ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ವಿಶ್ವ ಕ್ಯಾನ್ಸರ್ ರೋಗ ದಿನವನ್ನು ಫೆ. 4 ರಂದು ಆಚರಿಸಲಾಗುತ್ತಿದ್ದು, ಇದರ ಅಂಗವಾಗಿ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಕಾಲೇಜಿನ ಶಸ್ತ್ರಚಿಕಿತ್ಸಾ ವಿಭಾಗ ಮತ್ತು ಜಿಲ್ಲಾ ಶಸ್ತ್ರಚಿಕಿತ್ಸಕರ ಸಂಘ ಹಾಗೂ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯದ ವೈಜ್ಞಾನಿಕ, ಶೈಕ್ಷಣಿಕ ಹಾಗೂ ಸಂಶೋಧನೆ ಸೊಸೈಟಿ ಸಂಯುಕ್ತಾಶ್ರಯದಲ್ಲಿ ನಾನಾ ಕಾರ್ಯಕ್ರಮ ಆಯೋಜಿಸಲಾಗಿದೆ.
ಫೆ. 3ರಿಂದ ಫೆ. 8ರ ವರೆಗೆ ಸಪ್ತಾಹ ಆಚರಿಸಲಾಗುತ್ತಿದ್ದು, ಪ್ರತಿದಿನ ಬೆಳಿಗ್ಗೆ 9 ರಿಂದ ಸಂಜೆ 5ರ ವರೆಗೆ ಸಪ್ತಾಹದ ಅಂಗವಾಗಿ ಶಸ್ತ್ರಚಿಕಿತ್ಸೆ ಓಪಿಡಿ ನಂ.10 ರಲ್ಲಿ ಕ್ಯಾನ್ಸರ್ ರೋಗಗಳ ಉಚಿತ ತಪಾಸಣೆ ಶಿಬಿರ ನಡೆಯಲಿದೆ. ಅವಶ್ಯವಿರುವ ರೋಗಿಗಳನ್ನು ಆಸ್ಪತ್ರೆಯಲ್ಲಿ ದಾಖಲಿಸಿ, ಉಚಿತ ಇಲ್ಲವೇ ರಿಯಾಯಿತಿ ದರದಲ್ಲಿ ತಜ್ಞ ವೈದ್ಯರಿಂದ ಚಿಕಿತ್ಸೆ ನೀಡಲಾಗುವುದು. ವಿಜಯಪುರ ಮತ್ತು ಸುತ್ತಮುತ್ತಲಿನ ಜಿಲ್ಲೆಗಳ ಜನತೆ ಶಿಬಿರದ ಸದುಪಯೋಗವನ್ನು ಪಡೆಯಬಹುದಾಗಿದೆ.
ಫೆ. 4 ರಂದು ವಿಶ್ವ ಕ್ಯಾನ್ಸರ್ ದಿನಾಚರಣೆ ಅಂಗವಾಗಿ ವಿಜಯಪುರದ ವೈದ್ಯಕೀಯ ಮಹಾವಿದ್ಯಾಲಯಗಳ ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗಾಗಿ ಅನನ್ಯತೆಯಿಂದ ಒಂದುಗೂಡಿದೆ ಧ್ಯೇಯ ವಾಕ್ಯ ದಡಿ ಆಸ್ಪತ್ರೆಯ ಲೆಕ್ಙರ್ ಹಾಲ್ ನಂ. 1 ರಲ್ಲಿ ಮ. 12 ರಿಂದ ಮ. 1ರ ವರೆಗೆ ನಿಬಂಧ ಸ್ಪರ್ಧೆ ಮತ್ತು ಮ. 3 ರಿಂದ ಸಂ. 5ರ ವರೆಗೆ ಚಿತ್ರಕಲಾ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ಅಲ್ಲದೇ ಇದೇ ದಿನ ಬಿ.ಎಲ್.ಡಿ.ಇ. ಸಂಸ್ಥೆಯ ನರ್ಸಿಂಗ್ ಮಹಾವಿದ್ಯಾಲಯದಲ್ಲಿ ಕ್ಯಾನ್ಸರ್ ತಜ್ಞ ವೈದ್ಯ ಡಾ. ಶೈಲೇಶ ಕನ್ನೂರ ಅವರಿಂದ, ಕ್ಯಾನ್ಸರ್ ರೋಗಗಳ ಜಾಗ್ರತೆಯ ಬಗ್ಗೆ ಉಪನ್ಯಾಸವನ್ನು ಆಯೋಜಿಸಲಾಗಿದೆ. ಫೆ. 5 ರಂದು ಸಂ. 5ಕ್ಕೆ ವಿಜಯಪುರದ ಎಫ್.ಎಂ. ರೇಡಿಯೋ ಸಹಯೋಗದೊಂದಿಗೆ, ಕ್ಯಾನ್ಸರ್ ರೋಗಗಳ ಜಾಗ್ರತೆಯ ಬಗ್ಗೆ, ಕ್ಯಾನ್ಸರ್ ತಜ್ಞ ವೈದ್ಯ ಡಾ. ಸಂಜೀವ ರಾಠೋಡ ಅವರ ಸಂದರ್ಶನ ಪ್ರಸಾರವಾಗಲಿದೆ ಎಂದು ಶಸ್ತ್ರ ಚಿಕಿತ್ಸೆ ವಿಭಾಗದ ಮುಖ್ಯಸ್ಥ ಡಾ. ಮಂಜುನಾಥ ಕೋಟೆಣ್ಣವರ ಮತ್ತು ಜಿಲ್ಲಾ ಶಸ್ತ್ರ ಚಿಕಿತ್ಸಕರ ಸಂಘದ ಕಾರ್ಯದರ್ಶಿ ಡಾ. ರಮಾಕಾಂತ ಬಳೂರಕರ ಅವರು ಮಾಧ್ಯಮ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.