ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ವಿದ್ಯಾರ್ಥಿಯೊಳಗೆ ಹುದುಗಿದ ಪ್ರತಿಭೆಯನ್ನು ಹೊರತೆಗೆಯುವುದೇ ಗುರುವಿನ ಧ್ಯೇಯವಾಗಿರಬೇಕು. ಹಾಗಾದಲ್ಲಿ ಮಾತ್ರ ಅದ್ಭುತ ಪ್ರತಿಭೆಗಳು ಹೊರಬರಲು ಸಾಧ್ಯವಾಗುತ್ತದೆ” ಎಂದು ವಿಜಯಪುರ ಷಣ್ಮುಖಾರೂಢ ಮಠದ ಅಭಿನವ ಸಿದ್ಧಾರೂಢ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಮುಳವಾಡ ಗ್ರಾಮದ ಶ್ರೀ ಮಲ್ಲಿಕಾರ್ಜುನ ಪ್ರೌಢ ಶಾಲೆಯ ೧೯೯೨-೯೫ನೇ ಸಾಲಿನ ವಿದ್ಯಾರ್ಥಿಗಳು ಶನಿವಾರ ಹಮ್ಮಿಕೊಂಡ ಗುರುವಂದನಾ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ, “ಮುಳವಾಡ ಗ್ರಾಮ ಸಾಹಿತಿಗಳ ತವರೂರಾಗಿದೆ. ಪ.ಗು.ಸಿದ್ದಾಪೂರ, ಜಂಬುನಾಥ ಕಂಚ್ಯಾಣಿ, ಕಾಡಣ್ಣ ಹೊಸಟ್ಟಿಯವರಂತಹ ಸಾಹಿತಿಗಳನ್ನು ಕೊಟ್ಟ ಶಾಲೆಯ ವಿದ್ಯಾರ್ಥಿಗಳು ಹಲವು ಸಾಧನೆ ಮಾಡಿದ್ದು ಹೆಮ್ಮೆ ಎಣಿಸುತ್ತದೆ” ಎಂದರು.
ಶಾಲಾ ವಿದ್ಯಾರ್ಥಿಗಳಿಂದ ಗುರುವಂದನೆ ಸ್ವೀಕರಿಸಿದ ನಿವೃತ್ತ ಶಿಕ್ಷಕರಾದ ಕಾಡಣ್ಣ ಹೊಸಟ್ಟಿ, ಜಂಬುನಾಥ ಕಂಚ್ಯಾಣಿ, ಪ.ಗು.ಸಿದ್ದಾಪೂರ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, “ಮೊಬೈಲ್ ಬಳಕೆ ಅಪಾಯಕಾರಿ, ಗುರು ಶಿಷ್ಯರ ನಡುವಿ ಅವಿನಾಭಾವ ಸಂಬಂಧ ಇರಬೇಕು. ಶಿಕ್ಷಕರು ಮಕ್ಕಳಿಗೆ ಶಿಕ್ಷಣದೊಂದಿಗೆ ಸಂಸ್ಕಾರವನ್ನು ಕೊಡಬೇಕು” ಎಂಬ ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಗುರುಗಳಾದ ಜೆ ಎಸ್ ಕಂಚ್ಯಾಣಿ, ಕೆ ಜಿ ಹೊಸಟ್ಟಿ, ಪ.ಗು.ಸಿದ್ದಾಪೂರ, ಅನಸೂಯಾ ರಡ್ಡೇರ, ರತ್ನಾಬಾಯಿ ಪಾಟೀಲ, ಶಾರದಾ ಬಿದರಿ, ಭಾರತಿ ಪಾಟೀಲ, ಬೋಧಕೇತರ ಸಿಬ್ಬಂದಿಗಳಾದ ಕೆ ಜಿ ಪತ್ತಾರ, ಆರ್ ಬಿ ನಿಡೋಣಿ, ಯಲ್ಲವ್ವ ಮುಳವಾಡ, ಸುಪ್ರೀತ ಹಿಪ್ಪರಗಿ ಮುಂತಾದವರರನ್ನು ಸನ್ಮಾನಿಸಿ ಗೌರವಿಸಲಾಯಿತು. ಹಳೆಯ ವಿದ್ಯಾರ್ಥಿಗಳಾದ ಅಕ್ಕಮಹಾದೇವಿ ಮಠದ, ಮಲ್ಲಮ್ಮ ಶಿರೋಳ, ರೇಣುಕಾ ಬಡಿಗೇರ ಅವರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಇದಕ್ಕೂ ಮೊದಲು ಶಿಕ್ಷಕ ಸಾಹಿತಿಗಳಾದ ಪ.ಗು.ಸಿದ್ದಾಪೂರ, ಜಂಬುನಾಥ ಕಂಚ್ಯಾಣಿ ಹಾಗೂ ಕಾಡಣ್ಣ ಹೊಸಟ್ಟಿ ಅವರನ್ನು ಗ್ರಾಮದ ಮಹಾದೇವ ದೇವಸ್ಥಾನದಿಂದ ಮಲ್ಲಿಕಾರ್ಜುನ ಹೈಸ್ಕೂಲ್ ವರೆಗೆ ಸಾರೋಟದಲ್ಲಿ ಭಾಜಾ ಭಜಂತ್ರಿಯೊಂದಿಗೆ ಹಳೆಯ ವಿದ್ಯಾರ್ಥಿಗಳು ಮೆರವಣಿಗೆ ಮೂಲಕ ಕರೆತಂದರು. ಶಾಲಾ ಆವರಣದಲ್ಲಿ ಆಗಮಿಸುತ್ತಿದ್ದಂತೆಯೇ ಪೂಜ್ಯರ ಹಾಗೂ ಕಲಿಸಿದ ಗುರುಗಳ ಪಾದಕ್ಕೆ ಪುಷ್ಪಾರ್ಪಣೆ ಮಾಡಿ ನಮಿಸಿ ಸ್ವಾಗತಿಸಿಕೊಂಡಿದ್ದು ವಿಶೇಷವಾಗಿತ್ತು.
ಶಾಲೆಯ ಹಳೆಯ ವಿದ್ಯಾರ್ಥಿ, ಪತ್ರಕರ್ತ ಚಂದ್ರಶೇಖರ ಚಿನಕೇಕರ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯೂ ಗುರುವಂದನೆ ಮಾಡುವ ಸಾಮಾಜಿಕ ಜವಾಬ್ದಾರಿಯಾಗಿದೆ. ಗುರುವಿನ ಋಣ ತೀರಿಸುವ ಅವಕಾಶವಾಗಿದೆ” ಎಂದರು.
ಷಣ್ಮುಖಾರೂಢ ಮಠದ ಅಭಿನವ ಸಿದ್ದಾರೂಢ ಸ್ವಾಮೀಜಿ, ಸಚ್ಚಿದಾನಂದ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಲ್ಲಿಕಾರ್ಜುನ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಎ ಎಸ್ ಐಹೊಳ್ಳಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮುಳವಾಡ ಗ್ರಾಮ ಪಂಚಾಯಿತಿ ಅಧ್ಯಕ್ಷ ಹನುಮಂತ ಕಳಸಗೊಂಡ, ಶಾಲೆಯ ಮುಖ್ಯ ಶಿಕ್ಷಕಿ ಎನ್ ಹೆಚ್ ದಳವಾಯಿ ಮುಂತಾದವರು ಉಪಸ್ಥಿತರಿದ್ದರು.
ಪರಶುರಾಮ ಕಸನಕ್ಕಿ ಸ್ವಾಗತಿಸಿದರು. ಶಿವಾನಂದ ಹೊಸಟ್ಟಿ ನಿರೂಪಿಸಿದರು. ವಿ ಆರ್ ಪಾಟೀಲ ವಂದಿಸಿದರು.

