ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಬಜೆಟ್‌ಗೆ ಬಿಜೆಪಿ ಮುಖಂಡರು ಹೃದಯಪೂರ್ವಕವಾಗಿ ಸ್ವಾಗತಿಸಿದ್ದಾರೆ.
ಸಂಸದ ರಮೇಶ ಜಿಗಜಿಣಗಿ ಬಜೆಟ್ ಕುರಿತು ಪ್ರತಿಕ್ರಿಯೆ ನೀಡಿ, ಕೇಂದ್ರ ಬಜೆಟ್ ಅತ್ಯುತ್ತಮವಾಗಿದೆ, ಯಾವ ವಲಯದಲ್ಲಿಯೂ ನಿರಾಸೆ ಇಲ್ಲ, ಕೃಷಿ, ಕೈಗಾರಿಕೆ, ಶಿಕ್ಷಣ, ಮಹಿಳಾ ಸಬಲೀಕರಣ ಎಲ್ಲದರಲ್ಲಿಯೂ ನಂಬರ್ ೧ ಆಗಿದೆ. ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ರೈತರಿಗೆ ಸಕಾಲಕ್ಕೆ ಆರ್ಥಿಕ ನೆರವು ಒದಗಿಸುವುದು ದಿಟ್ಟ ಹೆಜ್ಜೆಯಾಗಿದೆ. ಶೈಕ್ಷಣಿಕ ಸಾಲದ ಮೇಲಿನ ತೆರಿಗೆ ಇಳಿಕೆ ಹೀಗೆ ಅನೇಕ ಕ್ರಮಗಳಿಂದ ಸರ್ವಸ್ಪರ್ಶಿ ಬಜೆಟ್ ಇದಾಗಿದೆ ಎಂದು ಅವರು ಹೇಳಿದ್ದಾರೆ.
ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕುಚಬಾಳ ಪ್ರತಿಕ್ರಿಯೆ ನೀಡಿ, ಜನಸಾಮಾನ್ಯರಿಗೆ ಅನುಕೂಲಕರವಾದ ಬಜೆಟ್ ಆಗಿದೆ. ೧೨ ಲಕ್ಷ ರೂ.ಗಳವರೆಗಿನ ಆದಾಯಕ್ಕೆ ಶೂನ್ಯ ತೆರಿಗೆ ವಿಧಿಸುವ ನಿರ್ಧಾರ ಕೈಗೊಂಡಿರುವುದು ಪ್ರತಿಯೊಬ್ಬ ಮಧ್ಯಮ ವರ್ಗದ ಪ್ರಜೆಗೆ ದೊಡ್ಡ ಉಡುಗೊರೆ ದೊರಕಿದಂತಾಗಿದೆ, ಕೃಷಿಕ, ಕಾರ್ಮಿಕ ಹೀಗೆ ಎಲ್ಲ ವರ್ಗಗಳ ಹಿತರಕ್ಷಣೆ ಬಜೆಟ್‌ನಲ್ಲಿ ಅಡಕವಾಗಿದೆ ಎಂದು ಅವರು ಹೇಳಿದ್ದಾರೆ. ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಪ್ರತಿಕ್ರಿಯೆ ನೀಡಿ, ೧೦ ಲಕ್ಷ ಕೋಟಿ ರೂ.ಗೂ ಅಧಿಕ ಬಂಡವಾಳ ಹೂಡಿಕೆಗೆ ನಿರ್ಣಯಿಸುವ ಮೂಲಕ ವಿಶ್ವದ ಮೂರನೇಯ ಸೂಪರ್ ಪವರ್ ರಾಷ್ಟ್ರವಾಗಿ ನಮ್ಮ ಹೆಮ್ಮೆಯ ಭಾರತ ಹೊರಹೊಮ್ಮಲು ಈ ಬಜೆಟ್ ವೇದಿಕೆಯಾಗಿದೆ. ಜೀವರಕ್ಷಕ ಔಷಧಗಳ ಮೇಲಿನ ತೆರಿಗೆ ಇಳಿಸಿ ಬಡವರಿಗೆ ಅತ್ಯಂತ ಅನುಕೂಲ ಕಲ್ಪಿಸಿರುವುದು ಆರೋಗ್ಯ ವಲಯದಲ್ಲಿ ಹೊಸ ಕ್ರಾಂತಿ ಎಂದೇ ವಿಶ್ಲೇಷಿಸಬಹುದಾಗಿದೆ ಎಂದು ಅವರು ಹೇಳಿದ್ದಾರೆ.
ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪೂರ ಪ್ರತಿಕ್ರಿಯೆ ನೀಡಿ, ಭಾರತ ನೆಟ್ ಯೋಜನೆಯಡಿಯಲ್ಲಿ ಎಲ್ಲ ಸರ್ಕಾರಿ ಶಾಲೆಗಳಿಗೆ ಉಚಿತ ಅಂತರ್ಜಾಲ ಸೌಲಭ್ಯ, ಶೈಕ್ಷಣಿಕ ಸಾಲದ ಮೇಲಿನ ತೆರಿಗೆ ಇಳಿಕೆ, ಮುಂದಿನ ಐದು ವರ್ಷಗಳಲ್ಲಿ ೭೫ ಸಾವಿರಗಳಷ್ಟು ಮೆಡಿಕಲ್ ಸೀಟ್ ಹೆಚ್ಚಳ ಹೀಗೆ ಶೈಕ್ಷಣಿಕ ವಲಯಕ್ಕೆ ಕೇಂದ್ರ ಬಜೆಟ್ ಬಂಪರ್ ಕೊಡುಗೆ ನೀಡಿದೆ ಎಂದು ಅವರು ಹೇಳಿದ್ದಾರೆ.
ಪಾಲಿಕೆ ಸದಸ್ಯ ಶಿವರುದ್ರ ಬಾಗಲಕೋಟ ಅವರು, ಪಿಎಂ ಸ್ವನಿಧಿ ಯೋಜನೆಯಡಿಯಲ್ಲಿ ಸಹಾಯಧನವನ್ನು ೩೦ ಸಾವಿರ ರೂ.ಗಳಿಗೆ ಏರಿಕೆ ಮಾಡಿರುವುದು ಬೀದಿಬದಿ ವ್ಯಾಪಾರಸ್ಥರಿಗೆ ದೊಡ್ಡ ಆಧಾರವಾಗಲಿದೆ, ಈ ನಿರ್ಧಾರ ಅವರ ಶ್ರೇಯೋಭಿವೃದ್ಧಿಗೆ ಪೂರಕವಾಗಿದೆ. ಎಂಎಸ್‌ಎಂಇ ಮೂಲಕ ೭.೫ ಕೋಟಿ ಯುವಕರಿಗೆ ಉದ್ಯೋಗ ಒದಗಿಸುವ ಸಂಕಲ್ಪ ಉದ್ಯೋಗ ಕ್ರಾಂತಿಗೆ ನಾಂದಿ ಹಾಡಲಿದೆ ಎಂದು ಅವರು ಹೇಳಿದ್ದಾರೆ.
ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯ ಉಪಾಧ್ಯಕ್ಷ ವಿವೇಕಾನಂದ ಡಬ್ಬಿ ಅವರು ಪ್ರತಿಕ್ರಿಯೆ ನೀಡಿ, ಸರ್ವೇ ಜನ ಸುಖಿನೋ ಭವಂತು ಎಂಬ ವಾಣಿಯನ್ನು ಬಜೆಟ್‌ನಲ್ಲಿ ಅಳವಡಿಸಲಾಗಿದೆ. ಕೃಷಿ ವಲಯಕ್ಕೆ ಆದ್ಯತೆ, ಮೀನುಗಾರಿಕೆಗೆ ಉತ್ತೇಜನ ಹೀಗೆ ಬಜೆಟ್‌ನಲ್ಲಿ ಪ್ರತಿಯೊಂದು ಅಂಶವೂ ವಿಶೇಷತೆಯಿಂದ ಕೂಡಿದೆ ಎಂದು ಅವರು ಹೇಳಿದ್ದಾರೆ.
ಬಿಜೆಪಿ ಜಿಲ್ಲಾ ಮಾಧ್ಯಮ ಪ್ರಮುಖ ವಿಜಯ ಜೋಶಿ ಪ್ರತಿಕ್ರಿಯೆ ನೀಡಿ, ಬಜೆಟ್ ಸರ್ವಸ್ಫರ್ಶಿಯಾಗಿದೆ. ಜೀವ ರಕ್ಷಕ ಔಷಧಗಳ ಬೆಲೆ ಇಳಿಕೆ ಮೂಲಕ ಬಡವರಿಗೆ ಆರೋಗ್ಯ ನೆರವು, ಕಿಸಾನ್ ಕ್ರೆಡಿಟ್ ಕಾರ್ಡ್ ವಿತರಣೆಗೆ ದೊಡ್ಡ ಹೆಜ್ಜೆ, ಮಹಿಳಾ ಉದ್ಯಮಿದಾರರಿಗೆ ನೆರವು ಹೀಗೆ ಎಲ್ಲ ವಲಯಗಳಿಗೂ ದೊಡ್ಡ ಕೊಡುಗೆ ದೊರಕಿದಂತಾಗಿದೆ ಎಂದು ಅವರು ಹೇಳಿದ್ದಾರೆ.
ಉದ್ಯಮಿ ಗೋವಿಂದ ಜೋಶಿ ಬಜೆಟ್ ಕುರಿತು ಪ್ರತಿಕ್ರಿಯೆ ನೀಡಿ, ಕಚ್ಚಾ ವಸ್ತುಗಳ ಮೇಲಿನ ಆಮದು ಸುಂಕ ಇಳಿಕೆಯ ನಿರ್ಧಾರ ಕೈಗೊಂಡಿರುವುದು ಮಧ್ಯಮ ಹಾಗೂ ಸಣ್ಣ ಕೈಗಾರಿಕಾ ವಲಯಕ್ಕೆ ಉತ್ತೇಜನಕ್ಕೆ ಪೂರಕವಾಗಿದೆ. ಭಾರತ ನೆಟ್ ಎಂಬ ಯೋಜನೆ ಮೂಲಕ ಎಲ್ಲ ಸರ್ಕಾರಿ ಶಾಲೆಗಳಿಗೆ ಅಂತರ್ಜಾಲ ಸೌಲಭ್ಯ ಒದಗಿಸಲು ಮುಂದಾಗಿರುವುದು ಮಕ್ಕಳಿಗೆ ಅನುಕೂಲಕರವಾದ ಹೆಜ್ಜೆಯಾಗಿದೆ ಎಂದು ಅವರು ಹೇಳಿದ್ದಾರೆ.
ಇತಿಹಾಸ ಪುಟಗಳಲ್ಲಿ ಬರೆದಿಡುವ ಬಜೆಟ್
” ಮಧ್ಯಮ ವರ್ಗದವರಿಗೆ ಅತ್ಯಂತ ಖುಷಿಕೊಡುವ ಬಜೆಟ್ ಇದಾಗಿದೆ, 12 ಲಕ್ಷ ರೂಪಾಯಿ ಒಳಗೆ ಆದಾಯ ಇರುವವರಿಗೆ ತೆರಿಗೆ ವಿನಾಯತಿ! ಸ್ಟಾರ್ಟ್ ಅಪ್ ಕಂಪನಿಗಳಿಗೆ, ಯುವ ಉದ್ದಿಮೆದಾರರಿಗೆ, ಸ್ಟ್ಯಾಂಡಪ್ ಇಂಡಿಯಾ ಗಳಿಗೆ ಹಾಗು MSME ಕಂಪನಿಗಳಿಗೆ ಬಂಪರ್ ಕೊಡುಗೆಯ ಬಜೆಟ್ ಇದಾಗಿದ್ದು ದೇಶದ ಆರ್ಥಿಕ ಪ್ರಗತಿಯನ್ನು ಸುಧಾರಿಸುವ ಬಜೆಟ್ ಇದಾಗಿದೆ.”
– ವಿಜಯಕುಮಾರ ಕುಡಿಗನೂರ
ಬಿಜೆಪಿ ರಾಜ್ಯ ಸಂಚಾಲಕರು,
ವ್ಯಾಪಾರ ಮತ್ತು ವಾಣಿಜ್ಯ ಪ್ರಕೋಷ್ಠ