ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಮೂಲಭೂತ ಸೌಲಭ್ಯ ಕಲ್ಪಿಸುವದು, ವೇತನ ಶ್ರೇಣಿ ನಿಗಧಿಪಡಿಸುವದು, ಸೇವಾ ವಿಷಯಗಳಿಗೆ ಸೌಲಭ್ಯ ಕಲ್ಪಿಸುವದು ಸೇರಿದಂತೆ ವಿವಿಧ ಒಟ್ಟು ೨೩ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪಟ್ಟಣದ ತಹಶೀಲ್ದಾರ ಕಚೇರಿಯ ಆವರಣದಲ್ಲಿ ತಾಲೂಕಿನ ಗ್ರಾಮ ಆಡಳಿತ ಅಧಿಕಾರಿಗಳು ಕೈಗೆ ಕಪ್ಪು ಪಟ್ಟಿ ಧರಿಸಿ ೨ನೇ ಹಂತದ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದರು.
ಈ ವೇಳೆ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘದ ಜಿಲ್ಲಾಧ್ಯಕ್ಷ ಗಂಗಾಧರ ಜೂಲಗುಡ್ಡ ಮಾತನಾಡಿ, ನಮ್ಮ ಸಂಘದ ರಾಜ್ಯಾಧ್ಯಕ್ಷರ ನಿರ್ದೇಶನದ ಮೇರೆಗೆ ರಾಜ್ಯದಾದ್ಯಂತ ೨೩೭ ತಾಲೂಕುಗಳಲ್ಲಿ ಈ ಅನಿರ್ದಿಷ್ಟಾವಧಿ ಹೋರಾಟವನ್ನು ಹಮ್ಮಿಕೊಂಡಿದ್ದೇವೆ. ಕಳೆದ ೨೦೨೪ ರಲ್ಲಿ ೮ದಿನಗಳ ಕಾಲ ರಾಜ್ಯದ್ಯಂತ ಹೋರಾಟವನ್ನು ಹಮ್ಮಿಕೊಂಡಾಗ ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಒಂದು ತಿಂಗಳಲ್ಲಿ ನಮ್ಮ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ್ದರು. ಆದರೆ ಭರವಸೆ ನೀಡಿ ನಾಲ್ಕು ತಿಂಗಳುಗಳು ಕಳೆದರೂ ನಮ್ಮ ಮಹತ್ವದ ಬೇಡಿಕೆಯನ್ನು ಈಡೇರಿಸಿರುವದಿಲ್ಲ. ಕಾರಣ ೨ನೇ ಹಂತದ ಹೋರಾಟವನ್ನು ಹಮ್ಮಿಕೊಂಡಿದ್ದು ನಮ್ಮ ಬೇಡಿಕೆಗಳು ಈಡೇರುವವರೆಗೂ ಈ ಬಾರಿ ನಾವು ಹೋರಾಟದಿಂದ ಹಿಂದೆ ಸರೆಯಲ್ಲ ಎಂದರು.
ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಿಯಾಜ ನಾಯ್ಕೋಡಿ, ತಾಳಿಕೋಟೆ ತಾಲೂಕಾಧ್ಯಕ್ಷ ಶಬ್ಬೀರ ಮುಲ್ಲಾ ಮಾತನಾಡಿ, ಕಚೇರಿ ಸೇರಿದಂತೆ ಮೂಲಭೂತ ಸೌಲಭ್ಯಗಳಿಲ್ಲದೇ ನಾವು ಸಾಕಷ್ಟು ವರ್ಷಗಳ ಕಾಲ ಸೇವೆ ನೀಡುತ್ತ ಬಂದಿದ್ದೇವೆ. ಸಾರ್ವಜನಿಕರಿಗೆ ಸೇವೆ ನೀಡುವಲ್ಲಿ ನಾವು ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಿದ್ದೇವೆ. ಈ ಬಗ್ಗೆ ಹೋರಾಟ ನಡೆಸಿದರೂ ಸರ್ಕಾರ ನಮ್ಮ ಬೇಡಿಕೆಗಳಿಗೆ ಸ್ಪಂದಿಸದಿರುವದು ಬೇಸರ ತಂದಿದೆ. ಹಾಗಾಗಿ ಈ ೨ನೇ ಹಂತದ ಹೋರಾಟ ಆರಂಭಿಸಿದ್ದು ಸರ್ಕಾರ ಯಾವುದೇ ಅಸ್ತçಗಳನ್ನು ಬಳಸಿದರೂ ನಮ್ಮ ಬೇಡಿಕೆ ಈಡೇರಿಸಿದ ಆದೇಶ ನೀಡುವವರೆಗೂ ನಾವು ಹೋರಾಟ ಹಿಂಪಡೆಯಲ್ಲ ಎಂದರು.
ಈ ವೇಳೆ ಮನೋಜ ರಾಠೋಡ, ಸುನೀಲ ರಾಠೋಡ, ಎ.ಎಸ್.ಬಾಬಾನಗರ, ಶ್ರೀನಿವಾಸ ಹುನಗುಂದ, ದೇವರಾಜ ಗುರಿಕಾರ, ರಫೀಕ ಮುಲ್ಲಾ, ಬಿ.ಕೆ.ನಂದಗೊಂಡ, ಎಚ್.ಸಿ.ಕೊರಟು, ಆರತಿ ಬಳವಾಟ, ಅನುಪಮಾ ಪೂಜಾರ, ಗಂಗಮ್ಮ ಕುಂಬಾರ, ಕಾವ್ಯಾ ಮುಲ್ಲಾಳ, ಶಿವಾನಂದ ಅಂಗಡಿ, ಕಿಶೋರ ಹಜೇರಿ, ಶೈಲಶ್ರೀ ಕಂಚಾಣಿ, ಜಯರಾಮ ಚೌವ್ಹಾಣ, ಈರಪ್ಪ ಪತ್ತಾರ, ಪವನ ಬೆಂಕಿ, ಶೃತಿ ಡಂಬಳ, ಫಕಿರಪ್ಪ ಮಾದಣ್ಣವರ, ಶಾಂತಪ್ಪಗೌಡ ಬಿರಾದಾರ, ಪ್ರಶಾಂತ ಶಾಂತಗೇರಿ ಇದ್ದರು.

