ಜಿಲ್ಲಾ ಪಂಚಾಯತಿ ಆವರಣ ಹಸಿರುಕರಣ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಜಿಪಂ ಸಿಇಓ ರಿಷಿ ಆನಂದ ನಿರ್ಧಾರ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಪ್ರತಿಯೊಂದು ಹಂತದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ಅರಣ್ಯ ಇಲಾಖೆಗಳ ಸಹಯೋಗದಲ್ಲಿ ಜಿಲ್ಲೆಯಾದ್ಯಂತ ಅರಣ್ಯೀಕರಣ ಹಾಗೂ ಹಸಿರುಕರಣಕ್ಕೆ ಹೆಚ್ಚು ಒತ್ತು ನೀಡಿದ್ದರ ಪರಿಣಾಮ ಪ್ರಸ್ತುತ ವರ್ಷದಲ್ಲಿ ಉತ್ತಮ “ವಾಯು ಗುಣಮಟ್ಟದ ಸೂಚ್ಯಂಕ”ದಲ್ಲಿ ದೇಶದಲ್ಲಿಯೇ ವಿಜಯಪುರ ಜಿಲ್ಲೆ ೩ನೇ ಸ್ಥಾನ ಪಡೆದಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ ಹೇಳಿದರು.
ನಗರದ ಜಿಲ್ಲಾ ಪಂಚಾಯತಿಯ ಆವರಣದಲ್ಲಿ ಶನಿವಾರ ಆಯೋಜಿಸಿದ್ದ “ಜಿಲ್ಲಾ ಪಂಚಾಯತಿ ಆವರಣ ಹಸಿರುಕರಣ” ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸ್ವಚ್ಛತೆ ಹಾಗೂ ಹಸಿರುಕರಣಕ್ಕೆ ಇನ್ನೂ ಹೆಚ್ಚಿನ ಮಟ್ಟದ ಆದ್ಯತೆ ನೀಡಲಾಗುತ್ತಿದ್ದು, ಜಿಲ್ಲಾ ಪಂಚಾಯತಿಯಲ್ಲಿಯೂ ಸಹ ಹಸಿರೀಕರಣ ಹಾಗೂ ಸ್ವಚ್ಛತೆಯ ವಿನೂತನ ಪರಿಕಲ್ಪನೆ ಕೈಗೆತ್ತಿಕೊಳ್ಳಲಾಗಿದೆ. ಇದಕ್ಕೆ ಪೂರಕವಾಗಿ ಜಿಲ್ಲಾ ಪಂಚಾಯತಿಯ ಒಳ ಮತ್ತು ಹೊರ ಆವರಣಗಳಲ್ಲಿ ನಿರಂತರವಾಗಿ ಸ್ವಚ್ಛತೆಯನ್ನು ಕಾಪಾಡುವ ನಿಟ್ಟಿನಲ್ಲಿ “ಸ್ವಚ್ಛ ಶನಿವಾರ” ಪರಿಕಲ್ಪನೆಯನ್ನು ಆರಂಭಿಸಲಾಗಿದೆ ಎಂದರು.
ಜಿಲ್ಲಾ ಪಂಚಾಯತಿ, ತೋಟಗಾರಿಕೆ ಇಲಾಖೆ, ಅರಣ್ಯ ಇಲಾಖೆ, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ, ಜಲಾನಯನ ಇಲಾಖೆ ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ವಿಜಯಪುರ ಇವರ ಸಹಯೋಗದಲ್ಲಿ ಪ್ರಸ್ತುತ ಸಾಲಿನಲ್ಲಿ ಜಿಲ್ಲಾ ಪಂಚಾಯತಿ ಕಛೇರಿಯ ಸುತ್ತ-ಮುತ್ತಲಿನ ಆವರಣದ ಉದ್ಯಾನವನದಲ್ಲಿ ಒಟ್ಟು ೧೫೦ ವಿವಿಧ ಜಾತಿಯ ಅಲಂಕಾರಿಕ ಸಸಿಗಳನ್ನು ನೆಟ್ಟು ಬೆಳೆಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ. ಹಸಿರೀಕರಣ ಪರಿಕಲ್ಪನೆಯು ಜಿಲ್ಲಾ ಪಂಚಾಯತಿಯಲ್ಲಿ ಅಷ್ಟೇ ಅಲ್ಲದೆ ಜಿಲ್ಲೆಯ ಎಲ್ಲ ತಾಲೂಕು ಪಂಚಾಯತಿ ಹಾಗೂ ಪ್ರತಿ ಗ್ರಾಮ ಪಂಚಾಯತಿಗಳಲ್ಲಿಯೂ ಸಹ ಹಸಿರೀಕರಣ ಕಾರ್ಯಕ್ರಮವನ್ನು ಜಾರಿಗೆ ತರಲು ಯೋಜನೆ ರೂಪಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿಯ ಉಪಕಾರ್ಯದರ್ಶಿ ಡಾ. ವಿಜಯಕುಮಾರ ಆಜೂರ, ಮುಖ್ಯ ಯೋಜನಾಧಿಕಾರಿ ನಿಂಗಪ್ಪ ಗೋಠೆ, ಯೋಜನಾ ನಿರ್ದೇಶಕ ಬಿ. ಎಸ್. ರಾಠೋಡ, ಮುಖ್ಯ ಲೆಕ್ಕಾಧಿಕಾರಿಗಳಾದ ರಾಮಣ್ಣ ಅಥಣಿ, ಸಹಾಯಕ ಕಾರ್ಯದರ್ಶಿ ಅನುಸೂಯಾ ಚಲವಾದಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ಬಸವರಾಜ ಕುಂಬಾರ, ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಾದ ನೀಲಕಂಠ ಬಿರಾದಾರ, ಅನುಸೂಯಾ ಸೋಮಣ್ಣವರ, ತೋಟಗಾರಿಕೆ ಸಹಾಯಕರಾದ ಈರಣ್ಣ ಕೋಟ್ಯಾಳ, ಮಹಾವೀರ ದಳವಾಯಿ, ಯಲ್ಲಪ್ಪ ಶಿವಣಗಿ, ಪಂಚಾಯತ್ ರಾಜ್ ಇಂಜಿನಿಯರ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರ ರವಿ ಪವಾರ, ವಿಲಾಸ ರಾಠೋಡ, ಅಧೀಕ್ಷಕ ವಿಜಯಕುಮಾರ ಹತ್ತಿ, ಕಿರಿಯ ಅಭಿಯಂತರರಾದ ಬಿ. ಬಿ. ಪಾಲಾಯಿ, ಸಾತಿಹಾಳ ಸೇರಿದಂತೆ ಇತರರು ಉಪಸ್ಥಿತರಿದ್ದರು.
“ಮಾನವ ಬದುಕಲು ಪ್ರಾಣವಾಯು ಬೇಕು, ಪ್ರಾಣವಾಯುವಿಗಾಗಿ ಪ್ರತಿಯೊಬ್ಬರೂ ಒಂದು ಗಿಡ ನೆಡಬೇಕು.” ಜಿಲ್ಲಾ ಪಂಚಾಯತಿ ಆವರಣದಲ್ಲಿ ನೆಡಲಾಗಿರುವ ಪ್ರತಿ ಸಸಿಗಳನ್ನು ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡಿ ಬೆಳೆಸುವ ಜವಾಬ್ದಾರಿಯನ್ನು ಜಿಲ್ಲಾ ಪಂಚಾತಿಯ ಪ್ರತಿಯೊಬ್ಬ ಅಧಿಕಾರಿ ಹಾಗೂ ಸಿಬ್ಬಂದಿ ವಹಿಸಿಕೊಳ್ಳಬೇಕು. ಈ ಕುರಿತು ಪ್ರತಿ ವಾರಕ್ಕೊಮ್ಮೆ ಜಿಲ್ಲಾ ಪಂಚಾಯತಿ ಆವರಣವನ್ನು ವೀಕ್ಷಿಸಿ ಸಸಿಗಳ ನಿರ್ವಹಣೆಯನ್ನು ಖುದ್ದಾಗಿ ನಾನೇ ಪರಿಶೀಲಿಸುತ್ತೇನೆ.”
– ರಿಷಿ ಆನಂದ್
ಜಿಪಂ ಸಿಇಓ, ವಿಜಯಪುರ