ಲೇಖನ
– ವೀಣಾ ಹೇಮಂತ್ ಗೌಡ ಪಾಟೀಲ್
ಮುಂಡರಗಿ
ಗದಗ ಜಿಲ್ಲೆ
ಉದಯರಶ್ಮಿ ದಿನಪತ್ರಿಕೆ
ಘಟನೆ ಒಂದು. ಬಹುಮಹಡಿ ಕಟ್ಟಡದ ಶಾಲೆಗಳಲ್ಲಿ ದುಬಾರಿ ಫೀಸ್ ತೆತ್ತು ಪ್ರವೇಶ ಪಡೆದಿರುವ ಪಾಲಕರು ಅದರ ಖರ್ಚು ವೆಚ್ಚಗಳನ್ನು ನಿಭಾಯಿಸಲಾಗದೆ ಒದ್ದಾಡುತ್ತಾರೆ. ಶಾಲೆಯ ಇನ್ ಫ್ರಾಸ್ಟ್ರಕ್ಚರ್ ಗೆ ತಕ್ಕಂತೆ ನೂರೆಂಟು ಶುಲ್ಕಗಳನ್ನು ಸಂಗ್ರಹಿಸುವ ಶಾಲೆಯವರು ದುಬಾರಿ ಬೆಲೆಯ ಬ್ರಾಂಡೆಡ್ ಯೂನಿಫಾರ್ಮ್, ಶೂಸ್, ಸ್ಕೂಲ್ ಬ್ಯಾಗ್ ಗಳನ್ನು, ನೋಟ್ ಬುಕ್ ಗಳನ್ನು ತಮ್ಮಲ್ಲಿಯೇ ಖರೀದಿಸಲು ಹೇಳುತ್ತಾರೆ, ಇದರ ಜೊತೆಗೆ ಮುಂಜಾನೆಯ ಬ್ರೇಕ್ ಫಾಸ್ಟ್ ಮತ್ತು ಲಂಚ್ ಗಳನ್ನು ತಮ್ಮಲ್ಲಿಯೇ ಪ್ರೊವೈಡ್ ಮಾಡುತ್ತೇವೆ ಎಂದು ಮತ್ತಷ್ಟು ಹಣವನ್ನು ಸುಲಿಗೆ ಮಾಡುತ್ತಾರೆ.
ಸಾಕಷ್ಟು ಹಣಕಾಸಿನ ಅನುಕೂಲ ಇರುವವರೇ ತಡ ಬಡಾಯಿಸುವಂತಹ ಪರಿಸ್ಥಿತಿ ಇರುವಾಗ, ಹಣಕಾಸಿನ ತೊಂದರೆ ಇರುವವರು ಇಂತಹ ಶಾಲೆಗೆ ತಮ್ಮ ಮಕ್ಕಳನ್ನು ಸೇರಿಸಿದರೆ ಆ ಪಾಲಕರ ಪಾಡೇನು?
ಘಟನೆ 2… ಮುಂಜಾನೆಯಿಂದ ಸಂಜೆಯವರೆಗೆ ಆಫೀಸಿನ ಕೆಲಸಗಳಲ್ಲಿ ವ್ಯಸ್ತರಾಗುವ ಆ ದಂಪತಿಗಳು ಇಳಿ ಸಂಜೆಯ ಹೊತ್ತಿಗೆ ಮನೆ ಸೇರಿ ವಿಶ್ರಾಂತಿ ಪಡೆಯುತ್ತಾರೆ. ವಾರಾಂತ್ಯಗಳಲ್ಲಿ ಸ್ನೇಹಿತರು, ಮೋಜು, ಮಸ್ತಿ, ಪ್ರವಾಸ ಎಂದು ಮನೆಯಲ್ಲಿ ಇರದೇ ಇರುವ ಅವರು ಆಯ್ದುಕೊಂಡಿರುವ ಬಾಡಿಗೆಯ ಮನೆ ಸಾಕಷ್ಟು ದೊಡ್ಡದಾಗಿದ್ದು ಹಲವಾರು ಆಧುನಿಕ ಸವಲತ್ತುಗಳನ್ನು ಹೊಂದಿದೆ. ದಿನದ ಶೇಕಡಾ 80ರಷ್ಟು ಸಮಯವನ್ನು ಮನೆಯಿಂದ ಹೊರಗೆ ಕಳೆಯುವ ಅವರಿಗೆ ತಿಂಗಳ ಮೊದಲ ವಾರದಲ್ಲಿ ಬಾಡಿಗೆ ಕಟ್ಟುವಾಗ ಕುತ್ತಿಗೆಗೆ ಬಂದಂತಹ ಅನುಭವ.. ಕಾರಣ ಅವರು ಆಯ್ದುಕೊಂಡ ಮನೆಯ ಬಾಡಿಗೆ ಅತ್ಯಂತ ದುಬಾರಿ.
ಹೀಗೆ ಹೇಳುತ್ತಾ ಹೋದರೆ ಹತ್ತು ಹಲವು ಘಟನೆಗಳನ್ನು ನಾವು ನೆನಪಿಸಿಕೊಳ್ಳಬಹುದು. ಬೇಕಿದ್ದೋ ಬೇಡದೆಯೋ ಐಷಾರಾಮಿ ಜೀವನ ಶೈಲಿಯನ್ನು ಆಯ್ದುಕೊಳ್ಳುವ ಬಹಳಷ್ಟು ಜನರಿಗೆ ಅದಕ್ಕೆ ತಕ್ಕಂತಹ ಆರ್ಥಿಕ ಸಹಯೋಗ ಇಲ್ಲದೆ ಹೋಗಿ ತಿಂಗಳ ಕೊನೆಯಲ್ಲಿ ಹಣಕ್ಕಾಗಿ ಒದ್ದಾಡಿ ಪರಿತಪಿಸುವುದು ಬಹಳ ಸಾಮಾನ್ಯ ಎಂಬಂತಾಗಿದೆ.
ಕೆಲವೇ ದಶಕಗಳ ಹಿಂದೆ ಇದ್ದುದರಲ್ಲಿಯೇ ಮನೆಯ ಖರ್ಚು ವೆಚ್ಚಗಳು,ಮಕ್ಕಳ ವಿದ್ಯಾಭ್ಯಾಸ, ಮನೆಯ ಹಿರಿಯರ ಆರೋಗ್ಯದ ತಪಾಸಣೆಯ ಖರ್ಚು ಹಬ್ಬಗಳು ಬಂದರೆ ಬಟ್ಟೆ ಬರೆಗಳ ಖರೀದಿಯ ಖರ್ಚು ಹೀಗೆ ಹತ್ತು ಹಲವು ತೊಂದರೆಗಳ ಜೊತೆಯಲ್ಲಿ ಬದುಕು ಸಾಗುತ್ತಿತ್ತು. ಹಿರಿಯರು ಕಟ್ಟಿಸಿದ ಮನೆಯನ್ನೇ ಅಲ್ಲಲ್ಲಿ ರಿಪೇರಿ ಮಾಡಿಸಿ ವರ್ಷಕ್ಕೊಮ್ಮೆ ಸುಣ್ಣ ಬಳಿದರೆ ಮುಗಿದು ಹೋಯಿತು. ಇಲ್ಲವೇ ನಿವೃತ್ತಿಯ ಸಮಯಕ್ಕೆ ಒಂದು ಮನೆಯನ್ನು ಕಟ್ಟಿ ಮಕ್ಕಳ ಮದುವೆ ಮಾಡಿಬಿಟ್ಟರೆ ಜೀವನ ಸಾರ್ಥಕವಾಯಿತು ಎಂಬ ಭಾವ. ಮನೆಯಲ್ಲಿ ನಾಲ್ಕು ಕಬ್ಬಿಣದ, ಕಟ್ಟಿಗೆಯ ಇಲ್ಲವೇ ಬೆತ್ತದ ಕುರ್ಚಿಗಳು ಇದ್ದರೆ ಹೆಚ್ಚು ಅದಕ್ಕೂ ಹೆಚ್ಚು ಜನ ಬಂದರೆ ಚಾಪೆ ದಿಂಬುಗಳೆ ಹಾಸಿ ಹೊದ್ದುಕೊಳ್ಳಲು. ಮನೆಗೆ ಯಾರಾದರೂ ಗಣ್ಯ ಅತಿಥಿಗಳು, ಕನ್ಯಾರ್ಥಿಗಳು ಬಂದರೆ ಯಾರದ್ದೋ ಮನೆಯ ಜಮಖಾನೆ, ಇನ್ಯಾರದ್ದು ಮನೆಯ ದಿಂಬುಗಳು ಮತ್ತಾರದ್ದೋ ಮನೆಯ ತಟ್ಟೆ ಲೋಟಗಳು, ಚಹಾದ ಕಪ್ಪುಗಳು ಅವರ ಅವಶ್ಯಕತೆಯನ್ನು ನೀಗಿಸುತ್ತಿದ್ದವು. ಇನ್ನು ಹೆಣ್ಣು ಮಕ್ಕಳ ಕಾರ್ಯಕ್ರಮವಾದರೆ ಯಾರದ್ದೋ ಸೀರೆ, ಮತ್ತಾರದ್ದೋ ಅಲಂಕಾರ ಸಾಮಗ್ರಿಗಳು, ಬೇರೊಬ್ಬರ ಮನೆಯ ಜುಮುಕಿ ಬೆಂಡೋಲೆಗಳು ಕೊರಳ ಸರಗಳಿಂದ ಅಲಂಕರಿಸಿ ಕಾರ್ಯಕ್ರಮವನ್ನು ಸಾಂಗವಾಗಿಸುತ್ತಿದ್ದರು.
ಬದಲಾದ ಕಾಲಘಟ್ಟದಲ್ಲಿ ಎಲ್ಲರೂ ಆರಂಕಿಯ ಸಂಬಳವನ್ನು ಎಣಿಸುತ್ತಿರುವ ಈ ಸಮಯದಲ್ಲಿ ಕೌಟುಂಬಿಕ ಖರ್ಚು ವೆಚ್ಚಗಳು ಕೂಡ ಏರುತ್ತಿದ್ದು ಹಾಸಿಗೆ ಇದ್ದಷ್ಟು ಕಾಲು ಚಾಚುವ ಪ್ರವೃತ್ತಿ ದೂರವಾಗಿ
ಸಾಲ ಮಾಡಿಯಾದರರೂ ತುಪ್ಪ ತಿನ್ನು ಎಂಬ ಪ್ರವೃತ್ತಿ ಹೆಚ್ಚಾಗುತ್ತಿದೆ. ಅದಕ್ಕೆ ತಕ್ಕಂತೆ ಕ್ರೆಡಿಟ್ ಕಾರ್ಡುಗಳನ್ನು ಕೊಟ್ಟು, ಸಾಕಷ್ಟು ಜಾಹೀರಾತುಗಳ ಮೂಲಕ ಜನರನ್ನು ಸೆಳೆಯುವ, ಬೇಕಿದ್ದೋ ಬೇಡದೆಯೋ ಕಣ್ಣಿಗೆ ಕಂಡದ್ದೆಲ್ಲವನ್ನು ಮನೆಗೆ ತಂದು ಗುಡ್ಡೆ ಹಾಕಿಕೊಳ್ಳುವ ಬಹಳಷ್ಟು ಜನ ತಿಂಗಳ ಕೊನೆಯಲ್ಲಿ ಕೈಯಲ್ಲಿ ಹಣವಿಲ್ಲದೆ ಒದ್ದಾಡುತ್ತಾರೆ. ಅಯ್ಯೋ, ಸುಮ್ಮನೆ ಖರ್ಚು ಮಾಡಿಕೊಂಡೆವಲ್ಲ ಎಂದು ಕಣ್ಣು ಕಣ್ಣು ಬಿಡುವ ಅವರು ಮತ್ತದೇ ಸಾಲದ ಸುಳಿಗೆ ಸಿಲುಕಿ

ಹೊರಬರಲು ಆಶಿಸುತ್ತಾರೆ.
ಅಂತಹವರಿಗೆ ನಮ್ಮ ಹಿರಿಯರು ಹೇಳುವ ಮಾತುಗಳು ಅಫಠ್ಯವೆನಿಸಿದರೂ ಪಾಲಿಸಿದರೆ ಒಳ್ಳೆಯದು ಎಂಬುದು ತಡವಾಗಿಯಾದರೂ ಅರಿವಾಗುತ್ತದೆ. ಅಂಥವರು ಪಾಲಿಸಬೇಕಾದ ಕೆಲವು ನಿಯಮಗಳು ಹೀಗಿವೆ
- ನಿಮ್ಮ ಮಕ್ಕಳನ್ನು ನಿಮಗೆ ಶುಲ್ಕ ಭರಿಸಲು ಸಾಧ್ಯವಾಗುವಂತಹ ಶಾಲೆಗೆ ಭರ್ತಿ ಮಾಡಿ. ದುಬಾರಿ ಶಾಲೆಗಳು ಒಳ್ಳೆಯ ಶಿಕ್ಷಣವನ್ನು ಕೊಡುತ್ತವೆ ಎಂದೇನಿಲ್ಲ. ಒಳ್ಳೆಯ ಗಾಳಿ ಬೆಳಕಿರುವ ಕಟ್ಟಡ ಉತ್ತಮ ವಾತಾವರಣವನ್ನು ಮಾತ್ರ ಕಲ್ಪಿಸಿ ಕೊಡುತ್ತದೆ. ಒಳ್ಳೆಯ ಫಲಿತಾಂಶದ ಗ್ಯಾರಂಟಿಯನ್ನು ಅವರು ಕೊಡುವುದಿಲ್ಲ.
ನಿಮ್ಮ ಆರ್ಥಿಕ ಅನುಕೂಲಕ್ಕೆ ಹೊಂದುವಂತಹ ಮನೆಯನ್ನು ಬಾಡಿಗೆಗೆ ಪಡೆಯಿರಿ. ನಮಗಿರುವ ಆರ್ಥಿಕ ಅನುಕೂಲದಲ್ಲಿಯೇ ಬದುಕಲು ಪ್ರಯತ್ನಿಸಬೇಕು. ಗಳಿಕೆಯ ಒಂದು ಭಾಗವನ್ನು ಕಡ್ಡಾಯವಾಗಿ ಉಳಿಸಬೇಕು. ಮಿತವ್ಯಯವನ್ನು ಬದುಕಿನ ಮಂತ್ರವಾಗಿಸಿಕೊಳ್ಳಬೇಕು. - ಬಹಳಷ್ಟು ಬಾರಿ ಹೆಣ್ಣು ಮಕ್ಕಳು ತಮ್ಮ ಮಕ್ಕಳಿಗಾಗಿ ಡಬ್ಬಕ್ಕೆ ಕಟ್ಟಿ ಕೊಡುವ ತಿಂಡಿಯನ್ನು ಹೋಟೆಲ್ ಗಳಿಂದ ಖರೀದಿಸುತ್ತಾರೆ… ಹೋಟೆಲ್ಗಳಲ್ಲಿ ಖರೀದಿಸಿದ ಆಹಾರಕ್ಕಿಂತ ಮನೆಯಲ್ಲಿನ ಆಹಾರ ಅತ್ಯಂತ ಕಡಿಮೆ ವೆಚ್ಚದಲ್ಲಿ ತಯಾರಿಸಲ್ಪಡುತ್ತದೆ ಮತ್ತು ಹೆಚ್ಚು ಶುದ್ಧ ರುಚಿಕರವಾಗಿ ಇರುತ್ತದೆ. ಆರೋಗ್ಯದ ದೃಷ್ಟಿಯಿಂದಲೂ ಮನೆಯಲ್ಲಿ ತಯಾರಿಸುವ ಆಹಾರ ಒಳ್ಳೆಯದು. ಒಳ್ಳೆಯ ಆರೋಗ್ಯಕರ ಆಹಾರವನ್ನು ಮನೆಯಲ್ಲಿ ತಯಾರಿಸಿ ಕುಟುಂಬದೊಂದಿಗೆ ಸೇವಿಸುವ ಮೂಲಕ ಕೌಟುಂಬಿಕ ಬಾಂಧವ್ಯವನ್ನು ವೃದ್ಧಿಗೊಳಿಸಿ ಮತ್ತು ಆಸ್ಪತ್ರೆಯ ಖರ್ಚನ್ನು ಕೂಡ ಉಳಿಸಿ. ಆಯಾ ಋತುಗಳಲ್ಲಿ ದೊರೆಯುವ ಹಣ್ಣು ಮತ್ತು ತರಕಾರಿಗಳನ್ನು ಸುಲಭ ಬೆಲೆಯಲ್ಲಿ ಖರೀದಿಸಿ ತಂದು ಬಳಸಿ. ದೈಹಿಕ ಮತ್ತು ಆರ್ಥಿಕ ಆರೋಗ್ಯವನ್ನು ಕಾಯ್ದುಕೊಳ್ಳಿ.
- ಯಾರಾದರೂ ಉಚಿತವಾಗಿ ಇಲ್ಲವೇ ಕಂತಿನ ರೂಪದಲ್ಲಿ ಏನನ್ನಾದರೂ ಕೊಡ ಮಾಡುತ್ತಾರೆ ಎಂದರೆ ಅವರಿಗೆ ಲಾಭವಿದೆ ಎಂದರ್ಥವಲ್ಲವೇ? ಸುಲಭ ಕಂತುಗಳಲ್ಲಿ ದೊರೆಯುತ್ತದೆ ಎಂದು ಅತ್ಯಂತ ದುಬಾರಿ ಗೃಹೋಪಯೋಗಿ ವಸ್ತುಗಳನ್ನು ಖರೀದಿಸಿ ತಂದು ನಂತರ ಅವುಗಳ ನಿರ್ವಹಣೆಗೆ ಒದ್ದಾಡಬೇಕೇ?
ಎಷ್ಟೋ ಬಾರಿ ಕಂತು ತೀರುವ ಮುನ್ನವೇ ಆ ವಸ್ತುಗಳು ರಿಪೇರಿಗೆ ಬಂದಾಗ ವಾರಂಟಿ ಅವಧಿಯೂ ಮುಗಿದು, ಹೊಸದನ್ನು ಕೊಳ್ಳಬೇಕಾದ ಪರಿಸ್ಥಿತಿ ಬಂದು ಕೈ ಕೈ ಹಿಸುಕಿಕೊಳ್ಳುವಂತಾಗುತ್ತದೆ. ಆದ್ದರಿಂದ ನಮ್ಮ ಆರ್ಥಿಕ ಅನುಕೂಲವಿದ್ದಷ್ಟೇ ನಾವು ಖರೀದಿಸುವುದು ಉತ್ತಮ. - ಅಕ್ಕ ಪಕ್ಕದ ಮನೆಯವರನ್ನು ಅನುಕರಿಸಬೇಡಿ… ‘ಸರೀಕರಾಕೆ ಸರಿಗೆ ಕಟ್ಟಿಕೊಂಡಿದ್ದರೆ ನೆರೆಮನಿಯಾಕೆ ನೆರಕಿ ಕಟ್ಟಿಕೊಂಡಿದ್ಲು’ ಎಂಬ ಮಾತಿನಂತೆ ನಿಮಗಿಂತ ಹೆಚ್ಚು ಆದಾಯ ಮತ್ತು ಆರ್ಥಿಕ ಸೌಲಭ್ಯಗಳನ್ನು ಹೊಂದಿರುವವರನ್ನು ನೋಡಿ ನೀವು ನಿಮ್ಮ ಬದುಕನ್ನು ರೂಪಿಸಿಕೊಳ್ಳಬೇಡಿ. ಚಾಲ್ತಿಯಲ್ಲಿರುವ ಟ್ರೆಂಡಿಂಗ್ ಬಟ್ಟೆಗಳನ್ನೇ ಖರೀದಿಸಬೇಕು ಎಂಬ ಹಠ ಬೇಡ… ಉದ್ಯಮಗಳು ತಮ್ಮ ವ್ಯಾಪಾರ ವೃದ್ಧಿಗಾಗಿ ಕೊಳ್ಳುಬಾಕತನವನ್ನು ಪ್ರೋತ್ಸಾಹಿಸುತ್ತವೆ, ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು
ಟ್ರೆಂಡ್ ಗಳನ್ನು ಸೃಷ್ಟಿಸುತ್ತವೆ. ನೀವೇ ಓರ್ವ ಟ್ರೆಂಡ್ ಸೆಟ್ಟರ್ ಆಗಿರಿ. ಸ್ವಚ್ಛವಾದ, ನೀಟಾಗಿ ಇಸ್ತ್ರಿ ಮಾಡಿದ ಬಟ್ಟೆಗಳನ್ನು ಧರಿಸಿ ತಲೆಯನ್ನು ಸರಿಯಾಗಿ ಬಾಚಿಕೊಂಡು ನಿಮ್ಮ ಪಾದಕ್ಕೆ ಆರಾಮವೀಯುವ ಪಾದರಕ್ಷೆಗಳನ್ನು ಧರಿಸಿದರೆ ನೀವು ಚೆನ್ನಾಗಿಯೇ ಕಾಣುವಿರಿ.. ಒಳ್ಳೆಯ ಬಟ್ಟೆಗಳು ಮತ್ತು ಪಾದರಕ್ಷೆಗಳನ್ನು ಧರಿಸುವುದು ಚೆನ್ನಾಗಿ ಕಾಣಲು ಮಾತ್ರವಲ್ಲ.. ನಮ್ಮ ಮನಸ್ಸಿನ ಉಲ್ಲಾಸಕ್ಕೆ ಕೂಡ. - ನಿಮ್ಮ ಸ್ನೇಹಿತರ ವಲಯವನ್ನು ಚಿಕ್ಕದಾಗಿಸಿಕೊಳ್ಳಿ, ಪ್ರಜ್ಞಾವಂತ ಸ್ನೇಹಿತರ ಬಳಗ ನಿಮ್ಮದಾಗಿರಲಿ
ಯಾರೊಂದಿಗೂ ಆರ್ಥಿಕ ವಿಷಯಗಳಲ್ಲಿ ಸ್ಪರ್ಧೆಗೆಳಿಯಬೇಡಿ. ಬೇರೆಯವರ ಅಂತಸ್ತನ್ನು ನಿಮ್ಮದರೊಂದಿಗೆ ಹೋಲಿಸಿ ಮನಸ್ಸಿಗೆ ಕಿರಿಕಿರಿ ತಂದುಕೊಳ್ಳಬೇಡಿ. - ಮೈತುಂಬ ಸಾಲ ಮಾಡಿ ದುಬಾರಿ ವಿಲ್ಲಾದಲ್ಲಿ ವಾಸ, ಅತ್ಯಾಧುನಿಕ ಕಾರಿನಲ್ಲಿ ಸವಾರಿ ಮಾಡುವ ಬಹಳಷ್ಟು ಜನ, ನಿಮ್ಮ ಮುಂದೆ ತಮ್ಮ ಜೀವನ ಶೈಲಿಯನ್ನು ಕುರಿತು ಬಡಾಯಿ ಕೊಚ್ಚಿಕೊಂಡರೂ, ರಾತ್ರಿ ಅದೆಷ್ಟೇ ಮೆತ್ತನೆಯ ಹಾಸಿಗೆಯ ಮೇಲೆ ಮಲಗಿದರೂ ಅವರಿಗೆ ನಿದ್ದೆ ಬರುವುದಿಲ್ಲ ಎಂಬ ವಿಷಯವನ್ನು ನಿಮ್ಮಿಂದ ಮುಚ್ಚಿಡುವರು.. ನವಿಲನ್ನು ಕಂಡು ಕೆಂಬೂತ ಪುಕ್ಕ ತೆರೆದಂತೆ ಆಗಬಾರದು.
- ಒಳ್ಳೆಯ ಧಾರ್ಮಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಪ್ರಜ್ಞೆ ಇರುವುದು ಎಲ್ಲಕ್ಕಿಂತ ಮುಖ್ಯ, ನಮ್ಮ ಬದುಕಿನ ಶೈಲಿಯನ್ನು ನಾವೇ ಗುರುತಿಸಲಾಗದಷ್ಟು ಮುಂದೆ ಕೊಂಡೊಯ್ದು ಹಿಂತಿರುಗಿ ನೋಡಿದಾಗ ನಿರಾಶೆ ಆವರಿಸಬಾರದಲ್ಲವೇ?
ಯಶಸ್ಸಿನ, ಆರ್ಥಿಕತೆಯ ತುತ್ತ ತುದಿಯಲ್ಲಿ ನಿಂತು ಬೇರೆಯವರನ್ನು ನೋಡಿದಾಗ ಅವರೆಲ್ಲ ಸಹಜವಾಗಿಯೇ ಕೆಳಗೆ ಕಾಣುತ್ತಾರೆ… ನಮ್ಮವರಿಂದ ನಮ್ಮನ್ನು ದೂರಗೊಳಿಸುವ ಜೀವನ ಶೈಲಿಯಲ್ಲಿ ನಮ್ಮವರನ್ನು ನಾವೇ ಕಳೆದುಕೊಳ್ಳುತ್ತೇವೆ. ಧಾರ್ಮಿಕ ನಂಬಿಕೆಯನ್ನು ಉಳಿಸಿಕೊಂಡು ಬೆಳೆಸಿಕೊಳ್ಳುವ ಮೂಲಕ ಮಾನಸಿಕ ಶಾಂತಿಯನ್ನು ಉಳಿಸಿಕೊಳ್ಳಿ.
ಮಿತವ್ಯಯ ಮಾಡುತ್ತೇನೆ ಎಂದು ಹೆಚ್ಚೆಚ್ಚು ಆಹಾರವನ್ನು ತಯಾರಿಸಿ ಫ್ರಿಜ್ಜಿನಲ್ಲಿಟ್ಟು ಮತ್ತೆ ಮತ್ತೆ ಬಿಸಿ ಮಾಡಿ ಬಳಸುವುದು ಬೇಡ, ಮನೆಗೆ ಬಂದ ಅತಿಥಿಗಳಿಗೆ ಒಂದು ಕಪ್ ಚಹಾ ಕೊಡದಷ್ಟು, ಹಸಿದು ಬಂದವರಿಗೆ ಒಂದು ತುತ್ತು ಅನ್ನ ಹಾಕದಷ್ಟು ಮಿತವ್ಯಯವೂ ಬೇಡ. ಅತ್ಯಂತ ಜೀರ್ಣವಾಗಿರುವ ಬಟ್ಟೆಗಳನ್ನು, ತೂತಾದ ಒಳ ಉಡುಪುಗಳನ್ನು ಧರಿಸಿ ನಿಮ್ಮನ್ನು ನೀವು ಕೀಳರಿಮೆಗೆ ತುತ್ತಾಗಿಸಿಕೊಳ್ಳಬೇಡಿ. ಹೆಣ್ಣುಮಕ್ಕಳು ನಾವೇನು ಮನೆಯಲ್ಲಿ ಇರುತ್ತೇವೆ ಎಂದು ಹಳೆಯ ನೈಟಿಗಳಲ್ಲಿ ನಿಮ್ಮನ್ನು ನೀವು ತೂರಿಸಿಕೊಳ್ಳಬೇಡಿ. ಮಿತವ್ಯಯದ ಅರ್ಥ ಜಿಪುಣತನವಲ್ಲ ಎಂಬ ಸತ್ಯವನ್ನು ಸ್ಪಷ್ಟವಾಗಿ ಅರಿತುಕೊಳ್ಳಿ. - ಉತ್ತಮವಾದ ಆರ್ಥಿಕ ಯೋಜನೆಗಳನ್ನು ರೂಪಿಸಿಕೊಳ್ಳಿ. ನಿಮ್ಮ ಆದಾಯ ಮಿತಿಯನ್ನು ಹೊರತುಪಡಿಸಿ ಹೆಚ್ಚಿನ ಖರ್ಚು ವೆಚ್ಚಗಳನ್ನು ನಿಯಂತ್ರಿಸಿ. ಆರ್ಥಿಕ ಶಿಸ್ತನ್ನು ಬದುಕಿನಲ್ಲಿ ಹೊಂದಿರಿ.
- ಅತಿ ಬೆಲೆ ಬಾಳುವ ಬಟ್ಟೆಗಳನ್ನು ಧರಿಸುವ, ಅತಿ ದೊಡ್ಡ ಮನೆಯಲ್ಲಿ ವಾಸಿಸುವ ದುಬಾರಿ ಕಾರುಗಳಲ್ಲಿ ಓಡಾಡುವ ಜನರಿಗೆ ವರ್ಷದ ವ್ಯಕ್ತಿ ಎಂದು ಪ್ರಶಸ್ತಿಯನ್ನು ನೀಡುವುದಿಲ್ಲ ಎಂಬ ಅಂತಿಮ ಸತ್ಯವನ್ನು ಅರಿತು ನಿಮ್ಮ ಆರ್ಥಿಕ ಆರೋಗ್ಯವನ್ನು ಕಾಪಾಡಿಕೊಳ್ಳಿ.
ಅತಿ ವ್ಯಯ ಅಪಾಯಕ್ಕೆ ದಾರಿ.. ಮಿತವ್ಯಯವನ್ನು ಸಾಧಿಸಿ.
