ಶೀಘ್ರದಲ್ಲೇ ಕೆಲವು ರಾಜ್ಯಗಳ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆ | ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾಹಿತಿ
ಕಲಬುರಗಿ: ಈಗಾಗಲೇ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ(ಕೆಪಿಸಿಸಿ) ಅಧ್ಯಕ್ಷ ಸ್ಥಾನಕ್ಕೆ ರಾಜ್ಯ ಕಾಂಗ್ರೆಸ್ ನಾಯಕರು ನಡುವೆ ಪೈಪೋಟಿ ಆರಂಭವಾಗಿದ್ದು, ಈ ಮಧ್ಯೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಬುಧವಾರ ಮಹತ್ವದ ಸುಳಿವು ನೀಡಿದ್ದಾರೆ.
ಕಲಬುರಗಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ ಅವರು, ಶೀಘ್ರದಲ್ಲೇ ಕೆಲವು ರಾಜ್ಯಗಳಲ್ಲಿ ಅಧ್ಯಕ್ಷರ ಬದಲಾವಣೆ ಆಗುತ್ತದೆ. ಒಡಿಶಾದಲ್ಲಿ ಅಧ್ಯಕ್ಷರ ಬದಲಾವಣೆ ಮಾಡಿ ಬಂದಿದ್ದೇನೆ. ಅಲ್ಲಿ ಹಿಂದುಳಿದ ವರ್ಗದವರು ಪಿಸಿಸಿ ಅಧ್ಯಕ್ಷರಾಗಿದ್ದಾರೆ. ಬೇರೆ ರಾಜ್ಯಗಳಲ್ಲೂ ಕೆಲವೇ ದಿನಗಳಲ್ಲಿ ಅಧ್ಯಕ್ಷರ ಬದಲಾವಣೆ ಆಗುತ್ತದೆ ಎಂದರು.
ಇದೇ ವೇಳೆ ರಾಜ್ಯ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆ ಬಗ್ಗೆ ಪ್ರತಿಕ್ರಿಯಿಸಿದ ಖರ್ಗೆ, ಈ ಬಗ್ಗೆ ನಿರ್ದಿಷ್ಟವಾಗಿ ನಾನು ಹೇಳಲು ಸಾಧ್ಯವಾಗುವುದಿಲ್ಲ. ಬಾಕಿ ಉಳಿದ ರಾಜ್ಯಗಳಲ್ಲೂ ಕೆಲವೇ ದಿನಗಳಲ್ಲಿ ಬದಲಾವಣೆ ಆಗುತ್ತದೆ. ಇನ್ನೆರಡು ದಿನಗಳಲ್ಲಿ ಎಲ್ಲವೂ ಸ್ಪಷ್ಟವಾಗಲಿದೆ. ಇನ್ನು ಎಂಟು ದಿನಗಳಲ್ಲಿ ನಮ್ಮಿಂದಲೇ ಪ್ರಕಟಣೆ ಹೊರ ಬೀಳಲಿದೆ ಎಂದು ಸ್ಪಷ್ಟಪಡಿಸಿದರು.
ಇನ್ನು ಸಚಿವರಾದ ಜಿ ಪರಮೇಶ್ವರ, ಸತೀಶ್ ಜಾರಕಿಹೊಳಿ ಭೇಟಿ ಬಗ್ಗೆ ಮಾತನಾಡಿದ ಅವರು, ಸತೀಶ್ ಜಾರಕಿಹೊಳಿ ಭೇಟಿ ದೊಡ್ಡ ಮಾತಾ? ಎಂದು ಪ್ರಶ್ನೆ ಮಾಡಿದರು. ನಾನು ಎಐಸಿಸಿ ಅಧ್ಯಕ್ಷ, ಎಲ್ಲರೂ ಬಂದು ಭೇಟಿ ಮಾಡುತ್ತಾರೆ ಇದು ದೊಡ್ಡ ಮಾತಾ? ನಮ್ಮ ರಾಜ್ಯದವರಿಗೆ ಬೇಗ ಅಪಾಯಿಂಟಮೆಂಟ್ ಸಿಗುತ್ತೆ, ಬಂದವರಿಗೆ ಬೇಡ ಅನ್ನಲು ಆಗುತ್ತಾ? ಪರಮೇಶ್ವರ್ ಬರ್ತಾರೆ, ಡಿಕೆ ಶಿವಕುಮಾರ ಬರ್ತಾರೆ, ಸತೀಶ್ ಜಾರಕಿಹೊಳಿ ಬರ್ತಾರೆ, ಸಿದ್ದರಾಮಯ್ಯ ಫೋನ್ ಮಾಡ್ತಾರೆ ಇದರಲ್ಲಿ ವಿಶೇಷ ಏನಿಲ್ಲ ಎಂದರು.

ಪ್ರಧಾನಿ ಮೋದಿಗೆ ಆಹ್ವಾನವಿರಲಿಲ್ಲ
ಕಲಬುರಗಿ: ಅಮೆರಿಕದಿಂದ ಗಡಿಪಾರು ಮಾಡಲಾದ ಭಾರತೀಯ ವಲಸಿಗರೊಂದಿಗೆ ಅಮೆರಿಕ ಅಮಾನವೀಯವಾಗಿ ನಡೆದುಕೊಂಡ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಧಾನಿ ನರೇಂದ್ರ ಮೋದಿ ತಮ್ಮ ‘ಹಳೆಯ ಸ್ನೇಹಿತ’ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಕರೆ ಮಾಡಿ, ಭಾರತೀಯರನ್ನು ಈ ರೀತಿ ವಾಪಸ್ ಕಳುಹಿಸಬೇಡಿ ಎಂದು ಹೇಳಬೇಕಿತ್ತು ಎಂದು ಬುಧವಾರ ಹೇಳಿದ್ದಾರೆ.
ಪ್ರಧಾನಿ ಮೋದಿ ಅವರು ಬುಧವಾರದಿಂದ ಎರಡು ದಿನಗಳ ಕಾಲ ಅಮೆರಿಕಕ್ಕೆ ಅಧಿಕೃತ ಭೇಟಿ ನೀಡಲಿದ್ದು, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ.
“ಮೋದಿಗೆ ಆರಂಭದಲ್ಲಿ ಅಮೆರಿಕಕ್ಕೆ ಆಹ್ವಾನ ಬಂದಿರಲಿಲ್ಲ. ಆದರೆ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅಮೆರಿಕಕ್ಕೆ ಹೋಗಿ ವ್ಯವಸ್ಥೆ ಮಾಡಿದ್ದಾರೆ. ಅನಂತರವೇ ಮೋದಿಗೆ ಆಹ್ವಾನ ಬಂದಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

