ಒಳಮೀಸಲಾತಿ, ಐತಿಹಾಸಿಕ ನಿರ್ಣಯ | ಕೇಂದ್ರ ಸಚಿವ ಎಲ್.ಮುರುಗನ್ ಹೇಳಿಕೆ
ವಿಜಯಪುರ: ಸಾಮಾಜಿಕ ನ್ಯಾಯದ ಬದ್ಧತೆಯೊಂದಿಗೆ ನ್ಯಾ.ಸದಾಶಿವ ಆಯೋಗದ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುವ ಮೂಲಕ ರಾಜ್ಯ ಸರ್ಕಾರ ಐತಿಹಾಸಿಕ ನಿರ್ಣಯ ಸ್ವೀಕರಿಸಿದ್ದು, ಪಂ.ದೀನದಯಾಳ ಉಪಾಧ್ಯಾಯರ ಅಂತ್ಯೋದಯದ ಆಶಯವನ್ನು ಸಾಕಾರಗೊಳಿಸಿದೆ ಎಂದು ಕೇಂದ್ರ ಮೀನುಗಾರಿಕೆ, ವಾರ್ತಾ-ಪ್ರಸಾರ ಖಾತೆ ರಾಜ್ಯ ಸಚಿವ ಎಲ್. ಮುರುಗನ್ ಹೇಳಿದರು.
ಶುಕ್ರವಾರ ನಗರದ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಸಾಮಾಜಿಕ ನ್ಯಾಯದ ರಿಯಲ್ ಹೀರೋ ಬಸವರಾಜ ಬೊಮ್ಮಾಯಿ ಅವರ ಸಾಮಾಜಿಕ ನ್ಯಾಯ ಸಾಕಾರಗೊಳಿಸಲು ಬಿಜೆಪಿ ಬದ್ಧವಾಗಿದ್ದು, ಕೇಂದ್ರ ಸಚಿವ ಸಂಪುಟದಲ್ಲಿಯೂ ಸಹ ಮಾದಿಗ ಸಮುದಾಯಕ್ಕೆ ಪ್ರಾತಿನಿಧ್ಯ ದೊರಕಿದೆ ಎಂದರು.
ಬಿಜೆಪಿ ಎಸ್.ಸಿ.ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಮಾತನಾಡಿ, ಬಿಜೆಪಿ ದಲಿತ ಪರವಾದ ಪಕ್ಷವಾಗಿದ್ದು, ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಒಳಮೀಸಲಾತಿಯ ಕೂಗಿಗೆ ಸ್ಪಂದಿಸಿದ್ದು ಬಿಜೆಪಿ. ಜೇನು ಕಡಿಸಿಕೊಂಡು ಜೇನಿನ ಸವಿಯನ್ನು ದಲಿತ ಸಮುದಾಯಗಳಿಗೆ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಉಣಬಡಿಸಿದೆ ಎಂದರು.
ತೆಲಂಗಾಣ-ಆAಧ್ರಪ್ರದೇಶದ ಹಿರಿಯ ಹೋರಾಟಗಾರ ಮಂದಾಕೃಷ್ಣ ಮಾದಿಗ ಮಾತನಾಡಿ, ಬಿಜೆಪಿ ಗೆಲುವಿಗೆ ಮಾದಿಗ ಸಮುದಾಯ ಬೆನ್ನೆಲುಬಾಗಿ ನಿಲ್ಲಲ್ಲಿದ್ದು, ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿಯನ್ನು ಕೇಂದ್ರಕ್ಕೆ ಶಿಫಾರಸ್ಸು ಮಾಡುವ ಮೂಲಕ ದಶಕಗಳ ಮಾದಿಗ ಸಮುದಾಯದ ಕೂಗಿಗೆ ಸ್ಪಂದಿಸಿದೆ. ಕೇಂದ್ರದಲ್ಲಿಯೂ ಬಿಜೆಪಿ ಸರ್ಕಾರವೇ ಇದ್ದು, ಒಳಮೀಸಲಾತಿ ಜಾರಿಗೆ ಬರುವುದಂತೂ ಸತ್ಯ ಎಂದರು.
ನ್ಯಾ.ಸದಾಶಿವ ಆಯೋಗ ವರದಿ ಜಾರಿಗೆ ಕಾಂಗ್ರೆಸ್, ಜೆಡಿಎಸ್ ಯಾವ ಪಕ್ಷಗಳೂ ಸ್ಪಂದನೆ ಮಾಡಿರಲಿಲ್ಲ, ಆದರೆ ಬಿಜೆಪಿ ಪಂ.ದೀನದಯಾಳ ಉಪಾಧ್ಯಾಯರ ಅಂತ್ಯೋದಯದ ಆಶಯದೊಂದಿಗೆ ಒಳಮೀಸಲಾತಿಯನ್ನು ಜಾರಿಗೊಳಿಸಿದೆ ಎಂದು ವಿವರಿಸಿದರು.
ದಲಿತರಲ್ಲಿಯೇ ಅತ್ಯಂತ ಹಿಂದುಳಿದ ಮಾದಿಗ ಸಮುದಾಯ ಶೈಕ್ಷಣಿಕವಾಗಿ, ರಾಜಕೀಯವಾಗಿ ತೀರಾ ಹಿಂದುಳಿದಿದ್ದು, ಈ ಒಳಮೀಸಲಾತಿ ಮೂಲಕ ಸಮುದಾಯ ಪ್ರಗತಿ ಕಾಣಲಿದೆ ಒಳಮೀಸಲಾತಿ ವಿಷಯವಾಗಿ ಬೊಮ್ಮಾಯಿ ನೇತೃತ್ವದ ಬಿಜೆಪಿ ಬದ್ಧತೆ ಪ್ರದರ್ಶಿಸಿದೆ ಎಂದರು.
ರಾಜ್ಯ ಕಾರ್ಯದರ್ಶಿ ವೆಂಕಟೇಶ, ಸಂಸದ ರಮೇಶ ಜಿಗಜಿಣಗಿ, ಬಿಜೆಪಿ ಹಿರಿಯ ಧುರೀಣರಾದ ಮಂದಾಕೃಷ್ಣ ಮಾದಿಗ, ಎಸ್. ವೆಂಕಟೇಶ, ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕುಚಬಾಳ, ಪ್ರಮುಖರಾದ ಡಾ.ಸುರೇಶ ಬಿರಾದಾರ, ಮಲ್ಲಿಕಾರ್ಜುನ ಜೋಗೂರ, ಉಮೇಶ ಕಾರಜೋಳ, ಶಂಕ್ರಪ್ಪ, ವಿವೇಕಾನಂದ ಡಬ್ಬಿ, ಸಂಜಯ ಪಾಟೀಲ ಕನಮಡಿ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

