ಕಾಂಗ್ರೆಸ್‌ನಲ್ಲಿ ಹೊಸ ನಾಯಕತ್ವ ಸಿದ್ದಗೊಳ್ಳುವವರೆಗೆ ಸಿದ್ದರಾಮಯ್ಯ ಅನಿವಾರ್ಯ | ಸಚಿವ ಸತೀಶ್ ಜಾರಕಿಹೊಳಿ ಅಭಿಮತ
ಬೆಂಗಳೂರು: ಕಾಂಗ್ರೆಸ್‌ನಲ್ಲಿ ಹೊಸ ನಾಯಕತ್ವ ಸಿದ್ದಗೊಳ್ಳುವವರೆಗೆ ಸಿದ್ದರಾಮಯ್ಯ ಅನಿವಾರ್ಯ ಎಂದು ಸಚಿವ ಸತೀಶ್ ಜಾರಕಿಹೊಳಿ ಅಭಿಪ್ರಾಯಪಟ್ಟಿದ್ದಾರೆ. ಬೆಂಗಳೂರಿನಲ್ಲಿ ಶನಿವಾರ ಮಾತನಾಡಿರುವ ಅವರು, ಮುಂದಿನ ಚುನಾವಣೆ ಗೆಲ್ಲಬೇಕು ಅಂದ್ರೆ ಸಿದ್ದರಾಮಯ್ಯ ಬೇಕು ಎಂದು ಹೇಳಿದ್ದಾರೆ. ಈ ಮೂಲಕ ಅಧಿಕಾರ ಹಸ್ತಾಂತರದ ವಿರುದ್ಧವಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಿದ್ದರಾಮಯ್ಯ ಮುಂದಿನ ಚುನಾವಣೆಗೆ ಬೇಕು ಎಂಬ ಕಾಂಗ್ರೆಸ್ ಶಾಸಕ ರಾಯರೆಡ್ಡಿ ಹೇಳಿಕೆ ವಿಚಾರವಾಗಿ ಮಾತನಾಡಿ, ಸಿದ್ದರಾಮಯ್ಯ ನಮಗೆ ಬೇಕೆ ಬೇಕು. ಚುನಾವಣೆ ನಿವೃತ್ತಿ ಆದ್ರೂ ಕೂಡ ರಾಜಕೀಯದಲ್ಲಿ ಇರಬೇಕು. ಮುಂದಿನ ಚುನಾವಣೆ ಗೆಲ್ಲಬೇಕು ಅಂದ್ರೆ ಅವರು ಇರಬೇಕು. ಸಿದ್ದರಾಮಯ್ಯ ಇರಬೇಕು ಎಂಬ ಆಸೆ ಇದೆ, ಹೊಸ ನಾಯಕತ್ವ ತಯಾರಾಗುವರೆಗೆ ಸಿದ್ದರಾಮಯ್ಯ ಅನಿವಾರ್ಯ ಎಂದು ಸತೀಶ್ ಜಾರಕಿಹೊಳಿ ಅವರು ಅಭಿಪ್ರಾಯಪಟ್ಟಿದ್ದಾರೆ.
ನಮ್ಮ ಆಶಯ ಕೂಡ ಅದೆ ಇದೆ. ಚುನಾವಣೆ ನಿವೃತ್ತಿ ಆದ್ರೂ ಸಕ್ರಿಯ ರಾಜಕೀಯದಲ್ಲಿ ಇರಬೇಕು. ಮುಂದಿನ ಚುನಾವಣೆ ಗೆಲ್ಲಬೇಕು ಅಂದ್ರೆ ಸಿದ್ದರಾಮಯ್ಯ ಬೇಕು. ಚುನಾವಣೆ ಗೆಲ್ಲಲು ಅನಕೂಲ ಆಗುತ್ತೆ. ಇನ್ನೊಂದು ಅವಧಿಯವರೆಗೆ ರಾಜಕೀಯ ಅವರು ಇರಬೇಕು ಎಂದು ಹೇಳಿದರು.
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರವಾಗಿ ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಗೊತ್ತಿಲ್ಲ. ಈ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜು ಖರ್ಗೆ ಅವರು ತೀರ್ಮಾನ ಮಾಡ್ತಾರೆ. ಕರ್ನಾಟಕ ಬಗ್ಗೆ ಇನ್ನೂ ಚರ್ಚೆ ಆಗಿಲ್ಲ. ಬೇರೆ ರಾಜ್ಯಗಳ ಚರ್ಚೆ ನಡೆಯುತ್ತಿದೆ. ನಮ್ಮ ರಾಜ್ಯದ ಚರ್ಚೆ ಬಂದಾಗ ಅಭಿಪ್ರಾಯ ಹೇಳುತ್ತೇವೆ ಎಂದು ತಿಳಿಸಿದರು.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ಬದಲಾವಣೆ ವಿಚಾರವಾಗಿ ಇದೇ ವೇಳೆ ಮಾತನಾಡಿದ ಅವರು, ಉಸ್ತುವಾರಿಗಳ ಬದಲಾವಣೆ ಬಗ್ಗೆ ಗೊತ್ತಿಲ್ಲ. ನಮ್ಮ ವ್ಯಾಪ್ತಿಯಲ್ಲಿ ಅದು ಇಲ್ಲ. ಇದನ್ನು ರಾಹುಲ್ ಗಾಂಧಿ ನಿರ್ಧಾರ ಮಾಡ್ತಾರೆ. ಬೇರೆ ರಾಜ್ಯಗಳ ಉಸ್ತುವಾರಿ ಬದಲಾವಣೆ ಆಗಿದೆ. ಸುರ್ಜೇವಾಲ ಈಗ ಇದ್ದಾರೆ, ಅದರ ಬಗ್ಗೆ ಏನು ಹೇಳಲ್ಲ ಎಂದರು.

ಮುಡಾ ಕೇಸ್: ಸಿಎಂ ಪತ್ನಿಗೆ ಲೋಕಾಯುಕ್ತ ಕ್ಲೀನ್ ಚಿಟ್?
ಮೈಸೂರು: 50:50 ಯೋಜನೆಯಡಿ ಮುಡಾದಿಂದ ನಿವೇಶನ ಹಂಚಿಕೆಯಲ್ಲಿ ನಡೆದಿದೆ ಎನ್ನಲಾದ ಹಗರಣದಲ್ಲಿ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ, ಮತ್ತವರ ಪತ್ನಿ ಹಾಗೂ ಸಂಬಂಧಿಕರಿಗೆ ಕ್ಲೀನ್ ಚಿಟ್ ನೀಡಿದ್ದಾರೆ ಎಂದು ವರದಿಯಾಗಿದೆ.
ಕೇಂದ್ರ ಕಚೇರಿಗೆ ಸಲ್ಲಿಸಿದ ಅಂತಿಮ ತನಿಖಾ ವರದಿಯಲ್ಲಿ, ನಿವೇಶನ ಹಂಚಿಕೆಯಲ್ಲಿನ ಲೋಪಗಳಿಗೆ ಮುಡಾ ಅಧಿಕಾರಿಗಳು ಕಾರಣರಾಗಿದ್ದಾರೆ, ಮುಖ್ಯಮಂತ್ರಿ ಅಥವಾ ಅವರ ಪತ್ನಿ ಮತ್ತು ಸಂಬಂಧಿಕರು ಇದರಲ್ಲಿ ಯಾವುದೇ ಪಾತ್ರವಿಲ್ಲ ಎಂದು ಲೋಕಾಯುಕ್ತ ಪೊಲೀಸರು ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಲೇಔಟ್ ಅಭಿವೃದ್ಧಿಪಡಿಸಲು ಕೆಸಾರೆಯಲ್ಲಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರ 3.16 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದ್ದಕ್ಕಾಗಿ ಪರಿಹಾರವಾಗಿ ಮುಡಾ 14 ನಿವೇಶನಗಳನ್ನು ಮಂಜೂರು ಮಾಡಿದ್ದಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ.
ಸಿಎಂ ಪತ್ನಿ ಪಾರ್ವತಿ ಅವರಿಗೆ 14 ನಿವೇಶನಗಳನ್ನು ಮಂಜೂರು ಮಾಡಲು ಯಾವುದೇ ರಾಜಕೀಯ ಒತ್ತಡವಿರಲಿಲ್ಲ ಮತ್ತು ವಿವಿಧ ಹಂತಗಳಲ್ಲಿ ಮುಡಾ ಅಧಿಕಾರಿಗಳು ಅಕ್ರಮಗಳನ್ನು ಮಾಡಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ. ಮೈಸೂರು ಲೋಕಾಯುಕ್ತ ಎಸ್ಪಿ ಉದೇಶ್ ಅವರು 2,500 ಪುಟಗಳ ವರದಿಯನ್ನು ಐಜಿಪಿ ಸುಬ್ರಹ್ಮಣ್ಯೇಶ್ವರ ರಾವ್ ಅವರಿಗೆ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.
ತನಿಖೆಯಲ್ಲಿ 1,000 ಕ್ಕೂ ಹೆಚ್ಚು ನಿವೇಶನಗಳನ್ನು ಮುಡಾ ಅಧಿಕಾರಿಗಳು ಅಕ್ರಮವಾಗಿ ಮಂಜೂರು ಮಾಡಿದ್ದಾರೆ, ಇದರಿಂದಾಗಿ ರಾಜ್ಯ ಬೊಕ್ಕಸಕ್ಕೆ ಭಾರಿ ನಷ್ಟವಾಗಿದೆ ಎಂದು ತಿಳಿದುಬಂದಿದೆ ಎಂದು ಮೂಲಗಳು ತಿಳಿಸಿವೆ. ಸಿ ಎಂ ಪತ್ನಿ ಪಾರ್ವತಿ ಸ್ವಯಂಪ್ರೇರಣೆಯಿಂದ 14 ನಿವೇಶನಗಳನ್ನು ಮುಡಾಗೆ ಹಿಂದಿರುಗಿಸಿದ್ದಾರೆ ಮತ್ತು ಸಿದ್ದರಾಮಯ್ಯ ಅವರು ಭೂ ವರ್ಗಾವಣೆ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದಾರೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ.

