ಉದಯರಶ್ಮಿ ದಿನಪತ್ರಿಕೆ
ಕೆಂಭಾವಿ: ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಬೆಂಬಲ ಬೆಲೆಯ ಜೊತೆಗೆ ಪ್ರೋತ್ಸಾಹ ಧನ ನೀಡುವ ಮೂಲಕ ರೈತರ ಪಾಲಿಗೆ ವರದಾನವಾಗಿದೆ ಎಂದು ಪುರಸಭೆ ಅಧ್ಯಕ್ಷ ರಹಿಮಾನ್ ಪಟೇಲ್ ಯಲ್ಗೋಡ್ ಹೇಳಿದರು.
ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಮಂಗಳವಾರ ಪಿಎಸಿಎಸ್ ಕೆಂಭಾವಿ-2 ಸಹಕಾರ ಸಂಘದ ಅಡಿಯಲ್ಲಿ ಆರಂಭಿಸಿದ ಖರೀದಿ ಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು ರೈತರು ತಾವು ಬೆಳೆದ ಫಸಲನ್ನು ದಲ್ಲಾಳಿಗಳಿಗೆ ಮಾರಾಟ ಮಾಡಿ ಮೋಸ ಹೋಗದೆ ತೊಗರಿ ಖರೀದಿ ಕೇಂದ್ರದಲ್ಲಿ ಮಾರಾಟ ಮಾಡುವಂತೆ, ಕೇಂದ್ರ ಸರ್ಕಾರದ ಬೆಂಬಲ ಬೆಲೆ 7550/- ರೂಪಾಯಿ ಹಾಗೂ ರಾಜ್ಯ ಸರ್ಕಾರದ ಪ್ರೋತ್ಸಾಹ ಧನ 450/- ರೂಪಾಯಿ ಯೋಜನೆ ಅಡಿಯಲ್ಲಿ ಪ್ರತಿ ಕ್ವಿಂಟಾಲ್ ಗೆ 8000/- ರೂಪಾಯಿಗೆ ರೈತರು ಬೆಳೆದ ತೊಗರಿಯನ್ನು ಖರೀದಿಸುತ್ತಿದ್ದು. ರೈತರು ಮುಂಚಿತವಾಗಿ ಬಂದು ನೋಂದಣಿ ಮಾಡಿಸಿಕೊಂಡು ಬೆಂಬಲ ಬೆಲೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಸಹಕಾರಿ ಸಂಘದ ಉಪಾಧ್ಯಕ್ಷ ತಿಪ್ಪಣ್ಣ ಡಿ ಯಾಳಗಿ ಮಾತನಾಡಿ ಕರ್ನಾಟಕ ರಾಜ್ಯ ಸಹಕಾರಿ ಮಾರಾಟ ಮಹಾಮಂಡಳಿ ನಿಯಮಿತ ಮತ್ತು ಕೇಂದ್ರ ಸರ್ಕಾರದ ಬೆಂಬಲ ಬೆಲೆ ಹಾಗೂ ರಾಜ್ಯ ಸರ್ಕಾರದ ಪ್ರೋತ್ಸಾಹಧನದ ಮೂಲಕ ಪ್ರತಿ ಎಕರೆಗೆ 4 ಕ್ವಿಂಟಾಲ್ ನಂತೆ ಗರಿಷ್ಠ 40 ಕ್ವಿಂಟಾಲ್ ವರೆಗೆ ಪ್ರತಿ ರೈತರಿಂದ ನೇರವಾಗಿ ಖರೀದಿಸಲಾಗುತ್ತದೆ, ರೈತರು ತಮ್ಮ ಹತ್ತಿರದ ಪಿಎಸಿಎಸ್, ಎಫ್ ಪಿಒ, ಟಿಎಪಿಸಿಎಂಎಸ್ ಗಳಿಗೆ ಭೇಟಿ ನೀಡಿ ನೋಂದಣಿ ಮಾಡಿಸಿಕೊಳ್ಳಬೇಕು ಎಂದರು.
ಸಹಕಾರಿ ಸಂಘದ ಅಧ್ಯಕ್ಷ ಮಡಿವಾಳಪ್ಪಗೌಡ ಪಾಟೀಲ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಹಕಾರಿ ಸಂಘದ ನಿರ್ದೇಶಕರಾದ ಬಾಪುಗೌಡ ಪೋ ಪಾಟೀಲ, ಖಾಜಾಪಟೇಲ್ ಕಾಚೂರ, ಸೋಮಲಿಂಗಪ್ಪ ದೊಡ್ಡಮನಿ, ದೇವಪ್ಪ ಮ್ಯಾಗೇರಿ, ಶಿವಶಂಕರ ಖಾನಾಪುರ, ರಾಮನಗೌಡ ಗೊಗಲ್ ಆಲ್ಹಾಳ, ರಾಘವೇಂದ್ರ ಡಿಗ್ಗಾವಿ, ಚನ್ನಯ್ಯ ಸ್ವಾಮಿ ಹಿರೇಮಠ, ಅರ್ಚಕ ಪ್ರಶಾಂತ್ ಹಿರೇಮಠ ಹಣಮಂತರಾಯ ಯಲಗೋಡ, ಕುಮಾರ ಆರ್ ಭೋವಿ, ಸಂಘದ ಕಾರ್ಯದರ್ಶಿ ರಂಗಪ್ಪ ವಡ್ಡರ, ಶರಣು ಅರಕೇರಾ, ಮಾರುತಿ ಆರ್ ಭೋವಿ, ಸೇರಿದಂತೆ ರೈತರು ಹಾಗೂ ಹಮಾಲರು ಉಪಸ್ಥಿತರಿದ್ದರು.

