ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಹೆಚ್.ಪಿ.ಸಂದೇಶ್ ಅಭಿಮತ
ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಸಮಾಜದ ಸ್ವಾಸ್ಥ್ಯ ಕಾಪಾಡಲು ಶಿಕ್ಷಣ ಮತ್ತು ಆರೋಗ್ಯ ಇವೆರಡು ಬಹಳ ಮುಖ್ಯ. ಅದರ ಜೊತೆಗೆ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯ ಕೊಡಿಸುವ ಕೆಲಸ ನ್ಯಾಯವಾದಿಗಳು ಮಾಡುವ ಮೂಲಕ ಸಾರ್ವಜನಿಕರು ನ್ಯಾಯಾಂಗದ ಮೇಲೆ ಇಟ್ಟ ವಿಶ್ವಾಸವನ್ನು ಉಳಿಸಿಕೊಳ್ಳಬೇಕು ಎಂದು ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಹೆಚ್.ಪಿ.ಸಂದೇಶ್ ಅವರು ಹೇಳಿದರು.
ಪಟ್ಟಣದ ನ್ಯಾಯಾಲಯದಲ್ಲಿ ಜಿಲ್ಲಾ ನ್ಯಾಯಾಂಗ, ಲೊಕೋಪಯೋಗಿ ಇಲಾಖೆ, ಮತ್ತು ನ್ಯಾಯವಾದಿಗಳ ಸಂಘದ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ನೂತನವಾಗಿ ಸೃಜಿಸಲ್ಪಟ್ಟ ೫ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ನ್ಯಾಯಾಲಯದ, ನ್ಯಾಯಾಲಯದ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಲಾ ಛೇಂರ‍್ಸ್ ಮತ್ತು ಸಹಾಯಕ ಸರ್ಕಾರಿ ಅಭಿಯೋಜಕರ ಕಚೇರಿ ಕಟ್ಟಡಗಳ ಉದ್ಘಾಟನಾ ಸಮಾರಂಭದ ಘನ ಉಪಸ್ಥಿತಿ ವಹಿಸಿ ಅವರು ಮಾತನಾಡಿದರು.
ಸ್ವಾತಂತ್ರ್ಯ ಹೋರಾಟದಲ್ಲಿ ಗಾಂಧೀಜಿಯವರ ನೇತೃತ್ವದಲ್ಲಿ ಸಂಘಟನೆ ಮಾಡಿದಾಗ ಎಷ್ಟೋ ವಕೀಲರು ತಮ್ಮ ವೃತ್ತಿಯನ್ನು ಬಿಟ್ಟು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗಿಯಾಗಿದ್ದರು. ಸ್ವಾತಂತ್ರö್ಯ ಬಂದು ಇಷ್ಟು ವರ್ಷಗಳಾದರೂ ಸ್ವಾತಂತ್ರö್ಯಕ್ಕಾಗಿ ಹೋರಾಡಿದವರ ಆಶಯಗಳಂತೆ ನಾವು ಬದುಕು ನಡೆಸುತ್ತಿದ್ದೀವಾ ಅಂತಾ ಒಮ್ಮೆ ಎಲ್ಲರೂ ಚಿಂತಿಸಬೇಕು. ಜನತೆ ನಮ್ಮ ಬಳಿ ತಮಗೆ ನ್ಯಾಯ ಕೋರಿ ಬಂದಾಗ ನ್ಯಾಯ ಕೊಡಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ದುಡ್ಡಿನ ಹಿಂದೆ ಬೀಳಬಾರದು. ಜನತೆ ನ್ಯಾಯಾಂಗದ ಮೇಲೆ ವಿಶ್ವಾಸ ಕಳೆದುಕೊಂಡಲ್ಲಿ ನ್ಯಾಯಾಂಗ ವ್ಯವಸ್ಥೆ ಇದ್ದರೂ ಇಲ್ಲದಂತಾಗುತ್ತದೆ ಎಂದರು.
ಪ್ರಜಾಪ್ರಭುತ್ವ ರಾಷ್ಟçವನ್ನು ಹೊಂದಿದ ನಾವು ನ್ಯಾಯಾಂಗ ಗಟ್ಟಿಕೊಂಡಾಗ ಮಾತ್ರ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಲು ಎಂಬ ಸತ್ಯವನ್ನು ಅರಿಯಬೇಕು. ನ್ಯಾಯವಾದಿಗಳು ಮತ್ತು ನ್ಯಾಯಾಧೀಶರು ಜನರ ವೇದನೆಯನ್ನು ಆಲಿಸುವವರಾಗಬೇಕು. ಇಲ್ಲದಿದ್ದರೆ ನಾವು ಕಪ್ಪು ಕೋಟು ಧರಿಸಿದ್ದು ಸ್ವಾರ್ಥಕವಾಗೋದಿಲ್ಲ. ಸಮಾಜದ ದನಿಯಾದಾಗ ಮಾತ್ರ ವಕೀಲರ ವೃತ್ತಿಗೆ ಗೌರವ ತಂದು ಕೊಡಲು ಸಾಧ್ಯ ಎಂದರು.
ಮತ್ತೋರ್ವ ರಾಜ್ಯ ಉಚ್ಛ ನ್ಯಾಯಾಲಯದ ನ್ಯಾಯಾಲಯದ ನ್ಯಾಯಾಧೀಶರು ಹಾಗೂ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿಗಳಾದ ಎಂ.ಐ.ಅರುಣ್ ಅವರು ಉದ್ಘಾಟನೆ ನೆರವೇರಿಸಿ ಮಾತನಾಡಿ, ಪ್ರಜಾ ಕಲ್ಯಾಣ ದೇಶದಲ್ಲಿ ಕಾನೂನು ಸುವ್ಯವಸ್ಥೆ ಮತ್ತು ನ್ಯಾಯದಾನ ಪದ್ಧತಿ ಬಹಳ ಬಲಿಷ್ಟವಾಗಿರಬೇಕು. ಇದಾಗಬೇಕಾದರೆ ನ್ಯಾಯಾಲಯಗಳ ಪಾತ್ರ ಬಹಳ ಮುಖ್ಯವಾಗುತ್ತದೆ. ಈ ನಿಟ್ಟಿನಲ್ಲಿ ಜನಸಾಮಾನ್ಯರ ಬಾಗಿಲಿಗೆ ನ್ಯಾಯ ಒದಗಿಸಲು ನ್ಯಾಯಾಲಯಗಳ ವಿಕೇಂದ್ರಿಕರಣಗೊಳಿಸಿ ಅಲ್ಲಲ್ಲಿ ನ್ಯಾಯಾಲಯಗಳನ್ನು ಸ್ಥಾಪಿಸಬೇಕಾಗುತ್ತದೆ. ಹಾಗಾಗಿ ಇಲ್ಲಿ ಜಿಲ್ಲಾ ನ್ಯಾಯಾಲಯವನ್ನು ಸ್ಥಾಪಿಸಲಾಗಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕು. ಇಲ್ಲಿ ನ್ಯಾಯಾಲಯ ಸ್ಥಾಪಿಸಲು ನ್ಯಾಯವಾದಿಗಳ ಸಂಘದ ಅಧ್ಯಕ್ಷ ಶಶಿಕಾಂತ ಮಾಲಗತ್ತಿ ಅವರ ಪಾತ್ರಕ್ಕೆ ನಾನು ಶ್ಲಾಘಿಸುತ್ತೇನೆ ಎಂದರು.
ಕಾನೂನು, ನ್ಯಾಯ, ಮಾನವಹಕ್ಕುಗಳು ಮತ್ತು ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ, ರಾಜ್ಯ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷರು ಹಾಗೂ ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ಮಾತನಾಡಿದರು.
ಇಲ್ಲಿನ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರಾದ ರವೀಂದ್ರಕುಮಾರ ಕಟ್ಟಿಮನಿ, ಕಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರಾದ ಸಂಪತ್ತಕುಮಾರ ಬಳೂಳಗಿಡದ, ನ್ಯಾ.ಸಂಘದ ಉಪಾಧ್ಯಕ್ಷ ಎಚ್.ಜಿ.ನಾಗೋಡ, ಪ್ರ.ಕಾರ್ಯದರ್ಶಿ ಪಿ.ಬಿ.ಗೌಡರ, ಪದಾಧಿಕಾರಿಗಳಾದ ಬಿ.ಪಿ.ಮ್ಯಾಗೇರಿ, ಸಿದ್ದಯ್ಯ ಹಿರೇಮಠ, ಹಿರಿಯ ನ್ಯಾಯವಾದಿಗಳಾದ ಎಂ.ಎಚ್.ಹಾಲಣ್ಣವರ, ಜೆ.ಎ.ಚಿನಿವಾರ, ಎಂ.ಎ.ಮುದ್ದೇಬಿಹಾಳ, ಆರ್.ಬಿ.ಪಾಟೀಲ, ವಾಯ್.ವಿ.ವಡವಡಗಿ, ಎಸ್.ಆರ್.ಸಜ್ಜನ, ಎಂ.ಎಸ್.ಅಮಲ್ಯಾಳ, ಎಸ್.ಎಸ್.ಹೂಗಾರ, ಎಸ್.ಬಿ.ಬಾಚಿಹಾಳ, ಎಂ.ಆರ್.ಪಾಟೀಲ, ನ್ಯಾಯವಾದಿಗಳಾದ ಎಸ್.ಎಂ.ಕಿಣಗಿ, ಚೇತನ ಶಿವಶಿಂಪಿ, ಎಸ್.ಆರ್.ಜೋಗಿ, ಬಸಣ್ಣ ಮುಂದಿನಮನಿ, ಎಲ್.ಆರ್.ನಾಲತವಾಡ, ಯಾಸೀನ ಬಿದರಕುಂದಿ, ಹೋರಾಟಗಾರ ಬಸವರಾಜ ನಂದಿಕೇಶ್ವರಮಠ ಸೇರಿದಂತೆ ಜಿಲ್ಲಾ ಮತ್ತು ಜಿಲ್ಲೆಯ ಎಲ್ಲ ತಾಲೂಕುಗಳ ನ್ಯಾಯಾಧೀಶರು, ನ್ಯಾಯಾಲಯದ ಸಿಬ್ಬಂದಿ ಭಾಗಿಯಾಗಿದ್ದರು. ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶರಾದ ಅನಂತ ನಲವಡೆ ಸ್ವಾಗತಿಸಿದರು. ನ್ಯಾಯವಾದಿಗಳ ಸಂಘದ ಅಧ್ಯಕ್ಷ ಶಶಿಕಾಂತ ಮಾಲಗತ್ತಿ ಪ್ರಸ್ತಾವಿಕವಾಗಿ ಮಾತನಾಡಿದರು. ಹಿರಿಯ ನ್ಯಾಯವಾದಿ ಎನ್.ಆರ್.ಮೊಕಾಶಿ ನಿರೂಪಿಸಿದರು. ಎಂ.ಎಲ್.ಲಿಂಗಸೂರು ವಕೀಲರು ವಂದಿಸಿದರು.
ಭಾವುಕರಾದ ಉಚ್ಛ ನ್ಯಾಯಾಲಯದ ನ್ಯಾಯಾಧೀಶರು
ತಮ್ಮ ಎಲ್.ಎಲ್.ಬಿ ಅಡ್ಮಿಶನ್ ವೇಳೆ ಸಾವಿರ ರೂಪಾಯಿಗಳ ಬಡ್ಡಿಯಂತೆ ಸಾಲ ಪಡೆದು ಅನುಭವಿಸಿದ ಸಂಕಷ್ಟಗಳನ್ನು ಎಲ್ಲರೆದುರು ಬಿಟ್ಟಿಟ್ಟ ಉಚ್ಛ ನ್ಯಾಯಾಲಯದ ನ್ಯಾಯಾಧೀಶರಾದ ಹೆಚ್.ಪಿ.ಸಂದೇಶ್ ಅವರು ನಿಮ್ಮ ದುಡಿಮೆಯಲ್ಲಿ ಕೆಲವಷ್ಟು ಹಣವನ್ನು ಬಡಮಕ್ಕಳಿಗೆ ವಿದ್ಯೆಗಾಗಿ ದಾನ ಮಾಡುವ ಮೂಲಕ ಸಮಾಜಕ್ಕೆ ಒಳಿತು ಮಾಡಿ. ಅಂದಾಗ ಮಾತ್ರ ಮನುಷ್ಯ ಕುಲಕ್ಕೆ ಬೆಲೆ ಬರಲು ಸಾಧ್ಯ ಎಂದು ಭಾವುಕರಾಗಿ ನುಡಿದರು.
“ನಮ್ಮ ಸರ್ಕಾರ ಬಂದ ಮೇಲೆ ಒಟ್ಟು ೧೫೦ ಹೊಸ ನ್ಯಾಯಾಲಯಗಳಿಗೆ ಪ್ರಪೋಸಲ್ ಬಂದಿತ್ತು. ಆ ಪೈಕಿ ೧೧೫ ಹೊಸ ನ್ಯಾಯಾಲಯಗಳನ್ನು ಪ್ರಾರಂಭಿಸಿದ್ದೇವೆ. ಈ ಬಗ್ಗೆ ನಮ್ಮ ಸರ್ಕಾರದ ಮೇಲೆ ನನಗೆ ಹೆಮ್ಮೆ ಇದೆ.”
– ಹೆಚ್.ಕೆ.ಪಾಟೀಲ
ಕಾನೂನು, ನ್ಯಾಯ, ಮಾನವಹಕ್ಕುಗಳು ಮತ್ತು ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಸಚಿವ.
“ತಾಳಿಕೋಟೆಯ ಹೊಸ ನ್ಯಾಯಾಲಯಕ್ಕೆ ಜಾಗೆ ಬೇಕಾಗಿದ್ದರಿಂದ ೨.೫ ಎಕರೆವರೆಗೆ ಜಮೀನನ್ನು ಕೊಡಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಜೊತೆಗೆ ನ್ಯಾಯವಾದಿಗಳ ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸುವೆ.”
– ಸಿ.ಎಸ್.ನಾಡಗೌಡ ಅಪ್ಪಾಜಿ
ರಾಜ್ಯ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷರು ಮತ್ತು ಶಾಸಕರು.

