ಫೆಬ್ರವರಿ ಮಾಹೆ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳಿಸಲು ಸೂಚನೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ವಿಜಯಪುರ ನಗರ ವ್ಯಾಪ್ತಿಯ ಭೂತನಾಳ ಗ್ರಾಮದ ಹತ್ತಿರ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ನಿರ್ಮಾಣವಾಗಿರುವ ಸೈಕ್ಲಿಂಗ್ ವೆಲೋಡ್ರೊಮ್ ಕಾಮಗಾರಿಯನ್ನು ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಫೆ.೧೭ರಂದು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸೈಕ್ಲಿಂಗ್ ವೆಲೊಡ್ರೊಮ್ ಕಾಮಗಾರಿ ಸಂಪೂರ್ಣ ಪರಿಶೀಲನೆ ನಡೆಸಿದ ಅವರು, ಈ ಮಾಹೆಯ ಅಂತ್ಯಕ್ಕೆ ಪೂರ್ಣಗೊಳಿಸುವಂತೆಯೂ ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರಿಗೆ ಸೂಚನೆ ನೀಡಿದರು.
ಸೈಕ್ಲಿಂಗ್ ವೆಲೋಡ್ರೊಮ್ ಕಾಮಗಾರಿ ಶೇ.೯೫ರಷ್ಟು ಮುಕ್ತಾಯಗೊಂಡಿದ್ದು, ಅಲ್ಲಲ್ಲಿ ಟ್ರ್ಯಾಕ್ ಸಮತಟ್ಟುಗೊಳಿಸುವ ಹಾಗೂ ಕೆಲವು ಕಡೆ ಬಾಕಿ ಇರುವ ಪೇಂಟಿಗ್ ಕಾರ್ಯವನ್ನು ಒಂದು ವಾರದಲ್ಲಿ ಪೂರ್ಣಗೊಳಿಸಬೇಕು ಹಾಗೂ ಸೈಕ್ಲಿಂಗ್ ಫೆಡರೇಶನ್ ಆಫ್ ಇಂಡಿಯಾದ ಅಧಿಕಾರಿಗಳಿಂದ ಪರಿಶೀಲನೆ ನಡೆಸುವ ಸೂಕ್ತ ಕ್ರಮಕ್ಕಾಗಿ ಉಪಸ್ಥಿತರಿದ್ದ ಅಧಿಕಾರಿಗಳಿಗೆ ಸೂಚಿಸಿದರು.
ಅರಣ್ಯ ಇಲಾಖೆಯ ಅಧೀನದಲ್ಲಿರುವ ಜಲ ಮೂಲ (ಬಾವಿ) ಗಳಿಂದ ಸೈಕ್ಲಿಂಗ್ ವೆಲೋಡ್ರೊಮಗೆ ಪೈಪ್‌ಲೈನ್ ಮೂಲಕ ನೀರಿನ ವ್ಯವಸ್ಥೆ ಕಲ್ಪಿಸುವಂತೆಯೂ, ವೆಲೋಡ್ರೊಮ್ ಆವರಣದಲ್ಲಿ ಸಸಿಗಳನ್ನು ನೆಡಲು ಅಗತ್ಯ ಕ್ರಮಕ್ಕಾಗಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ ಅವರು, ಒಂದು ವಾರದ ಕಾಲಾವಧಿಯಲ್ಲಿ ಬಾಕಿ ಇರುವ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸಲು ತಿಳಿಸಿದರು.
ಈ ಸಂದರ್ಭದಲ್ಲಿ ವಿಜಯಪುರ ಉಪವಿಭಾಗಾಧಿಕಾರಿ ಗುರುನಾಥ ದಡ್ಡೆ, ವಿಜಯಪುರ ತಹಶೀಲ್ದಾರ ಪ್ರಶಾಂತ ಚನಗೊಂಡ, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಜಿ.ಎನ್.ಮಲಜಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರಾಜಶೇಖರ್ ದೈವಾಡಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಉಪಸ್ಥಿತರಿದ್ದರು.

