06 ತಾಲೂಕು ವ್ಯಾಪ್ತಿಯಲ್ಲಿ 300ಕ್ಕೂ ಅಧಿಕ ಕೀಲೋಮೀಟರ್ ಸಂಚಾರ | ಡಿಸಿ ದಾನಮ್ಮನವರ ಶ್ಲಾಘನೆ
ವಿಜಯಪುರ: ಜಿಲ್ಲಾ ಸ್ವೀಪ್ ಸಮಿತಿ ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ವಿಜಯಪುರ ಇವರ ಸಹಯೋಗದಲ್ಲಿ ಮತದಾನ ಜಾಗೃತಿ ಹಮ್ಮಿಕೊಂಡ ಸೈಕಲ್ ಜಾಥಾ ಅಭಿಯಾನ ಇಂದು ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸಮಾರೋಪಗೊಂಡಿತು.
ಮತದಾನ ಜಾಗೃತಿಗಾಗಿ ಹಮ್ಮಿಕೊಂಡ ಸೈಕಲ್ ಜಾಥಾವು ಜಿಲ್ಲೆಯ ವಿವಿಧ ತಾಲೂಕುಗಳಿಗೆ ಮತ್ತು ಗ್ರಾಮಗಳಲ್ಲಿ ಸಂಚರಿಸಿ ಮತದಾನ ಜಾಗೃತಿ ಮೂಡಿಸಿತು. ಈ ಸೈಕಲ್ ಜಾಥಾ ಬಸವನ ಬಾಗೇವಾಡಿ, ನಿಡಗುಂದಿ, ಮುದ್ದೇಬಿಹಾಳ, ತಾಳಿಕೋಟೆ, ಸಿಂದಗಿ ಮತ್ತು ದೇವರ ಹಿಪ್ಪರಗಿ ತಾಲೂಕುಗಳಲ್ಲಿ ಸಂಚರಿಸಿ, ಜಿಲ್ಲೆಯ ೩೦ಕ್ಕೂ ಹೆಚ್ಚಿನ ಸ್ಥಳದಲ್ಲಿ ಕಾರ್ಯಕ್ರಮ ನಡೆಸಿ ಮತದಾರರಲ್ಲಿ ಮತದಾನ ಕುರಿತು ಜಾಗೃತಿ ಮೂಡಿಸಿ ಇಂದು ನಗರದಲ್ಲಿ ಮುಕ್ತಾಯವಾಯಿತು.
ನಗರದ ಜಿಲ್ಲಾ ಪಂಚಾಯತ್ ಆವರಣದಲ್ಲಿ ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳಾದ ವಿಜಯಮಹಾಂತೇಶ ದಾನಮ್ಮನವರ ಅವರು ಎಲ್ಲ ಸೈಕಲಿಸ್ಟ್ಗಳಿಗೆ ಸನ್ಮಾನಿಸಿ, ಈ ಸಂದರ್ಭದಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇಂತಹ ಬಿಸಿಲಿನ ತಾಪಮಾನದಲ್ಲಿ ಸೈಕಲ್ ಮೇಲ್ ತೆರಳಿ ಮತದಾರರ ಗಮನ ಸೆಳೆದು, ಮತದಾನಕ್ಕೆ ಪ್ರೇರೆಪಿಸಿರುವ ಕಾರ್ಯ ಅತ್ಯಂತ ಶ್ಲಾಘನೀಯವಾಗಿದೆ., 06 ತಾಲೂಕು ವ್ಯಾಪ್ತಿಯಲ್ಲಿ 300ಕ್ಕೂ ಅಧಿಕ ಕೀಲೋಮೀಟರ್ ಸಂಚರಿಸಿದ್ದು ನಿಜಕ್ಕೂ ಅಭಿನಂದನಾರ್ಹವಾಗಿದೆ. ಈ ಅಭಿಯಾನದಲ್ಲಿ ಭಾಗವಹಿಸಿದ್ದ ಎಲ್ಲರಿಗೂ ಜಿಲ್ಲಾಡಳಿತ ಮತ್ತು ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಅಭಿನಂದನೆಗಳನ್ನು ತಿಳಿಸಿದರು.
ಮತದಾನ ಜಾಗೃತಿ ಸೈಕಲ್ ಜಾಥಾದಲ್ಲಿ ಸೈಕ್ಲಿಸ್ಟ್ಗಳಾದ ವಿರೇಶ ತೋಟದ, ಅಭಿಷೇಕ ಗೌಂಡಿ, ಚಿದಾನಂದ ತಳವಾರ, ಲಾಲಸಾಬ ಪಿಂಜಾರ, ಹೀರಣ್ಣ ಜಮಾದಾರ, ಮಹೇಶ ಹಾದಿಮನಿ, ಕಾಶಿನಾಥ ಗುಳಬಾಳ ಸೈಕಲ್ ಸವಾರ ಮಾಡಿ ವಿವಿಧೆಡೆ ಜಾಗೃತಿ ಮೂಡಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸ್ವೀಪ್ ಸಮಿತಿ ಸದಸ್ಯರಾದ ಎ.ಬಿ.ಅಲ್ಲಾಪುರ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಜಿಲ್ಲಾ ಉಪಾಧ್ಯಕ್ಷರಾದ ಸುರೇಶ ಶೆಡಶ್ಯಾಳ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಜಿಲ್ಲಾ ಸಂಘಟಕರಾದ ರಾಜಶೇಖರ ಖೇಡಗಿ ಸೇರಿದಂತೆ ಜಿಲ್ಲಾ ಪಂಚಾಯತಿ ಅಧಿಕಾರಿಗಳು, ಸಿಬ್ಬಂದಿಗಳು, ಸೈಕಲ್ ಜಾಥಾದಲ್ಲಿ ಪಾಲ್ಗೊಂಡ ಸೈಕಲಿಸ್ಟ್ಗಳು ಉಪಸ್ಥಿತರಿದ್ದರು.