ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಇಂದಿನ ದಿನಮಾನಗಳಲ್ಲಿ ದುಪ್ಪಟ್ಟು ಬೆಲೆಯುಳ್ಳ ಭೂಮಿಯನ್ನು ಸರಕಾರಿ ಶಿಕ್ಷಣ ಕೇಂದ್ರ ತೆರೆಯಲು ದಾನವಾಗಿ ಕೊಡುವ ಮನುಷ್ಯರು ಸಿಗುವದು ಅಪರೂಪ. ಅಂತಹ ಅಪರೂಪದ ವ್ಯಕ್ತಿ ಶರಣಬಸಪ್ಪ ಲಗಳಿ ಅವರು ಮುಳವಾಡ ಗ್ರಾಮದಲ್ಲಿ ಸರಕಾರಿ ಪಿಯು ಕಾಲೇಜು ಪ್ರಾರಂಭವಾಗಲು ಕಾರಣೀಕರ್ತರಾಗಿರುವದು ನಾವು ಮರೆಯಬಾರದು ಎಂದು ಸಚಿವ ಶಿವಾನಂದ ಎಸ್ ಪಾಟೀಲ ಹೇಳಿದರು.
ತಾಲೂಕಿನ ಮುಳವಾಡ ಗ್ರಾಮದಲ್ಲಿ ೨೦೨೨-೨೩ ನೇ ಸಾಲಿನ ಶಿಕ್ಷಣ ಇಲಾಖೆಯ ವಿವೇಕ (ಪದವಿಪೂರ್ವ) ಯೋಜನೆಯಡಿ ಶ್ರೀಮತಿ ನಿರ್ಮಲಾಬಾಯಿ ಶರಣಬಸಪ್ಪ ಲಗಳಿ ಸರಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ನೂತನವಾಗಿ ನಿರ್ಮಿಸಿರುವ ಎರಡು ಕೊಠಡಿಗಳನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
೫೦.೧೦ ರೂ. ಲಕ್ಷ ವೆಚ್ಚದಲ್ಲಿ ಕೊಠಡಿಗಳನ್ನು ನಿರ್ಮಿಸಲಾಗಿದ್ದು, ಈ ಸರ್ಕಾರಿ ಪದವಿಪೂರ್ವ ಕಾಲೇಜಿಗೆ ಇನ್ನೂ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು, ವಿಜ್ಞಾನ ವಿಭಾಗಕ್ಕೆ ಹೆಚ್ಚುವರಿ ವಿಜ್ಞಾನ ಕೊಠಡಿಗಳನ್ನು ನಿರ್ಮಿಸಲು ಹಾಗೂ ತಾಲೂಕು ಪಂಚಾಯತಿ ಅನುದಾನದಲ್ಲಿ ವಿಜ್ಞಾನ ವಿಭಾಗಕ್ಕೆ ಅವಶ್ಯವಿರುವ ಪೀಠೋಪಕರಣಗಳನ್ನು ಪಡೆಯಲು ಅಗತ್ಯ ಅನುದಾನ ಮಂಜೂರು ಮಾಡಲಾಗುವುದು ಎಂದು ಹೇಳಿದರು.
ಸರಕಾರಿ ಶಿಕ್ಷಣ ಸೌಲಭ್ಯ ಪಡೆದಿರುವ ಮುಳವಾಡ ಪಿಯು ಕಾಲೇಜಿನ ಹೆಸರು ಜಿಲ್ಲೆಯಲ್ಲಿಯೇ ಮಾದರಿಯಾಗಿತ್ತು ಅಂತಹ ಚಿಂತನೆಯೊಂದಿಗೆ ಸದಾವಕಾಲ ವಿಜ್ಞಾನ ವಿಭಾಗದ ಈ ಪದವಿ ಪೂರ್ವ ಕಾಲೇಜಿನ ಅಧಿಕಾರಿ ವರ್ಗದ ಆಡಳಿತ ಮಂಡಳಿ ಶಾಲಾ ಸುಧಾರಣಾ ಸಮೀತಿ, ಗ್ರಾಮಸ್ಥರ ಸಹಕಾರದೊಂದಿಗೆ ಪಾಠ ಭೋದನೆ ಆಟೋಟಗಳಲ್ಲಿ ಇನ್ನಿತರ ಚಟುವಟಿಕಗಳಲ್ಲಿ ರಾಜ್ಯಕ್ಕೆ ಮಾದರಿಯಾಗಿ ಗುರುತಿಸುವಂತಾಗಲಿ ಎಂದು ಸಚಿವರು ಸೂಚಣೆ ಕೊಟ್ಟರು.
ಸಾನಿದ್ಯವನ್ನು ಶ್ರೀ ಷ.ಬ್ರ.ಅಭಿನವ ಸಂಗನಬಸವ ಶಿವಾಚಾರ್ಯ ಮಹಾಸ್ವಾವಿಗಳು ವಹಿಸಿದ್ದರು. ಹಣಮಂತ ಬ.ಕಳಸಗೊಂಡ, ಡಾ|| ಸಿ.ಕೆ.ಹೊಸಮನಿ, ಸಂಗನಗೌಡ ಮ.ಪಾಟೀಲ, ಗುತ್ತಿಗೆದಾರ ಶರಣು ಎಸ್. ಆಲೂರ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.

