ಮಾಜಿ ವಿಧಾನ ಪರಿಷತ್ ಸದಸ್ಯ ಅರುಣ್ ಶಹಾಪುರ ಸ್ವಾಗತ
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಕೇಂದ್ರ ಬಜೆಟ್ ೨೦೨೫ರಲ್ಲಿ ಶಿಕ್ಷಣ ಕ್ಷೇತ್ರಕ್ಕೆ ೧,೨೮,೬೫೦ ಕೋಟಿ ಮೀಸಲಿಟ್ಟಿರುವುದನ್ನು ಮಾಜಿ ವಿಧಾನ ಪರಿಷತ್ ಸದಸ್ಯ ಅರುಣ್ ಶಹಾಪುರ ಸ್ವಾಗತಿಸಿದ್ದಾರೆ.
ಇದು ಹಿಂದಿನ ವರ್ಷಕ್ಕಿಂತ ೬.೬೫% ಹೆಚ್ಚಾಗಿದೆ ಎಂದಿದ್ದಾರೆ.
ಶಿಕ್ಷಣ ಮೂಲಸೌಕರ್ಯವನ್ನು ವಿಸ್ತರಿಸುವ, ಡಿಜಿಟಲ್ ಶಿಕ್ಷಣವನ್ನು ಉತ್ತೇಜಿಸುವ, ಸಂಶೋಧನೆ ಮತ್ತು ಆವಿಷ್ಕಾರವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಈ ಬಜೆಟ್ ಒಂದು ಪ್ರಮುಖ ಹೆಜ್ಜೆ ಎಂದು ಅರುಣ್ ಶಹಾಪುರ ಹೇಳಿದ್ದಾರೆ.
ಪ್ರಧಾನಮಂತ್ರಿ ಶ್ರೀ ಯೋಜನೆಗೆ ೭,೫೦೦ ಕೋಟಿ, ಪ್ರಧಾನಮಂತ್ರಿ ಪೋಷಣ ಯೋಜನೆಗೆ ೧೨,೫೦೦ಕೋಟಿ ಮತ್ತು ಉನ್ನತ ಶಿಕ್ಷಣ ಕ್ಷೇತ್ರಕ್ಕೆ ೫೦,೦೭೭.೯೫ ಕೋಟಿ ಬಜೆಟ್‌ನಲ್ಲಿ ಹಂಚಿಕೆ ಮಾಡಿರುವುದು ಸಕಾರಾತ್ಮಕ ಎಂದು ಅರುಣ್ ಶಹಾಪುರ ಮಾಜಿ ಎಂಎಲ್‌ಸಿ ವಿವರಿಸಿದ್ದಾರೆ.
ಇದರೊಂದಿಗೆ ದೇಶದ ೫ ಐಐಟಿಗಳಲ್ಲಿ ೬,೫೦೦ ಹೊಸ ಸೀಟುಗಳು, ಮುಂದಿನ ೫ ವರ್ಷಗಳಲ್ಲಿ ವೈದ್ಯಕೀಯ ಕಾಲೇಜುಗಳಲ್ಲಿ ೭೫,೦೦೦ ಹೊಸ ಸೀಟುಗಳು, ೫೦,೦೦೦ ಅಟಲ್ ಟಿಂಕರಿಂಗ್ ಲ್ಯಾಬ್‌ಗಳು ಮತ್ತು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ನಲ್ಲಿ ಸೆಂಟರ್ ಆಫ್ ಎಕ್ಸಲೆನ್ಸ್ ಸ್ಥಾಪನೆ ಮುಂತಾದ ಘೋಷಣೆಗಳು ಭವಿಷ್ಯದ ಪ್ರಮುಖ ಹೆಜ್ಜೆಗಳಾಗಿವೆ. ಸಂಶೋಧನೆ ಮತ್ತು ಆವಿಷ್ಕಾರವನ್ನು ಉತ್ತೇಜಿಸಲು ಸರ್ಕಾರದಿಂದ ೧೦,೦೦೦ ಹೊಸ ಪಿಎಂ ಸಂಶೋಧನಾ ಫೆಲೋಶಿಪ್ (ಪಿಎಂಆರ್‌ಎಫ್ ಯೋಜನೆ), ಜಾಗತಿಕ ತಜ್ಞರ ಸಹಭಾಗಿತ್ವದಲ್ಲಿ ಕೌಶಲ್ಯಕ್ಕಾಗಿ ೫ರಾಷ್ಟ್ರೀಯ ಶ್ರೇಷ್ಠ ಕೇಂದ್ರಗಳು ಮತ್ತು ಖಾಸಗಿ ವಲಯ-ಚಾಲಿತ ಸಂಶೋಧನೆ, ಅಭಿವೃದ್ಧಿ ಮತ್ತು ನಾವೀನ್ಯತೆಗಾಗಿ ೨೦,೦೦೦ಕೋಟಿಗಳನ್ನು ಒದಗಿಸಲಾಗಿದೆ ಎಂದು ಹೇಳಿದ್ದು ಶ್ಲಾಘನೀಯವಾಗಿದೆ. ಪಿಎಂ ಇಂಟರ್ನ್ಶಿಪ್ ಯೋಜನೆಯ ಹೆಚ್ಚಳವು ಯುವಕರಿಗೆ ಕೆಲಸದ ಅನುಭವವನ್ನು ಪಡೆಯಲು ಸಹಾಯ ಮಾಡುತ್ತದೆ ಮತ್ತು ಭಾರತ್‌ನೆಟ್ ಯೋಜನೆಯಡಿಯಲ್ಲಿ ಗ್ರಾಮೀಣ ಸರ್ಕಾರಿ ಶಾಲೆಗಳಲ್ಲಿ ಬ್ರಾಡ್‌ಬ್ಯಾಂಡ್ ಸಂಪರ್ಕವು ಡಿಜಿಟಲ್ ಶಿಕ್ಷಣವನ್ನು ಉತ್ತೇಜಿಸುತ್ತದೆ. ಶಿಕ್ಷಣ ಮತ್ತು ಸಂಶೋಧನೆಗೆ ಹೆಚ್ಚಿನ ಬೆಂಬಲ ನೀಡಲು, ಶಿಕ್ಷಕರ ತರಬೇತಿಯನ್ನು ಸುಧಾರಿಸಲು ಮತ್ತು ಡಿಜಿಟಲ್ ಶಿಕ್ಷಣವನ್ನು ವಿಸ್ತರಿಸಲು ಶಿಕ್ಷಣ ಬಜೆಟ್ ಅನ್ನು ಜಿಡಿಪಿಯ ೬%ಗೆ ಹೆಚ್ಚಿಸುವ ಅಗತ್ಯವಿದೆ ಎಂದು ಶಹಾಪೂರ ಹೇಳಿದರು.