿಗಳು ನಿರ್ಲಕ್ಷ್ಯಭಾವ ತಾಳುತ್ತಿದ್ದಾರೆ ಎಂದು ಎನ್‌ಟಿಪಿಸಿ ಗುತ್ತಿಗೆ ಕಾರ್ಮಿಕರ ಸಂಘದ ಗೌರವಾಧ್ಯಕ್ಷ ಬಸವರಾಜ್ ಆಲೂರ ಆಕ್ರೋಶ ವ್ಯಕ್ತಪಡಿಸಿದರು.
ಕೂಡಗಿ ಎನ್‌ಟಿಪಿಸಿ ಗುತ್ತಿಗೆ ಕಾರ್ಮಿಕರು ಸಮೀಪದ ಖಾಸಗಿ ಹೊಟೇಲ್‌ನಲ್ಲಿ ಬುಧವಾರ ಜರುಗಿಸಿದ ಕುಂದು ಕೊರತೆ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ಕಳೆದ ಜ.೬ ರಂದು ಎನ್‌ಟಿಪಿಸಿ ಪ್ರವೇಶ ದ್ವಾರದೆದುರು ಸಹಸ್ರಾರು ಕಾರ್ಮಿಕರು ತಮಗೆ ಸಿಗಬೇಕಿದ್ದ ಮೂಲಭೂತ ಸೌಲಭ್ಯಗಳ ಕುರಿತು ಉರಿ ಬಿಸಿಲಲ್ಲೇ ಕುಳಿತು ಪ್ರತಿಭಟಿಸಿ ಗಮನ ಸೆಳೆದಿದ್ದರು. ಆಗ ಸ್ಥಾವರದ ಹಿರಿಯ ಅಧಿಕಾರಿಗಳು ಬಂದು ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿಯೇ ಬೇಡಿಕೆಗಳ ಈಡೇರಿಕೆಯ ಭರವಸೆ ನೀಡಿದ್ದರು. ಪ್ರಸ್ತುತ ಒಂದೂವರೆ ತಿಂಗಳು ಗತಿಸುತ್ತ ಬಂದರೂ ನಮ್ಮ ಒಂದೇಒಂದು ಬೇಡಿಕೆಯನ್ನು ಈ ಅಧಿಕಾರಿಗಳು ಈಡೇರಿಸಿಲ್ಲ. ಇದೇರೀತಿಯ ಮೊಂಡುತನವನ್ನು ಎನ್‌ಟಿಪಿಸಿ ಅಧಿಕಾರಿಗಳು ಪ್ರದರ್ಶಿಸುತ್ತ ಹೊರಟರೆ ಕೇಂದ್ರ ಕಾರ್ಮಿಕರ ಇಲಾಖೆ ಅಧಿಕಾರಿಗಳ ಬಳಿ ಶೀಘ್ರದಲ್ಲಿಯೇ ದೂರು ನೀಡುವುದಾಗಿ ಅವರು ಎಚ್ಚರಿಸಿದರು.
ಕಾರ್ಮಿಕರ ಸಂಘದ ಅಧ್ಯಕ್ಷ ಆರೀಫ್ ತಾಳಿಕೋಟಿ ಮಾತನಾಡಿ, ನಮ್ಮ ಕಾರ್ಮಿಕರು ಅಧಿಕಾರಿಗಳು ನಮ್ಮ ಸಮಸ್ಯೆಗೆ ಸ್ಪಂಧಿಸುತ್ತಿಲ್ಲವೆಂದು ಬೇಸರಿಸಿಕೊಳ್ಳಬಾರದು. ನಮ್ಮ ಸಂಘಟನೆಯ ಬಲ ಹೆಚ್ಚಿದಷ್ಟು ಅಧಿಕಾರಿಗಳು ಜಾಗೃತರಾಗುತ್ತಾರೆ. ಮುಂಬರುವ ದಿನಗಳಲ್ಲಿ ಸಂಘಟನೆಗೆ ಇನ್ನಷ್ಟು ಶಕ್ತಿ ತುಂಬುವ ಕೆಲಸ ಮಾಡೋಣ ಎಂದರು. ಸಭೆಯಲ್ಲಿ ಕೆಲವು ಕಾರ್ಮಿಕರು ತಮ್ಮ ಕುಂದು ಕೊರತೆಗಳನ್ನು ವ್ಯಕ್ತಪಡಿಸಿದರು.
ಸಂಘಟನೆಯ ಉಪಾಧ್ಯಕ್ಷ ಹಸನ್ ಚೌರದ, ಪ್ರಧಾನ ಕಾರ್ಯದರ್ಶಿ ಮಹೇಶ ಕೋಲಕಾರ, ಸಂತೋಷ ಮಾಳಿ, ಅಶೋಕ ಖಾನಾಪುರ ಸೇರಿದಂತೆ ನೂರಾರು ಕಾರ್ಮಿಕರು ಸಭೆಯಲ್ಲಿ ಪಾಲ್ಗೊಂಡಿದ್ದರು.
“ಎನ್‌ಟಿಪಿಸಿಯ ಅಧಿಕಾರಿಗಳು ಗುತ್ತಿಗೆ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸದೇ ಅಸಡ್ಡೆತನ ಮುಂದುವರೆಸಿದರೆ ಕೂಡಲೇ ಕೇಂದ್ರ ಕಾರ್ಮಿಕರ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ದೂರು ಸಲ್ಲಿಸಲಾಗುವುದು.”
– ಬಸವರಾಜ್ ಆಲೂರ
ಗೌರವಾಧ್ಯಕ್ಷ, ಗುತ್ತಿಗೆ ಕಾರ್ಮಿಕರ ಸಂಘ, ಎನ್‌ಟಿಪಿಸಿ ಕೂಡಗಿ

