ಲೇಖನ
ವೀಣಾ ಹೇಮಂತ್ ಗೌಡ ಪಾಟೀಲ್
ಮುಂಡರಗಿ
ಗದಗ ಜಿಲ್ಲೆ
ಉದಯರಶ್ಮಿ ದಿನಪತ್ರಿಕೆ
ಇನ್ನೇನು ಕೆಲವೇ ದಿನಗಳಲ್ಲಿ ಪರೀಕ್ಷೆಗಳು ಪ್ರಾರಂಭವಾಗುತ್ತವೆ.. ಮನೆ ಮನೆಗಳಲ್ಲೂ ಬಿಸಿಯಾದ ವಾತಾವರಣ. ಟಿವಿ ವೀಕ್ಷಣೆ ಮತ್ತು ಮೊಬೈಲ್ ಗಳಿಗೆ ಕಡಿವಾಣ, ಹೊರಗಿನ ಸುತ್ತಾಟಗಳು ಬಂದ್, ಇದುವರೆಗೂ ಹಾಜರಾಗುತ್ತಿದ್ದ ಪಠ್ಯೇತರ ಚಟುವಟಿಕೆಗಳ ತರಗತಿಗಳಿಗೆ ಕಳಿಸುವುದನ್ನು ಕೂಡ ನಿಲ್ಲಿಸಿ ಬಿಡುವ ಪಾಲಕರು.. ಒಟ್ಟಿನಲ್ಲಿ ಅಘೋಷಿತ ಬಂದ್ ನ ವಾತಾವರಣ. ಡೋಂಟ್ ಡು ದಿಸ್, ಡೋಂಟ್ ಡು ಥಟ್ ಎಂಬ ಪಾಲಕರ ಆಜ್ಞೆಗಳಿಗೆ ಮಕ್ಕಳು ಹೂ ಆರ್ ಯು ಟು ಟೆಲ್ ಮಿ ದಾಟ್…ಇಟ್ಸ್ ಮೈ ಲೈಫ್ ಎಂದು ಮರು ಉತ್ತರ ನೀಡುವ… ಕೊನೆಗೆ ಇಬ್ಬರೂ ಪರಸ್ಪರ ಒಬ್ಬರನ್ನೊಬ್ಬರು ದೂಷಿಸುವುದು ಪ್ರತಿ ಮನೆಗಳಲ್ಲಿ ನಡೆಯುತ್ತಿರುತ್ತದೆ.
‘ಯುದ್ಧಕಾಲೇ ಶಸ್ತ್ರಾಭ್ಯಾಸ’ ಎಂಬಂತೆ ಮೈಚಳಿ ಕೊಡವಿಕೊಂಡು ಪಾಲಕರು, ಶಿಕ್ಷಕರು ಎದ್ದೇಳುವರು. ಪರೀಕ್ಷೆ ಬಂತು ಓದಿಕೊಳ್ಳಿ ಎಂದು ತಂದೆ ತಾಯಿಯರ ವರಾತ, ಮಕ್ಕಳ ಅವಗಣನೆ, ಶಾಲೆಯಲ್ಲಿ ಎಲ್ಲ ಪಾಠಗಳು ಪ್ರಶ್ನೋತ್ತರಗಳು ಪುನರಾವರ್ತನೆಯಾಗಿ ಮಕ್ಕಳು ಓದಿ ಓದಿ ರೋಸಿ ಹೋಗುವುದರಲ್ಲಿ ಸಂಶಯವೇ ಇಲ್ಲ. ಮತ್ತೆ ಕೆಲವೊಮ್ಮೆ ಓದಿದ್ದನ್ನು ಮರೆಯುತ್ತಾರೆ ಕೂಡ. ಇದುವೇ ಸಮಸ್ಯೆಯ ಮೂಲವಾಗಿ ಕಾಡುತ್ತದೆ.
ಪರೀಕ್ಷೆಯಲ್ಲಿ ಪಡೆಯುವ ಅಂಕಗಳು ನಮ್ಮ ಬದುಕಿನ ದಾರಿಯನ್ನು ಸ್ವಲ್ಪಮಟ್ಟಿಗೆ ನಿರ್ದೇಶಿಸಿದರೂ ಅವುಗಳೇ ಮುಖ್ಯವಾದ ಮಾನದಂಡಗಳಲ್ಲ ಎಂಬ ಅರಿವಿದ್ದರೂ ಕೂಡ ಬಾಲ್ಯದಿಂದಲೇ ಮಕ್ಕಳ ಮೇಲೆ ಅಂಕ ಗಳಿಕೆಯ ಕುರಿತು ವಿಪರೀತ ಒತ್ತಡವನ್ನು ಪಾಲಕರು, ಶಿಕ್ಷಕರು ಸುತ್ತಲ ಸಮಾಜದ ಜನರು ಹೇರುತ್ತಾರೆ.
ಓರ್ವ ವ್ಯಕ್ತಿಯ ಜಾಣ್ಮೆಯನ್ನು ಆತನ ಅಂಕಪಟ್ಟಿಯಿಂದ ನಿರ್ಧರಿಸಲು ಸಾಧ್ಯವಿಲ್ಲ… ಓದದೇ ಇದ್ದರೆ ಒಳ್ಳೆಯ ಉದ್ಯೋಗ ಸಿಗುವುದಿಲ್ಲ ಎಂಬುದು ಎಷ್ಟು ನಿಜವೋ ಓದದೆ ಇದ್ದವರು ಕೂಡ ಬದುಕಿನಲ್ಲಿ ಯಶಸ್ವಿಯಾಗಲು ಸಾಧ್ಯ ಎಂಬುದಕ್ಕೆ ನಮಗೆ ಸಾಕಷ್ಟು ನಿದರ್ಶನಗಳು ದೊರೆಯುತ್ತವೆ.
ಆದರೆ ನಿಜವಾಗಿ ಜಾಣ್ಮೆ ಎಂಬುದು ವ್ಯಕ್ತಿಯು ಕಾಲ ಕಾಲಕ್ಕೆ ತನ್ನಲ್ಲಿ ಹೆಚ್ಚಿಸಿಕೊಳ್ಳುವ ಜ್ಞಾನದ ಅನುಭವ ಎಂದರೆ ತಪ್ಪಿಲ್ಲ. ಹಾಗಾದರೆ ಇಂತಹ ಜಾಣ್ಮೆಯನ್ನು ಹೆಚ್ಚಿಸಿಕೊಳ್ಳಲು ಯಾವಾಗಲೂ ಜಾಣ್ಮೆಯನ್ನು ಕಾಪಿಟ್ಟುಕೊಳ್ಳಲು ಕೆಲವು ಸಲಹೆಗಳು ಇಂತಿವೆ. ಇದು ಲಿಂಗಬೇಧ, ವಯೋಬೇಧಗಳಿಲ್ಲದೆ ಎಲ್ಲರಿಗೂ ಅನ್ವಯಿಸುತ್ತದೆ.
ಪ್ರತಿದಿನ ರಾತ್ರಿ ಮಲಗುವ ಮುನ್ನ ಆ ದಿನ ಮಾಡಿದ ಕೆಲಸಗಳನ್ನು ಮತ್ತೊಮ್ಮೆ ನೆನಪಿಸಿಕೊಳ್ಳಿ. ಓದಿದ, ಕೇಳಿದ ವಿಷಯಗಳನ್ನು, ಬರೆದಿಟ್ಟುಕೊಂಡ ಮಾತುಗಳನ್ನು ಮತ್ತೊಮ್ಮೆ ನೆನಪಿಸಿಕೊಳ್ಳುವ ಮೂಲಕ ನೆನಪಿನ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು. ಮಾಡದೇ ಇರುವ ವಿಷಯಗಳ ಕುರಿತು ಪಶ್ಚಾತಾಪ ಪಡುವುದಕ್ಕಿಂತ ನಾಳೆ ಏನು ಮಾಡಬೇಕು ಎಂಬುದರ ಕುರಿತು ಚಿಂತಿಸಿ ಆ ನಿಟ್ಟಿನಲ್ಲಿ ಯಶಸ್ವಿಯಾಗಿ.
ವಿಭಿನ್ನ ದೃಷ್ಟಿಕೋನಗಳನ್ನು ಹೊಂದಿರುವ ಜನರೊಂದಿಗೆ ಬರೆಯಿರಿ… ನಿಮ್ಮಂತೆ ಯೋಚಿಸುವ ಜನರಿಗಿಂತ ವಿಭಿನ್ನವಾದ ಜನರೊಂದಿಗಿನ ಮಾತುಕತೆ, ಓದುವ, ಬರೆಯುವ ಹವ್ಯಾಸಗಳು ನಿಮ್ಮಲ್ಲಿ ಪ್ರಶ್ನೆಯನ್ನು ಕೇಳುವ, ಉತ್ತರಗಳನ್ನು ಹುಡುಕುವ, ವೈವಿಧ್ಯತೆಯನ್ನು ಅರಸುವ ಕ್ರಿಯೆಗಳಲ್ಲಿ ಸಹಾಯಕವಾಗುತ್ತದೆ. ಇದು ನಿಮ್ಮ ಜ್ಞಾನವಿಕಾಸಕ್ಕೆ ಸಹಕಾರಿ.
ಪ್ರತಿದಿನ ಒಂದೈದು ನಿಮಿಷ ಸುಮ್ಮನೆ ಕುಳಿತು ಮನದ ವಿಚಾರಗಳನ್ನು ತಹಬಂದಿಗೆ ತರಲು ಪ್ರಯತ್ನಿಸಿ. ಶಾಂತವಾದ ಕೊಳದಲ್ಲಿ ತಿಳಿಯಾದ ನೀರು ಕಾಣುವಂತೆ ಶಾಂತವಾದ ಮನಸ್ಥಿತಿಯಲ್ಲಿ ಹೊಸ ವಿಚಾರಗಳು, ಗೋಜಲುಗಳಿಗೆ ಉತ್ತರಗಳು, ಚಿಂತನೆಗೆ ಅವಕಾಶ ದೊರೆಯುತ್ತದೆ. ಇದೊಂದು ನಿಧಾನವಾದರೂ ನಿರಂತರವಾದ ಬೆಳವಣಿಗೆಯ ಕ್ರಿಯೆ… ಇಷ್ಟು ಸಾಕಲ್ಲವೇ ನಮ್ಮ ಜಾಣ್ಮೆಯನ್ನು ಹೆಚ್ಚಿಸಿಕೊಳ್ಳಲು!
ಹಿಂತಿರುಗಿ ಯೋಚಿಸಿ
ಯಾವುದೇ ಒಂದು ಗುರಿಯನ್ನು ಬದುಕಿನಲ್ಲಿ ಇಟ್ಟುಕೊಂಡಾಗ ಅದರ ಅಂತಿಮ ಫಲಿತಾಂಶದ ಕುರಿತು ಹಲವಾರು ಮಾರ್ಗಗಳ ಮೂಲಕ ತಲುಪುವ ಕುರಿತು ಯೋಚಿಸಿ. ಸಾಧ್ಯಾಸಾಧ್ಯತೆಗಳ ಕುರಿತು ಯೋಜಿಸಿ ಇದು ನಿಮ್ಮ ತರ್ಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಒಂದೊಳ್ಳೆಯ ಫಲಿತಾಂಶವನ್ನು ಪಡೆಯಬೇಕಾದರೆ
ಯೋಜನೆಯ ಆರಂಭದ ದಿನದಿಂದಲೂ ನಾವು ಕಾರ್ಯನಿರ್ವಹಿಸಬೇಕು ಎಂಬ ಅರಿವು ಮತ್ತು ವಿವಿಧ ರೀತಿಯ ಪ್ರಯತ್ನಗಳ ಕುರಿತ ಅವಗಾಹನೆ ನಮ್ಮನ್ನು ನಾವೇ ಉತ್ತಮಗೊಳಿಸಿಕೊಳ್ಳಲು ಸಹಾಯಕವಾಗುತ್ತದೆ.
ಕಲಿಯಿರಿ ಮತ್ತು ಕಲಿಸಿರಿ
ನೀವು ಕಲಿತ ವಿಷಯವನ್ನು ಬೇರೊಬ್ಬರಿಗೆ ಕಲಿಸುವ ಮೂಲಕ ನಿಮ್ಮ ಕಲಿಕೆಯ ಜ್ಞಾನವನ್ನು ಹೆಚ್ಚಿಸಿಕೊಳ್ಳಬಹುದು. ಹೀಗೆ ಉಂಟಾದ ಜ್ಞಾನ ಮನಸ್ಸಿನ ಪದರಗಳೊಳಗೆ ಶಾಶ್ವತವಾಗಿ ನೆಲೆ ನಿಲ್ಲುತ್ತದೆ. ನೀವು ಕಲಿತ ವಿಷಯವನ್ನು ಮತ್ತೊಬ್ಬರಿಗೆ ಸರಳವಾಗಿ ಹೇಳಿಕೊಡಲು ನಿಮಗೆ ಸಾಧ್ಯವಾದರೆ ಆ ವಿಷಯ ನಿಮಗೆ ಅರ್ಥವಾಗಿದೆ ಎಂದು ಅರ್ಥವಲ್ಲವೇ?
ಮೆದುಳಿಗೆ ಆಹಾರ
ಪ್ರತಿದಿನ ಒಂದು ಹೊಸ ವಿಷಯವನ್ನು ಕಲಿಯಿರಿ ನಿರಂತರವಾದ ಕಲಿಕೆಯ ಕ್ರಮ ನಮ್ಮ ಮೆದುಳನ್ನು ಸದಾ ಚುರುಕಾಗಿಸುತ್ತದೆ. ಚಿಕ್ಕ ಮಕ್ಕಳಿಗಂತೂ ಸರಿಯೇ ಸರಿ ದೊಡ್ಡವರಿಗೆ ಪತ್ರಿಕೆಗಳಲ್ಲಿ ಬರುವ ಪದಬಂಧ, ಸುಡೊಕುಗಳನ್ನು ಬಿಡಿಸುವುದು ಅವರ ಮೆದುಳಿನ ಹಸಿವಿಗೆ ಮೇವನ್ನು ಹಾಕಿದಂತೆ. ಪ್ರತಿಯೊಂದು ಹೊಸ ವಿಷಯದ ಕಲಿಕೆ ನಮ್ಮಲ್ಲಿ ನವ ಚೈತನ್ಯವನ್ನು ತರುತ್ತದೆ. ಹೊಸ ಹೊಸ ವಿಷಯಗಳ ಕುರಿತು ನೀವು ಯೋಚಿಸಿದಂತೆಲ್ಲ ನಿಮ್ಮ ಮೆದುಳನ್ನು ಸಾಣೆ ಹಿಡಿದಂತಾಗುತ್ತದೆ. ವಿಷಯದ ಕುರಿತು ಆಸಕ್ತಿ ಹೆಚ್ಚಾಗಿ ಮನಸ್ಸು ಸದಾ ಕ್ರಿಯಾಶೀಲವಾಗಿರುತ್ತದೆ.
ನಾವೆಲ್ಲರೂ ಒಂದು ಸುರಕ್ಷಾ ಕವಚದ ಒಳಗೆ ಕೆಲಸ ಮಾಡಲು ಇಚ್ಛಿಸುತ್ತೇವೆ… ನಮ್ಮ ಸುರಕ್ಷಾ ವಲಯದಿಂದ ಹೊರಗೆ ಅಪಾರಜ್ಞಾನದ, ಅವಕಾಶಗಳ ಭಂಡಾರ ನಮಗಾಗಿ ಕಾಯುತ್ತಿರುತ್ತದೆ. ಪುಟ್ಟ ಹಕ್ಕಿಯೊಂದು ತನ್ನನ್ನು ರಕ್ಷಣೆ ಎಂಬ ಬಂಧನದಲ್ಲಿಟ್ಟ ಚಿಪ್ಪಿನಿಂದ ತನ್ನೆಲ್ಲಾ ಶ್ರಮವನ್ನು ಹಾಕಿ ಹೊರಬರದ ಹೊರತು ಅದರ ದೈಹಿಕ ಅಂಗಗಳು ಬಲಿಷ್ಠವಾಗುವುದಿಲ್ಲ… ಹಾಗೆ ಹೊರಬಂದ ಹಕ್ಕಿಗೆ ವಿಶಾಲವಾದ ಪ್ರಪಂಚ ಹಲವರು ಸವಾಲುಗಳನ್ನು ಒಡ್ಡುತ್ತಾ ಎದುರುಗೊಳ್ಳುತ್ತದೆ… ಅಂತಹ ಒಂದೊಂದೇ ಸವಾಲುಗಳನ್ನು ಎದುರಿಸಿ ಕೆಲವೇ ತಿಂಗಳು ವರ್ಷಗಳ ಕಾಲ ಬದುಕುವ ಪುಟ್ಟ ಹಕ್ಕಿ ಬದುಕಿನ ಹೋರಾಟ ನಡೆಸುವುದಾದರೆ ದಶಕಗಳ ಕಾಲ ಬದುಕುವ ನಾವು ನಮ್ಮ ಸುರಕ್ಷತಾ ವಲಯದಿಂದ ಹೊರಬರಲು ಪ್ರಯತ್ನಿಸಲೇಬೇಕಲ್ಲವೇ.
ಚಿಕ್ಕಂದಿನಲ್ಲಿ ಅಮ್ಮನ ಕೈಹಿಡಿದು ನಡೆದಿದ್ದೇವೆ ನಿಜ… ದೊಡ್ಡವರಾದಂತೆ ಅಮ್ಮನ ಕೈ ಬಿಟ್ಟು ಸ್ವತಂತ್ರವಾಗಿ ನಡೆಯಲು, ಮನೆಗಿಂತ ಹೊರತಾದ ಹೊಸ ಪ್ರಪಂಚದಲ್ಲಿ ಕಾಲಿಡಲು ಮೊದಮೊದಲು ಆತಂಕವಾದರೂ ಪ್ರಯತ್ನಿಸುವುದಿಲ್ಲವೇ? ಪ್ರಯತ್ನಿಸಿ ಯಶಸ್ವಿಯಾಗುವುದಿಲ್ಲವೇ? ಹಾಗೆಯೇ ಪ್ರತಿ ಹೊಸ ಸವಾಲನ್ನು ಎದುರಿಸುವಂತೆಯೇ ಹೊಸ ವಿಷಯಗಳನ್ನು ಕಲಿಯಲು ಪ್ರಯತ್ನಿಸಬೇಕು. ಸಾಮಾನ್ಯವಾಗಿ ನಾವು ಬಳಸುವ ಕೈಯನ್ನು ಹೊರತುಪಡಿಸಿ ಮತ್ತೊಂದು ಕೈಯಿಂದ ಬರೆಯಲು ಮತ್ತಿತರ ಕೆಲಸಗಳಿಗೆ ಬಳಸಬೇಕು. ಪ್ರತಿನಿತ್ಯ ಓಡಾಡುವ ದಾರಿಯನ್ನು ಬಿಟ್ಟು ಬೇರೆ ಬೇರೆ ದಾರಿಗಳನ್ನು ಬಳಸಬೇಕು. ನಿಯಮಿತವಾಗಿ ಕೈಗೊಳ್ಳುವ ಕೆಲಸಗಳನ್ನು ತುಸು ಭಿನ್ನವಾಗಿ ಮಾಡಲು ಪ್ರಯತ್ನಿಸಬೇಕು. ಹೀಗೆ ನಮ್ಮ ಕ್ರಿಯಾಶೀಲತೆಯನ್ನು ಹೆಚ್ಚಿಸಿಕೊಂಡಾಗ ಬಹಳಷ್ಟು ವಿಷಯಗಳನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆಯಲ್ಲದೆ ಹೊಸ ಹೊಸ ವಿಷಯಗಳ ಕಲಿಕೆ ನಮ್ಮನ್ನು ಸದಾ ಕ್ರಿಯಾಶೀಲರನ್ನಾಗಿಸುತ್ತದೆ.
ಅಂತಹ ಕ್ರಿಯಾಶೀಲತೆಯನ್ನು ಬದುಕಿನಲ್ಲಿ ಪಡೆಯಲು ಪರೀಕ್ಷೆಗಳ ಮಾನದಂಡ ಬೇಕಿಲ್ಲ. ಮಕ್ಕಳು ಹದಿಹರೆಯದವರು ಮುದುಕರು ಎನ್ನದೆ ಆಬಾಲವೃದ್ದರಾದಿಯಾಗಿ ಎಲ್ಲರಲ್ಲೂ ಅಂತಹ ಒಂದು
ಭಾವ ಉದ್ಭವಿಸಲಿ ಎಂಬ ಆಶಯದೊಂದಿಗೆ..