ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಈಜು ಕಲಿಯಲೆಂದು ಕಾಲುವೆಗೆ ಇಳಿದಿದ್ದ ಯುವಕ ನೀರು ಪಾಲಾದ ಘಟನೆ ಪಟ್ಟಣದ ಹಡಲಗೇರಿ ರಸ್ತೆಯಲ್ಲಿರುವ ಕಾಲುವೆಯಲ್ಲಿ ಗುರುವಾರ ನಡೆದಿದೆ.
ಮೃತ ದುರ್ದೈವಿ ಕಾರ್ತಿಕ ಹಿರೇಮಠ(೧೭) ಪ್ರಥಮ ಪಿಯುಸಿ ಓದುತ್ತಿದ್ದ. ಈಜು ಕಲಿಯಲೆಂದು ಕಾಲುವೆಗೆ ಇಳಿದಿದ್ದು ನೀರಿನ ಸೆಳೆತಕ್ಕೆ ಸಿಕ್ಕು ಪ್ರಾಣ ಕಳೆದುಕೊಂಡಿದ್ದಾನೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಅಗ್ನಿಶಾಮಕ ಸಿಬ್ಬಂದಿಗಳು ದೌಡಾಯಿಸಿ ಮೃತದೇಹದ ಪತ್ತೆಗೆ ಸಂಜೆಯವರೆಗೂ ಕಾರ್ಯಾಚರಣೆ ನಡೆಸಿದ್ದು ಮೃತದೇಹ ಪತ್ತೆಯಾಗಿರಲಿಲ್ಲ. ಶುಕ್ರವಾರ ಬೆಳಿಗ್ಗೆ ಮೃತದೇಹ ಪತ್ತೆಯಾಗಿದೆ. ಕಾನೂನು ವಿಧಾನಗಳನ್ನು ಪಾಲಿಸಿ ಅಂತ್ಯಕ್ರೀಯೆ ನೆರವೇರಿಸಲಾಗಿದೆ.
ಕಳೆದ ಒಂದೂವರೆ ವರ್ಷದ ಹಿಂದೆ ತನ್ನ ತಾಯಿಯನ್ನು ಕಳೆದುಕೊಂಡ ಕಾರ್ತಿಕ ತಂದೆ ಹೇಳಿದ ಕೆಲಸ ಕಾರ್ಯಗಳನ್ನು ಮಾಡಿಕೊಂಡು ಕುಟುಂಬಕ್ಕೆ ಆಸರೆಯಾಗಿದ್ದ. ಏಳು ತಿಂಗಳು ಇರುವಾಗಲೇ ಭೂಮಿಗೆ ಬಂದಿದ್ದ ಕಾರ್ತಿಕ ನನ್ನು ಆತನ ಪಾಲಕರು ಸಾಕಷ್ಟು ಜೋಪಾನವಾಗಿ ಪಾಲನೆ ಪೋಷಣೆ ಮಾಡಿದ್ದರು ಎನ್ನಲಾಗಿದೆ. ಕೈಗೆ ಬಂದಿದ್ದ ಯುವಕನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.