ರಾಜ್ಯಕ್ಕೆ ನಿರಾಶೆ ಮೂಡಿಸಿದ ಕೇಂದ್ರ ಬಜೆಟ್ | ರಾಜಕೀಯ ಕಾರಣಕ್ಕೆ ಬಿಹಾರ, ಆಂಧ್ರ ಪ್ರದೇಶಕ್ಕೆ ಹೆಚ್ಚು ಅನುದಾನ | ದೂರದೃಷ್ಟಿ ಇಲ್ಲದ ಬಜೆಟ್ | ಸಿಎಂ ಸಿದ್ದರಾಮಯ್ಯ ಆಕ್ರೋಶ
ಮೈಸೂರು: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶನಿವಾರ ಮಂಡಿಸಿದ 2025-26ನೇ ಸಾಲಿನ ಬಜೆಟ್ ರಾಜ್ಯ ಮತ್ತು ದೇಶದ ದೃಷ್ಟಿಯಿಂದ ಬಹಳ ನಿರಾಶಾದಾಯಕ ಬಜೆಟ್ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟೀಕಿಸಿದ್ದಾರೆ.
ಶನಿವಾರ ಮೈಸೂರಿನಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಿಎಂ, ನರೇಂದ್ರ ಮೋದಿ ಸರ್ಕಾರ ಕರ್ನಾಟಕಕ್ಕೆ ಚೊಂಬು ಕೊಡುವುದನ್ನು ಮುಂದುವರೆಸಿದೆ. ಕರ್ನಾಟಕದ ದೃಷ್ಟಿಯಿಂದ ಇದೊಂದು ನಿರಾಶದಾಯಕ ಮತ್ತು ದೂರದೃಷ್ಟಿ ಇಲ್ಲದ ಬಜೆಟ್ ಎಂದು ಹೇಳಿದರು.
ಬಜೆಟ್ ಪೂರ್ವಭಾವಿ ಸಭೆಯಲ್ಲಿ ಕರ್ನಾಟಕ ಅನೇಕ ಬೇಡಿಕೆಗಳನ್ನು ಇಟ್ಟಿತ್ತು. ನಮ್ಮ ಬೇಡಿಕೆಗಳು ಬೇಡಿಕೆಗಳಾಗಿಯೇ ಉಳಿದಿವೆ. ಒಂದೇ ಒಂದು ಬೇಡಿಕೆಯೂ ಈಡೇರಿಲ್ಲ ಎಂದು ಸಿಎಂ ಆಕ್ರೋಶ ವ್ಯಕ್ತಪಡಿಸಿದರು.
ಬಜೆಟ್ ಗಾತ್ರವೂ ಕಡಿಮೆ ಆಗಿದೆ. ಕಳೆದ ಬಾರಿಗಿಂತ 1.04 ಲಕ್ಷ ಕೋಟಿ ಕಡಿಮೆ ಆಗಿದೆ. ತೆರಿಗೆ ಅವರು ಅಂದುಕೊಂಡಷ್ಟು ಸಂಗ್ರಹಿಸಿಲ್ಲ. ಕೇಂದ್ರ ಸರ್ಕಾರ 15,68,936 ಕೋಟಿ ಸಾಲ ಪಡೆಯುತ್ತಿದೆ. 12,70,000 ಕೋಟಿ ರೂ. ಬಡ್ಡಿ ಕಟ್ಟುತ್ತಿದೆ. ಈ ದೇಶದ ಸಾಲದ ಪ್ರಮಾಣ 202 ಲಕ್ಷ ಕೋಟಿಯಿಂದ 205 ಲಕ್ಷ ಕೋಟಿ ರೂ.ಗೆ ಏರುತ್ತಿದೆ. ಈ ಬಜೆಟ್ ನಿರಾಶದಾಯಕ ಬಜೆಟ್ ಎಂದು ವಾಗ್ದಾಳಿ ನಡೆಸಿದರು.
ಕರ್ನಾಟಕ ಹೆಚ್ಚು ತೆರಿಗೆ ಕಟ್ಟುತ್ತಿರುವ ರಾಜ್ಯಗಳಲ್ಲಿ 2ನೇ ಸ್ಥಾನದಲ್ಲಿದೆ. ರಾಜಕೀಯ ಕಾರಣಕ್ಕೆ ಬಿಹಾರ, ಆಂಧ್ರ ಪ್ರದೇಶಕ್ಕೆ ಹೆಚ್ಚು ಅನುದಾನ ಸಿಕ್ಕಿದೆ. ಮೇಕೆದಾಟು, ಭದ್ರಾ ಮೇಲ್ದಂಡೆ, ಕೃಷ್ಣ ಮೇಲ್ದಂಡೆ ಯೋಜನೆ ಯಾವುದಕ್ಕೂ ಹಣ ಕೊಟ್ಟಿಲ್ಲ. ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂ. ಕೊಡುತ್ತೇವೆ ಎಂದು ಕಳೆದ ಬಾರಿ ಘೋಷಿಸಿದ್ದರು. ಈವರೆಗೆ ಒಂದೂ ನಯಾಪೈಸೆಯೂ ಬಂದಿಲ್ಲ ಎಂದರು.
ರಾಜಸ್ಥಾನ ಬಿಟ್ಟರೆ ಕರ್ನಾಟಕ ಹೆಚ್ಚು ಒಣ ಭೂಮಿ ಇರುವ ರಾಜ್ಯ. ಈ ರಾಜ್ಯಕ್ಕೆ ನೀರಾವರಿ ಯೋಜನೆಗಳಿಗೆ ಒಂದು ರೂಪಾಯಿ ಕೊಟ್ಟಿಲ್ಲ. ರಾಯಚೂರಿಗೆ ಏಮ್ಸ್ ಘೋಷಣೆ ಮಾಡುತ್ತಾರೆ ಎಂದು ನಿರೀಕ್ಷೆ ಇತ್ತು. ಕೇಂದ್ರ ಸಚಿವ ನಡ್ಡಾ ಇದಕ್ಕೆ ಭರವಸೆ ಕೊಟ್ಟಿದ್ದರು. ಅದರ ಪ್ರಸ್ತಾಪವೂ ಇಲ್ಲ ಎಂದು ಸಿಎಂ ಗುಡುಗಿದರು.
ನಿರಾಶಾದಾಯಕ ಬಜೆಟ್
“ಮಿತ್ರ ಪಕ್ಷಗಳನ್ನ ಓಲೈಸಿ ಸರಕಾರ ಉಳಿಸಿಕೊಳ್ಳುವ ನಿರಾಶದಾಯಕ ಬಜೆಟ್ ಇದಾಗಿದ್ದು, ಭಾರತೀಯ ಶ್ರೀಸಾಮಾನ್ಯರ ನಿರೀಕ್ಷೆಗಳಿಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಣ್ಣೀರೆರಚಿದ್ದಾರೆ.”
– ಸಂಗಮೇಶ ಬಬಲೇಶ್ವರ
ಅಧ್ಯಕ್ಷರು, ಕರ್ನಾಟಕ ಬಾಲ ವಿಕಾಸ ಅಕಾಡೆಮಿ
ಮೀನು ರಫ್ತುದಾರರಿಗೆ ಸಹಾಯಕ ಬಜೆಟ್
“ಭಾರತದ ಮೀನುಗಾರಿಕೆ ಜಾಗತಿಕ ಸುಮಾರು ೬೦೦೦೦ ಕೋಟಿಗೂ ಹೆಚ್ಚಾಗಿದ್ದು ಎರಡನೇ ಸ್ಥಾನದಲ್ಲಿದೆ ಅದರಂತೆ ಬೆಳವಣಿಗೆಗೆ ಒತ್ತು ಕೊಟ್ಟು ಮೂಲ ಕಸ್ಟಮ್ ಮೌಲ್ಯವನ್ನು ೩0% ನಿಂದ ೫% ಗೆ ಇಳಿಸಿರುವದು ಮೀನು ಉತ್ಪಾದನೆ ಮಾಡಿ ರಫ್ತು ಮಾಡುವವರಿಗೆ ಸಹಾಯಕಾರಿಯಾದ ಬೆಳವಣಿಗೆ ಅದಲ್ಲದೆ ಅಂಡಮಾನ್ ನಿಕೋಬಾರ್ ಲಕ್ಷದ್ವೀಪ್ ದ್ವೀಪಗಳಲ್ಲಿ ಮೀನುಗಾರಿಕೆಗೆ ಉತ್ತೇಜನ ಕೊಟ್ಟಿರುವದು ಹಾಗು ಕಿಸ್ಸಾನ್ ಕ್ರೆಡಿಟ್ ಕಾರ್ಡ್ ಮೂಲಕ ಅಲ್ಪಾವಧಿಯ ಸಾಲದ ವಯೋಮಿತಿಯನ್ನು ೩ ರಿಂದ ೫ ಲಕ್ಷಕ್ಕೆ ಹೆಚ್ಚಿಸಿರುವದು ಗಮನಾರ್ಹ. ಆದರೆ ಪ್ರತಿ ಸಾರಿಯಂತೆ ಈ ಬಾರಿಯೂ ಕೂಡ ಮೀನುಗಾರ ಅರೋಗ್ಯ ಮತ್ತು ಜೀವರಕ್ಷಣೆ ವಿಮೆಗಳ ಬಗ್ಗೆ ಹಾಗು ಮೀನುಗಾರರ ಮಕ್ಕಳಿಗೆ ಪ್ರತ್ತೇಕವಾದ ವಿದ್ಯಾನಿಧಿ ಹಾಗು ಇತರೆ ಮೂಲಭೂತ ಸೌಕರ್ಯಗಳಿಗೆ ಒತ್ತು ಕೊಡದೆ ಇರುವದು ಬೇಸರ ತಂದಿದೆ.”
– ಡಾ.ಗೌತಮ್ ಆರ್. ಚೌಧರಿ
ರಾಷ್ಟೀಯ ಉಪಾಧ್ಯಕ್ಷರು
ರಾಷ್ಟೀಯ ಮೀನುಗಾರ ಸಂಘ