ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಬಾಲ ಕಾರ್ಮಿಕರನ್ನು ದುಡಿಸಿಕೊಳ್ಳುವದು ಶಿಕ್ಷಾರ್ಹ ಅಪರಾಧ. ಬಾಲ ಕಾರ್ಮಿಕರನ್ನು ದುಡಿಸಿಕೊಳ್ಳುವದು ಕಂಡು ಬಂದಲ್ಲಿ ಮುಲಾಜಿಲ್ಲದೇ ಪ್ರಕರಣ ದಾಖಲಿಸಲಾಗುವದು ಎಂದು ಕಾರ್ಮಿಕ ನಿರೀಕ್ಷಕ ಕೆ.ಅಲೀಂ ಹೇಳಿದರು.
ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಬಾಲ ಕಾರ್ಮಿಕ ಮತ್ತು ಕಿಶೋರ ಕಾರ್ಮಿಕರ ನಿರ್ಮೂಲನೆ ಮೂಲಕ ಅಟೋ ಪ್ರಚಾರಕ್ಕೆ ಚಾಲನೆ ನೀಡುವ ಕಾರ್ಯಕ್ರದಲ್ಲಿ ಅವರು ಮಾತನಾಡಿದರು.
೧೪ ವರ್ಷಗಳ ಒಳಗಿನ ಮಕ್ಕಳನ್ನು ಬಾಲ ಕಾರ್ಮಿಕರೆಂದು, ೧೫ ರಿಂದ ೧೮ ವರ್ಷಗಳ ಒಳಗಿನ ಮಕ್ಕಳನ್ನು ಕಿಶೋರ ಕಾರ್ಮಿಕರೆಂದು ಗುರುತಿಸಲಾಗಿದೆ. ಬಾಲ ಕಾರ್ಮಿಕರನ್ನು ದುಡಿಸಿಕೊಳ್ಳುವದು ಸಂಪೂರ್ಣ ಅಪರಾಧವಾದರೆ ಕಿಶೋರ ಕಾರ್ಮಿಕರನ್ನು ಶಾಲಾ ಅವಧಿಯಲ್ಲಿ ದುಡಿಸಿಕೊಳ್ಳುವದು ಅಪರಾಧವಾಗಿದೆ. ಬಾಲ ಕಾರ್ಮಿಕರನ್ನು ದುಡಿಸಿಕೊಂಡ ಅಪರಾಧಕ್ಕೆ ೨೦ರಿಂದ ೫೦ ಸಾವಿರಗಳ ದಂಡ ವಿಧಿಸಿ ಎರಡು ವರ್ಷಗಳ ವರೆಗೆ ಜೈಲು ಶಿಕ್ಷೆ ಕೂಡ ನೀಡಲಾಗುವದು. ಕಿಶೋರ ಕಾರ್ಮಿಕರನ್ನು ದುಡಿಸಿಕೊಳ್ಳುವವರು ಕಿಶೋರ ಕಾರ್ಮಿಕರ ಅವಶ್ಯಕ ದಾಖಲೆಗಳನ್ನು ಲಗತ್ತಿಸಿ ಇಲಾಖೆಗೆ ಮಾಹಿತಿ ನೀಡಿ ನಿಯಮಾನುಸಾರ ಕೆಲಸ ನೀಡಬೇಕಾಗುತ್ತದೆ. ನಿಯಮಗಳಿಗೆ ವಿರುದ್ಧವಾಗಿ ನಡೆದುಕೊಂಡಲ್ಲಿ ಶಿಕ್ಷೆ ಮತ್ತು ದಂಡಕ್ಕೆ ಪಾತ್ರರಾಗುತ್ತಾರೆ ಎಂದರು.
ಕಿರಿಯ ಶ್ರೇಣಿ ಸರ್ಕಾರಿ ಸಹಾಯಕ ಅಭಿಯೋಜಕ ಬಸವರಾಜ ಆಹೇರಿ ಮತ್ತು ನ್ಯಾಯವಾದಿ ಎಸ್.ಬಿ.ಬಿರಾದಾರ ಮಾತನಾಡಿ, ಬಾಲ ಕಾರ್ಮಿಕರನ್ನು ದುಡಿಸಿಕೊಳ್ಳುವವರಿಗೆ ದಂಡ ಮತ್ತು ಶಿಕ್ಷೆ ನೀಡುವದಾಗಿ ಕಾಯ್ದೆ ಇದ್ದರೂ ನಮ್ಮಲ್ಲಿ ಬಾಲ ಕಾರ್ಮಿಕ ಪದ್ಧತಿ ಪಿಡುಗು ಅಂತ್ಯವಾಗದಿರುವದು ಬೇಸರದ ಸಂಗತಿ. ಬಾಲ ಕಾರ್ಮಿಕ ಪ್ರಕರಣಗಳು ಕಂಡು ಬಂದಲ್ಲಿ ಯಾವುದೇ ಪ್ರಭಾವಕ್ಕೆ ಒಳಗಾಗದೇ ಕ್ರಮ ವಹಿಸಿದಲ್ಲಿ ಮಾತ್ರ ಈ ಪದ್ಧತಿ ಕೊನೆಯಾಗಲು ಸಾಧ್ಯ ಎಂದರು.
ಈ ವೇಲೆ ನ್ಯಾಯವಾದಿಗಳಾದ ವಿ.ಸಿ.ಉರಾನ, ಚೇತನ ಶಿವಶಿಂಪಿ, ಎನ್.ಬಿ.ಮುದ್ನಾಳ, ಎಂ.ಸಿ.ಮ್ಯಾಗೇರಿ, ಎಂ.ಬಿ.ಅಸ್ಕಿ, ಕಾರ್ಮಿಕ ಇಲಾಖೆಯ ನೀಲಮ್ಮ ಖೇಡಗಿ, ಡಿ.ಬಿ.ಗುಳಬಾಳ, ಸಿದ್ದು ಮನಗೂಳಿ, ತಾಳಿಕೋಟೆ ಕೋರ್ಟ ಪಿಸಿ ಮಹಮ್ಮದ ರಫೀಕ ಚಪ್ಪರಬಂದ ಸೇರಿದಂತೆ ಪುರಸಭೆ ಸಿಬ್ಬಂದಿಗಳು ಇದ್ದರು.

