ವಿಜಯಪುರ: ಬಬಲೇಶ್ವರ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಘೋಷಣೆ ಆಗುತ್ತಲೇ ಅಭ್ಯರ್ಥಿ ವಿಜುಗೌಡ ಪಾಟೀಲ ಅವರ ಮಕ್ಕಳು ಪಿಸ್ತೂಲ್ ಮೂಲಕ ಗುಂಡು ಹಾರಿಸಿ ವಿಜಯೋತ್ಸವ ತಮ್ಮ ಸಂಸ್ಕೃತಿ ಏನೆಂದು ತೋರಿಸಿದ್ದಾರೆ. ಆದರೆ ಇದೀಗ ಮೊಸಳೆ ಕಣ್ಣೀರು ಹಾಕಿ ಬಿಜೆಪಿ ಅಭ್ಯರ್ಥಿ ಮತ ಯಾಚನೆಗೆ ಮುಂದಾಗಿದ್ದಾರೆ. ಕ್ಷೇತ್ರವನ್ನು ಬಿಹಾರ ಮಾದರಿ ರೂಪಿಸಲು ಹೊರಟಿರುವ ಇಂಥವರನ್ನು ಜನರು ಆಯ್ಕೆ ಮಾಡಿಕೊಳ್ಳುವ ಅಗತ್ಯವಿದೆಯೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ವಕ್ತಾರ ಸಂಗಮೇಶ ಬಬಲೇಶ್ವರ ಹಾಗೂ ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಜು ಆಲಗೂರ ಪ್ರಶ್ನಿಸಿದರು.
ಗುರುವಾರ ನಗರದಲ್ಲಿ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ವಿಜುಗೌಡ ಪಾಟೀಲ ಅವರ ಪುತ್ರ ಸಮರ್ಥ ಅವರು ಗಾಳಿಯಲ್ಲಿ ಗುಂಡು ಹಾರಿಸಿದ ಹಾಗೂ ವಾಹನದಲ್ಲಿ ಕುಳಿತು ಗುಂಡು ಹಾರಿಸಿದ ವಿಡಿಯೋ ಬಿಡುಗಡೆ ಮಾಡಿ ಮಾತನಾಡಿದ ಅವರು, ವಿಜುಗೌಡ ಅವರ ಮಗ ತಮ್ಮ ತಂದೆಗೆ ಟಿಕೆಟ್ ಘೋಷಣೆ ಆಗುತ್ತಲೇ ಗಾಳಿಯಲ್ಲಿ ಗುಂಡು ಹಾರಿಸಿ ವಿಜಯೋತ್ಸವ ಆಚರಿಸಿದ್ದಾರೆ. ಅವರ ಈ ವರ್ತನೆ ಬಿಹಾರ ಮಾದರಿ ರೂಪಿಸುವುದನ್ನು ಹೇಳುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಇದರ ಮೂಲಕ ಬಿಜೆಪಿ ಅಭ್ಯರ್ಥಿಯ ತೆರೆಯ ಹಿಂದಿನ ಮುಖವಾಡ ಬಯಲಾಗಿದೆ. ದೌರ್ಜನ್ಯ ಮನಸ್ಥಿತಿಯ ಇಂಥ ವ್ಯಕ್ತಿಗೆ ಬಿಜೆಪಿ ಟಿಕೆಟ್ ನೀಡಿದೆ. ಬಿಜೆಪಿ ರಾಜ್ಯಾಧ್ಯಕ್ಷರು ಈ ಬಗ್ಗೆ ವಿವರಣೆ ನೀಡಬೇಕು ಎಂದು ಆಗ್ರಹಿಸಿದರು.
ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿ ವಿಜುಗೌಡ ಪಾಟೀಲ ವೇದಿಕೆ ಮೇಲೆ ಕಣ್ಣೀರು ಹಾಕಿ ಮತ ಕೇಳುತ್ತಿದ್ದಾರೆ. ದಶಕಗಳ ಹಿಂದೆ ವಿಜುಗೌಡ ಕೂಡ ಇದೇ ರೀತಿ ಗುಂಡು ಹಾರಿಸುವ ವರ್ತನೆ ತೋರಿದ್ದರು. ಇದೀಗ ವಿಜುಗೌಡ ಜೊತೆ ಅವರ ಮಕ್ಕಳೂ ಸೇರಿ ಬಬಲೇಶ್ವರ ಕ್ಷೇತ್ರವನ್ನು ಬಿಹಾರ ಮಾದರಿಯಲ್ಲಿ ರೂಪಿಸಲು ಮುಂದಾಗಿದ್ದಾರೆ ಎಂದು ದೂರಿದರು.
ಚುನಾವಣೆಯ ಈ ಹಂತದಲ್ಲಿ ಪಿಸ್ತೂಲ್ ಸೇರಿದಂತೆ ಶಸ್ತ್ರಾಸ್ತ್ರ ಹೊಂದಲು ಅವಕಾಶ ಇಲ್ಲ. ಈ ಬಗ್ಗೆ ನಾವೇನೂ ದೂರು ನೀಡುವುದಿಲ್ಲ. ಪೊಲೀಸ್ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳು ಸ್ವಯಂ ಪ್ರೇರಿತರಾಗಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment