ಉದಯರಶ್ಮಿ ದಿನಪತ್ರಿಕೆ
ಚಡಚಣ: ಹನ್ನೆರಡನೇ ಶತಮಾನದಲ್ಲಿ ಹಿಂದುಳಿದ ಹಾಗೂ ಶ್ರಮಜೀವಿಗಳ ಸಮಾನತೆಗೆ ಸಾಮಾಜಿಕ ಕ್ರಾಂತಿ ಮಾಡಿದವರಲ್ಲಿ ಮಾಚಿದೇವರು ಒಬ್ಬರು.ಅವರು ಮೇಲು-ಕೀಳು,ಬಡವರು, ಸಾಮಾಜಿಕ ಬಹಿಷ್ಕಾರ ಹಾಗೂ ಶೋಷಣೆಗೊಳಗಾಗಿದವರ ಬಗ್ಗೆ ಚಿಂತಿಸಿದ ಧೀರ ಶರಣರಾಗಿದ್ದರು ಎಂದು ಶಿಕ್ಷಕ ಬಸವರಾಜ ಕರಜಗಿ ಹೇಳಿದರು.
ಅವರು ಪಟ್ಟಣದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ನಂ-೨ ಮರಡಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಮಡಿವಾಳ ಮಾಚಿದೇವರ ಜಯಂತಿ ಕುರಿತು ಮಾತನಾಡುತ್ತಿದ್ದರು. ಕಲಿದೇವರ ದೇವಾ ಎಂಬ ವಚನಾಂಕಿತ ದೊಂದಿಗೆ ವಿಶ್ವ ನೈತಿಕ ಆಚರಣೆ ತತ್ವಗಳ ಮೇಲೆ ಅವರು ರಚಿಸಿದ ವಚನಗಳು ಇಡೀ ವಿಶ್ವಕ್ಕೆ ಮಾದರಿಯಾಗಿವೆ.ಅವರ ವಚನದ ತತ್ವಗಳನ್ನು ಪ್ರತಿಯೊಬ್ಬರು ತಮ್ಮ ನಿತ್ಯ ಜೀವನದಲ್ಲಿ ರೂಢಿಸಿಕೊಂಡು,ಮಾನವೀಯ ಮೌಲ್ಯಗಳ ಅಡಿಯಲ್ಲಿ ನೆಮ್ಮದಿಯ ಬದುಕನ್ನು ಸಾಗಿಸಬೇಕು ಎಂದು ಹೇಳಿದರು.
ಶಿಕ್ಷಕ ಜಗದೀಶ ಚಲವಾದಿ ಮಾತನಾಡಿ ಮಾಚಿದೇವರು ಮನದ ಮೈಲಿಗೆ ಕಳೆದ ಸರ್ವಶ್ರೇಷ್ಠ ಶರಣ, ದಿಟ್ಟ ಗಣಾಚಾರಿ.ಅಂದಿನ ಸಾಮಾಜಿಕ ಕ್ರಾಂತಿಯಲ್ಲಿ ಮಡಿವಾಳ ಮಾಚಿದೇವರು ವಚನ ಗೌರವಕ್ಕೆ ಪಾತ್ರರಾಗಿದ್ದರು ಎಂದು ಹೇಳಿದರು.
ಶಿಕ್ಷಕ ಡಿ ಎಸ್ ಬಗಲಿ ಮಾತನಾಡಿ, ಶರಣರಲ್ಲಿಯೇ ಧೀರ-ದಿಟ್ಟ ವ್ಯಕ್ತಿಯಾಗಿ ವಚನ ಸಾಹಿತ್ಯವನ್ನು ರಕ್ಷಿಸಿದವರು ಮಾಚಿದೇವರು.ತಮ್ಮ ವಚನಗಳ ಮೂಲಕವೇ ಸಮ ಸಮಾಜಕ್ಕೆ ಹೋರಾಡಿದವರು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮುಖ್ಯ ಶಿಕ್ಷಕ ಮಹಾಂತೇಶ ಉಮರಾಣಿ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಸಹ ಶಿಕ್ಷಕರು,ಅತಿಥಿ ಶಿಕ್ಷಕರು ಹಾಗೂ ಮುದ್ದು ಮಕ್ಕಳು ಉಪಸ್ಥಿತರಿದ್ದರು.