ವಿಜಯಪುರ ಜಿಲ್ಲಾಡಳಿತದಿಂದ ಸಂತಕವಿ ಸರ್ವಜ್ಞ ಜಯಂತಿ ಕಾರ್ಯಕ್ರಮದಲ್ಲಿ ಎಡಿಸಿ ಸೋಮಲಿಂಗ ಗೆಣ್ಣೂರ ಅಭಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನೇರ-ನಿಷ್ಠುರ, ಆದರ್ಶ ವಿಚಾರಗಳನ್ನು ಹಾಗೂ ಸತ್ಯ ನುಡಿಗಳನ್ನು ತ್ರಿಪದಿಗಳ ಮೂಲಕ ಸಾರಿ, ಜನಮಾನಸದಲ್ಲಿ ನೆಲೆನಿಂತ ಕವಿ ಸರ್ವಜ್ಞ ಎಂದು ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಹೇಳಿದರು.
ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದಲ್ಲಿ ಗುರುವಾರ ನಡೆದ ಸಂತ ಕವಿ ಸರ್ವಜ್ಞ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಂಡದನ್ನು, ಅನುಭವಿಸಿದನ್ನು ಕೇವಲ ಮೂರು ಸಾಲುಗಳಲ್ಲಿ ಸರಳ ಹಾಗೂ ಸುಂದರವಾಗಿ ಒಳಿತು ಕೆಡಕುಗಳ ಸಂದೇಶವನ್ನು ತ್ರಿಪದಿಗಳಲ್ಲಿ ಸರ್ವಜ್ಞರು ಈ ಲೋಕಕ್ಕೆ ಸಾರಿದರು.
ಸಕಲ ಸಂಪತ್ತಿನಲ್ಲಿ ವಿದ್ಯೆಯೇ ಶ್ರೇಷ್ಠ ಸಂಪತ್ತು. ವಿದ್ಯೆ ಎಂಬ ಸಂಪತ್ತನ್ನು ದಾರ್ಶನಿಕರ, ವಚನಕಾರರ ಸಾರ ಇಂದಿನ ಯುವ ಜನಾಂಗ ಅರಿತುಕೊಳ್ಳಬೇಕು. ಇಂತಹ ಸತ್ಪುರುಷರು ಸಾರಿದ ಸಂದೇಶ ಅವರ ನುಡಿಗಳನ್ನು ಮಕ್ಕಳಿಗೆ ತಿಳಿಸಿಕೊಡುವ ಮೂಲಕ ಮಕ್ಕಳ ಭವಿಷ್ಯ ಉಜ್ವಲಗೊಳಿಸಬಹುದು ಎಂದು ಅಭಿಪ್ರಾಯ ವ್ಯಕ್ತ ಪಡಿಸಿದರು.
ಉಪನ್ಯಾಸ ನೀಡಿದ ಉಪನ್ಯಾಸಕರಾದ ಪೂಜಾ ಕೆ.ಎಸ್ ಅವರು, ಸರ್ವಜ್ಞರ ತ್ರಿಪದಿಗಳು ಕೇವಲ ಒಂದೇ ಕ್ಷೇತ್ರಕ್ಕೆ ಸಿಮೀತವಾಗಿರದೇ ಸಮಾಜದ ಎಲ್ಲ ಬಗೆಯ ತೊಡಕುಗಳನ್ನು ದಿನ ಬಳಕೆ ನುಡಿಗಳ ಮೂಲಕ ಜನರಿಗೆ ತಿಳಿಸಿದ್ದಾರೆ. ಮೌಢ್ಯತೆಯ ತೊರೆದು, ಕಾಯಕ ಚಿತ್ತರಾಗಿ ಕರ್ಮ ಮಾಡಲು ಸರ್ವಜ್ಞ ತ್ರಿಪದಿಯ ಮೂಲಕ ತಿಳಿಸಿದ್ದಾರೆ. ಮಾತಿನಿಂದಾಗುವ ಕೆಡಕುಗಳ ಸಂದೇಶವನ್ನು ಸಂತ ಕವಿ ಸರ್ವಜ್ಞರು ಜಗಕ್ಕೆ ಸಾರಿದ ಅವರು, ವಿಜ್ಞಾನ, ತಂತ್ರಜ್ಞಾನದ ಯುಗದಲ್ಲೂ ಕೃಷಿಯ ಬಗ್ಗೆ ಸರ್ವಜ್ಞರ ತ್ರಿಪದಿಗಳು ಇಂದಿಗೂ ಪ್ರಸ್ತುತವಾಗಿವೆ ಎಂದರು.
ಪಾಲಿಕೆ ಸದಸ್ಯ ಪ್ರೇಮಾನಂದ ಬಿರಾದಾರ ಹಾಗೂ ನಿವೃತ್ತ ಡಿವೈಎಸ್ ಪಿ ಸೋಮಲಿಂಗ ಕುಂಬಾರ ಮಾತನಾಡಿದರು. ವಿಜಯಪುರ ತಹಶೀಲ್ದಾರ ಪ್ರಶಾಂತ ಚನಗೊಂಡ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂರ್ಭದಲ್ಲಿ ಜಿಲ್ಲಾ ಪಂಚಾಯತ ಯೋಜನಾ ಅಂದಾಜು ಮತ್ತು ಮೌಲ್ಯಮಾಪನ ಅಧಿಕಾರಿ ಎ.ಬಿ.ಅಲ್ಲಾಪುರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಂತೋಷ ಭೋವಿ, ಮಹಾನಗರ ಪಾಲಿಕೆಯ ಉಪ ಆಯುಕ್ತ ನಾರಾಯಣಕರ್, ಸದಾನಂದ ಕುಂಬಾರ, ಅರವಿಂದ ಕುಂಬಾರ, ಸೇರಿದಂತೆ ಇತರರು ಉಪಸ್ಥಿತರಿದ್ದರು.
ಮೆರವಣಿಗೆಗೆ ಚಾಲನೆ
ಸಂತ ಕವಿ ಸರ್ವಜ್ಞರ ಭಾವಚಿತ್ರದ ಮೆರವಣಿಗೆಗೆ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಹಾಗೂ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಂಕರ ಮಾರಿಹಾಳ ಅವರು ನಗರದ ಶ್ರೀ ಸಿದ್ದೇಶ್ವರ ದೇಸ್ಥಾನದ ಆವರಣದಲ್ಲಿ ಚಾಲನೆ ನೀಡಿದರು. ಮೆರವಣಿಗೆಯು ಗಾಂಧಿ ವೃತ್ತ, ಅಂಬೇಡ್ಕರ್ ವೃತ್ತ, ಕನಕದಾಸ ವೃತ್ತ ಮಾರ್ಗವಾಗಿ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರಕ್ಕೆ ತಲುಪಿ ಸಮಾವೇಶಗೊಂಡಿತು. ಈ ಸಂದರ್ಭದಲ್ಲಿ ಎಸ್.ಪಿ.ಕುಂಬಾರ, ದೇವೇಂದ್ರ ಮೀರೆಕರ, ಗಿರೀಶ್ ಕುಲಕರ್ಣಿ, ಭೀಮರಾಯ ಜಿಗಜಿಣಗಿ ಇತರರು ಉಪಸ್ಥಿತರಿದ್ದರು.

