ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ತಾಲ್ಲೂಕಿನ ಇಂಗಳಗಿ- ಚಟ್ಟರಕಿ ಗ್ರಾಮಗಳ ಮಧ್ಯೆದಲ್ಲಿಯ ಜಮೀನು ರಸ್ತೆ ದೊರಕಿಸಿಕೊಡಲು ಆಗ್ರಹಿಸಿ ಇಂಗಳಗಿ ಗ್ರಾಮಸ್ಥರು ತಹಶೀಲ್ದಾರ ಪ್ರಕಾಶ ಸಿಂದಗಿ ಅವರಿಗೆ ಮನವಿ ಮಾಡಿದರು.
ಪಟ್ಟಣದ ತಹಶೀಲ್ದಾರ ಕಚೇರಿಗೆ ಶುಕ್ರವಾರ ಆಗಮಿಸಿದ ರೈತರು ತಮ್ಮ ಗ್ರಾಮದಿಂದ ಚಟ್ಟರಕಿಗೆ ತೆರಳುವ ಹಾಗೂ ಸುಮಾರು ೧೫೦ ಜಮೀನುಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಪುನಃ ದೊರಕಿಸಿಕೊಡಲು ಆಗ್ರಹಿಸಿದರು. ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿಯ ಬೆಳಗಾವಿ ವಿಭಾಗೀಯ ಸಂಚಾಲಕ ರಾವುತ ತಳಕೇರಿ ಮಾತನಾಡಿ, ತಾಲ್ಲೂಕಿನಲ್ಲಿ ರೈತರೇ ರೈತರಿಗೆ ಸಹಕಾರ ನೀಡುತ್ತೀಲ್ಲ. ಈಗ ಇಂಗಳಗಿ ಗ್ರಾಮದ ರೈತರೊಬ್ಬರು ತಮ್ಮ ಜಮೀನುಗಳ ಮೂಲಕ ತೆರಳುವ ರಸ್ತೆಯನ್ನು ಬಂದ್ ಮಾಡಿ ಯಾರು ತೆರಳದಂತೆ ಮಾಡಿದ್ದಾರೆ. ಈ ರಸ್ತೆ ಸಾಕಷ್ಟು ವರ್ಷಗಳಿಂದ ಬಳಕೆಯಲ್ಲಿದ್ದು ಗ್ರಾಮದ ಬಹುತೇಕರು ತಮ್ಮ ಜಮೀನುಗಳಿಗೆ ತೆರಳಲು ಇದೇ ರಸ್ತೆಯನ್ನು ಬಳಕೆ ಮಾಡುತ್ತಿದ್ದರು. ಈಗ ಏಕಾಏಕಿ ರಸ್ತೆ ಬಂದ್ ಮಾಡಿ ಇಲ್ಲಿ ರಸ್ತೆಯಿಲ್ಲ ಎನ್ನುತ್ತಿದ್ದಾರೆ. ಇನ್ನೂ ಗ್ರಾಮದ ನಕಾಶೆಯಲ್ಲಿಯೂ ಸ್ಪಷ್ಟವಾಗಿ ರಸ್ತೆ ತೋರಿಸಲಾಗಿದೆ. ಈಗ ರಸ್ತೆಯಿಲ್ಲ ಅಂದರೆ ಹೇಗೆ? ಆದ್ದರಿಂದ ತಹಶೀಲ್ದಾರರೇ ಖುದ್ದಾಗಿ ಸ್ಥಳ, ನಕಾಶೆ ಪರಿಶೀಲನೆ ಮಾಡಿ ರಸ್ತೆ ದೊರಕಿಸಿಕೊಡಬೇಕು.
ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ಜಮೀನುಗಳ ರಸ್ತೆ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಕೆಲವು ರೈತರ ಅಸಹಕಾರ ನೀತಿಗಳಿಂದ ಇಂಥ ಪ್ರಕರಣಗಳು ನ್ಯಾಯಾಲಯದ ಮೆಟ್ಟಿಲೇರುತ್ತಿವೆ. ಒಂದೇಡೆ ಮುಖ್ಯಮಂತ್ರಿಗಳು ಇದರ ಜವಾಬ್ದಾರಿಯನ್ನು ಆಯಾ ತಾಲ್ಲೂಕಿನ ತಹಶೀಲ್ದಾರರಿಗೆ ನೀಡಿದ್ದರು ಸಹ ಪ್ರಕರಣ ಬಗೆಹರಿಯುತ್ತಿಲ್ಲ ಎಂದರು.
ಗ್ರಾಮದ ರೈತರ ಮನವಿಗೆ ಸ್ಪಂದಿಸಿದ ತಹಶೀಲ್ದಾರ ಈ ಕುರಿತು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಯಮನೂರಿ ಸಾತಿಹಾಳ, ಆನಂದ ಕೊಣ್ಣೂರ, ಚನಬಸಪ್ಪ ಬಿರಾದಾರ, ರವಿ ಮಂಗಳೂರ, ಕಲ್ಲು ರಾವೂರ, ಶ್ರೀಶೈಲ ಸಾತಿಹಾಳ, ಸಿದ್ಧನಗೌಡ ಗೋಡ್ಯಾಳ, ಬಸವರಾಜ ಬಿರಾದಾರ, ಬಸಪ್ಪ ಹರಿಜನ, ವಿಲಾಸ ಗೋಡ್ಯಾಳ, ಕಲ್ಲನಗೌಡ ಬಿರಾದಾರ, ಶರಣಗೌಡ ಅಂಬಳನೂರ, ಕಾಶೀನಾಥ ಮಂಗಳೂರ, ಸಿದ್ಧನಗೌಡ ಕೊಣ್ಣೂರ ಇದ್ದರು.