ಮುದ್ದೇಬಿಹಾಳ: ಕಾಂಗ್ರೆಸ್ ಪಕ್ಷದ ಪ್ರಚಾರದ ವೇಳೆ ಕಲ್ಲು ತೂರಾಟ ನಡೆಸಿದ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಗೋನಾಳ ಎಸ್.ಎಚ್ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.
ಘಟನೆಯಲ್ಲಿ ಗೋನಾಳ ಗ್ರಾಮದ ನಿವಾಸಿ ಶಾಂತಾ ಇಂಡಿ ಎಂಬುವವರಿಗೆ ತಲೆಗೆ ಕಲ್ಲು ಬಡಿದು ಜೋರಾಗಿ ಪೆಟ್ಟಾಗಿದ್ದು, ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿತ್ತು. ೧೪ ಹೊಲಿಗೆಗಳು ಬಿದ್ದಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.
ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಸಿ.ಎಸ್.ನಾಡಗೌಡ ಅಪ್ಪಾಜಿ ಅವರು ಸಾರ್ವಜನಿಕರನ್ನುದ್ದೇಶಿಸಿ ಮಾತನಾಡುವಾಗ ಈ ಘಟನೆ ನಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಈ ಕುರಿತು ತಾಳಿಕೋಟೆ ಪೊಲೀಸ್ ಠಾಣೆಯಲ್ಲಿ ಎಂಟು ಜನರ ವಿರುದ್ಧ ದೂರು ದಾಖಲಾಗಿದ್ದು, ಇಬ್ಬರನ್ನು ವಶಕ್ಕೆ ಪಡೆದ ಪೊಲೀಸರು ಇನ್ನುಳಿದವರ ಬಂಧನಕ್ಕಾಗಿ ತನಿಖೆ ನಡೆಸಿದ್ದಾಗಿ ಮಾಹಿತಿ ನೀಡಿದ್ದಾರೆ.
ಸರ್ಕಾರಿ ಆಸ್ಪತ್ರೆಗೆ ದೌಡಾಯಿಸಿದ ಸಿ.ಎಸ್.ನಾಡಗೌಡರು ಮತ್ತು ಶಾಂತಗೌಡರು :
ಗಾಯಾಳುವನ್ನು ಆಸ್ಪತ್ರೆಗೆ ಸೇರಿಸುತ್ತಿದ್ದಂತೆಯೇ ದೌಡಾಯಿಸಿದ ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಸಿ.ಎಸ್.ನಾಡಗೌಡರು ಮತ್ತು ಮುಖಂಡ ಶಾಂತಗೌಡ ಪಾಟೀಲ ನಡಹಳ್ಳಿ ಅವರು ಗಾಯಾಳುವಿನ ಯೋಗಕ್ಷೇಮ ವಿಚಾರಿಸಿ ಜಿಲ್ಲಾ ಆಸ್ಪತ್ರೆಗೆ ರವಾನಿಸಲು ನೆರವಾದರು.
ಈ ವೇಳೆ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಅವರು, ಈ ಘಟನೆಗೂ ಮೊದಲು ಮೂರ‍್ನಾಲ್ಕು ಕಲ್ಲುಗಳು ಬೇರೆ ಬೇರೆ ಕಡೆಯಿಂದ ತೂರಿ ಬಂದು ಗಾಭರಿಗೊಳ್ಳುವಂತೆ ಮಾಡಿತ್ತು. ಆದರೂ ಸಹಿತ ಇದೇನು ಸಾಮಾನ್ಯವೆಂದು ಭಾವಿಸಿದ್ದೆ. ದೊಡ್ಡದಾದ ಅಂದಾಜು ಒಂದೂವರೆ ಕೆ.ಜಿ ಇರುವ ಕಲ್ಲೊಂದು ನನ್ನ ತಲೆ ಹಿಂಬಾಗದಿAದ ತೂರಿ ಬಂದು ಮುಂದೆ ಕುಳಿತಿದ್ದ ಶಾಂತಾ ಎಂಬ ಮಹಿಳೆಯ ತಲೆಗೆ ಜೋರಾಗಿ ಬಡೆಯಿತು. ವಿಪರೀತ ರಕ್ತ ಸ್ರಾವದಿಂದ ಕುಸಿದು ಬಿದ್ದ ಮಹಿಳೆಗೆ ಅಲ್ಲಿಯೇ ಇದ್ದ ಗ್ರಾಮಸ್ಥರ ಸಹಾಯದಿಂದ ಅಂಬ್ಯೂಲೇನ್ಸ್ ಮೂಲಕ ತಕ್ಷಣವೇ ತಾಲೂಕು ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ವಿಜಯಪುರ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಯಿತು.
ಸೋಲುವ ಭೀತಿಯಿಂದ ಶಾಸಕ ನಡಹಳ್ಳಿ ಪ್ರಚೋದನೆ :ಸಹೋದರ ಆರೋಪ
ಯಾವುದೇ ಗ್ರಾಮಕ್ಕೆ ಹೋದರೂ ಕಾಂಗ್ರೇಸ್ ಪಕ್ಷಕ್ಕೆ ಬೆಂಬಲಿಸುತ್ತಿರುವುದನ್ನು ಸಹಿಸಲಾಗದೇ ಮತ್ತು ಸೋಲುವ ಭೀತಿಯಿಂದ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರು ಮುಖ್ಯವಾಗಿ ನನ್ನನ್ನು ಮತ್ತು ಸಿ.ಎಸ್.ನಾಡಗೌಡ ಅವರನ್ನು ಗುರಿಯಾಗಿಸಿ, ತಮ್ಮ ಹಿಂಬಾಲಕರಿಗೆ ಪ್ರಚೋದನೆ ನೀಡಿ ಇಂತಹ ದುಷ್ಕೃತ್ಯ ನಡೆಸಿದ್ದಾರೆ. ಇವರ ರಾಜಕೀಯ ಜೀವನದಲ್ಲಿ ಹಲವಾರು ಜನರ ಮೇಲೆ ಗೂಂಡಾ ವರ್ತನೆ ತೋರಿ ಅವರ ಮೇಲೆಯೇ ಕೇಸ್ ದಾಖಲಿಸಿದ್ದಾರೆ. ನಮ್ಮ ಮೇಲೆ ಹಲ್ಲೆಗೂ ಯೋಜಿಸಿದ್ದಾರೆ. ಇದಾವುದಕ್ಕೂ ನಾವು ಹೆದರೊಲ್ಲ. ಜನತೆಗೆ ಸಾಮಾಜಿಕ ನ್ಯಾಯ ಒದಗಿಸುವ ಭಾರ ನಮ್ಮ ಮೇಲೆ ಇರುವುದರಿಂದ ಇವರ ಅನೈತಿಕ ರಾಜಕಾರಣದ ವಿರುದ್ಧ ನಮ್ಮ ಹೋರಾಟ ನಿರಂತರವಾಗಿರುತ್ತದೆ ಎಂದು ಶಾಸಕ ನಡಹಳ್ಳಿ ಅವರ ಸಹೋದರ ಶಾಂತಗೌಡ ಪಾಟೀಲ ನಡಹಳ್ಳಿ ಹೇಳಿದರು.
ಶಾಸಕರು ಹತಾಶೆಗೊಂಡಿದ್ದಾರೆ. ಯಾರನ್ನಾದರೂ ಗೂಂಡಾಯಿಸA ಮಾಡೋಕೆ ಬಿಟ್ಟು ಅವರಿಗೆ ಪೊಲೀಸ್ ಭದ್ರತೆ ಕೊಡಿಸೋ ಕೆಲಸ ಮಾಡ್ತಿದ್ದಾರೆ. ಚುನಾವಣೆ ಮಾಡಲು ದಮ್ ಇಲ್ದಿದ್ರೆ ಹಿಂದೆ ಸರಿಯಬೇಕು. ಇದೆಲ್ಲ ಮಾಡಿದ್ರೆ ಇಲ್ಲಿ ಹೆದರೋರು ಯಾರೂ ಇಲ್ಲ.
-ಸಿ.ಎಸ್.ನಾಡಗೌಡ, ಮಾಜಿ ಸಚಿವ ಹಾಗೂ ಕಾಂಗ್ರೇಸ್ ಪಕ್ಷದ ಅಭ್ಯರ್ಥಿ.