ಬಿಜೆಪಿ ಪಕ್ಷದ ರಾಜ್ಯ ಚುನಾವಣಾಧಿಕಾರಿ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರಿಂದ ನೂತನ ಅಧ್ಯಕ್ಷರ ಹೆಸರು ಘೋಷಣೆ
ಬೆಂಗಳೂರು: ಚುನಾವಣಾ ಪ್ರಕ್ರಿಯೆ ಮುಗಿದ ಬಳಿಕ ಭಾರತೀಯ ಜನತಾ ಪಾರ್ಟಿ ರಾಜ್ಯದ 23 ಸಂಘಟನಾ ಜಿಲ್ಲೆಗಳಿಗೆ ಪಕ್ಷದ ಅಧ್ಯಕ್ಷರನ್ನು ಘೋಷಿಸಿದೆ.
ಮೈಸೂರು ನಗರಕ್ಕೆ ಚಾಮರಾಜ ಶಾಸಕ ಎಲ್.ನಾಗೇಂದ್ರ, ಬೆಂಗಳೂರು ಕೇಂದ್ರಕ್ಕೆ ಮಾಜಿ ಸಚಿವ ರಾಮಚಂದ್ರೇಗೌಡ ಅವರ ಪುತ್ರ ಎ.ಆರ್.ಸಪ್ತಗಿರಿಗೌಡ, ಉತ್ತರ ಕನ್ನಡಕ್ಕೆ ನಾರಾಯಣ ಶ್ರೀನಿವಾಸ ಹೆಗಡೆ, ಶಿವಮೊಗ್ಗಕ್ಕೆ ಎನ್.ಕೆ.ಜಗದೀಶ್, ಬೆಳಗಾವಿಗೆ ಗೀತಾ ಸುತಾರ್, ಕಲಬುರಗಿ ನಗರಕ್ಕೆ ಚಂದ್ರಕಾಂತ ಬಿ.ಪಾಟೀಲ್, ಕಲಬುರಗಿಗೆ ಅಶೋಕ್ ಬಗಲಿ. ಗ್ರಾಮಾಂತರ ಹಾಗೂ ಬೀದರ್‌ಗೆ ಸೋಮನಾಥ ಪಾಟೀಲ ಆಯ್ಕೆಯಾಗಿದ್ದಾರೆ.
ಪಟ್ಟಿಯಲ್ಲಿ ಸಿ.ಎಸ್.ನಿರಂಜನಕುಮಾರ್ (ಚಾಮರಾಜನಗರ), ಸತೀಶ್ ಕುಂಪಲ (ದಕ್ಷಿಣ ಕನ್ನಡ), ದೇವರಾಜ ಶೆಟ್ಟಿ (ಚಿಕ್ಕಮಗಳೂರು), ತಿಪ್ಪಣ್ಣ ಮಜ್ಜಗಿ (ಹುಬ್ಬಳ್ಳಿ-ಧಾರವಾಡ), ನಿಂಗಪ್ಪ ಡಿ.ಸುತಗಟ್ಟಿ (ಧಾರವಾಡ ಗ್ರಾಮಾಂತರ), ಸುಭಾಷ್ ದುಂಡಪ್ಪ ಪಾಟಿ (ಬೆಳಗಾವಿ ಗ್ರಾಮಾಂತರ), ಸತೀಶ್ ಅಪ್ಪಾಜಿಗೋಳ ಇದ್ದಾರೆ. ಚಿಕ್ಕೋಡಿ), ಬಸವರಾಜಪ್ಪಗೌಡ ವಿ (ಯಾದಗಿರಿ), ದಡೇಸಾಗೂರು ಬಸವರಾಜ್ (ಕೊಪ್ಪಳ), ಅನಿಲ್ ಕುಮಾರ್ ಮೋಕಾ (ಬಳ್ಳಾರಿ), ಸಂಜೀವ್ ರೆಡ್ಡಿ (ವಿಜಯನಗರ), ಬಿ ಸಂದೀಪ್ (ಚಿಕ್ಕಬಳ್ಳಾಪುರ), ಓಂ ಶಕ್ತಿ ಚಲಪತಿ (ಕೋಲಾರ), ಎಸ್ ಹರೀಶ್ (ಬೆಂಗಳೂರು ಉತ್ತರ), ಮತ್ತು ಸಿಕೆ ರಾಮಮೂರ್ತಿ (ಬೆಂಗಳೂರು ದಕ್ಷಿಣ) ಅವರು ಕೂಡ ಸೇರ್ಪಡೆಯಾಗಿದ್ದಾರೆ.
ಪಕ್ಷದ ರಾಜ್ಯ ಚುನಾವಣಾಧಿಕಾರಿ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ನೂತನ ಅಧ್ಯಕ್ಷರ ಹೆಸರು ಘೋಷಿಸಿ ಅಭಿನಂದಿಸಿದರು. ಪಕ್ಷದ ಜವಾಬ್ದಾರಿಯನ್ನು ನಿಭಾಯಿಸಿ, ತಳಮಟ್ಟದಲ್ಲಿ ಪಕ್ಷ ಸಂಘಟನೆಯನ್ನು ಬಲಪಡಿಸಿ, ಮುಂಬರುವ ಸವಾಲುಗಳನ್ನು ಎದುರಿಸಲು ಶಕ್ತಿ ತುಂಬುವ ಮೂಲಕ ಪಕ್ಷದ ವರ್ಚಸ್ಸು ಹೆಚ್ಚಿಸುವ ನಿಟ್ಟಿನಲ್ಲಿ ನಿರಂತರವಾಗಿ ಶ್ರಮಿಸಿ ಎಂದು ಹಾರೈಸಿದರು.
ವಿಜಯೇಂದ್ರ ಏಕಪಕ್ಷೀಯ ನಿರ್ಧಾರ :ಸುಧಾಕರ
ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಮತ್ತೆ ಭಿನ್ನಮತ ಸ್ಫೋಟಗೊಂಡಿದ್ದು, ಒಬ್ಬರಾದ ಮೆಲೆ ಒಬ್ಬರು ಬಹಿರಂಗವಾಗಿಯೇ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ.
ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಮಾಜಿ ಸಚಿವರಾದ ರಮೇಶ್ ಜಾರಕಿಹೊಳಿ, ಹಾಗೂ ಶ್ರೀರಾಮುಲು ನಂತರ ಇದೀಗ ವಿಜಯೇಂದ್ರ ವಿರುದ್ಧ ಮತ್ತೊಬ್ಬ ಮಾಜಿ ಸಚಿವ ಹಾಗೂ ಹಾಲಿ ಸಂಸದ ಡಾ. ಕೆ. ಸುಧಾಕರ್ ಅವರು ಬಹಿರಂಗವಾಗಿಯೇ ಗುಡುಗಿದ್ದಾರೆ.
ಚಿಕ್ಕಬಳ್ಳಾಪುರ ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಸಂದೀಪ್ ಅವರನ್ನು ಆಯ್ಕೆ ಮಾಡಿರುವುದರಿಂದ ಸಿಡಿದೆದ್ದಿರುವ ಸುಧಾಕರ್ ಇಂದು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಬಹಿರಂಗವಾಗಿಯೇ ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿದರು.
ಜಿಲ್ಲಾಧ್ಯಕ್ಷರ ನೇಮಕದಲ್ಲಿ ವಿಜಯೇಂದ್ರ ಅವರು ಏಕಪಕ್ಷೀಯ ನಿರ್ಧಾರ ಕೈಗೊಂಡಿದ್ದಾರೆ ಎಂದ ಆರೋಪಿಸಿದ ಚಿಕ್ಕಬಳ್ಳಾಪುರ ಬಿಜೆಪಿ ಸಂಸದ ಸುಧಾಕರ್ ಅವರು, ರಾಜ್ಯಾಧ್ಯಕ್ಷ ಸ್ಥಾನದಿಂದ ವಿಜಯೇಂದ್ರ ಅವರನ್ನು ಕೆಳಗಿಳಿಸಬೇಕು ಎಂದು ಆಗ್ರಹಿಸಿದ್ದಾರೆ.
ನಿಮ್ಮ ನಾಯಕತ್ವದಲ್ಲಿ ಕೋಲಾರ, ಚಿಕ್ಕಬಳ್ಳಾಪುರದಲ್ಲಿ ಒಂದು ಸೀಟು ಗೆಲ್ಲಿ ನೋಡೋಣ ಎಂದು ಕೆ. ಸುಧಾಕರ್ ಅವರು ವಿಜಯೇಂದ್ರ ಅವರಿಗೆ ಬಹಿರಂಗ ಸವಾಲು ಹಾಕಿದ್ದಾರೆ.
ತಮಗೆ ಬೇಕಾದವರಿಗೆ ಅಧ್ಯಕ್ಷ, ರಾಜ್ಯ ಕಾರ್ಯದರ್ಶಿ, ರಾಜ್ಯ ಪ್ರಧಾನ ಕಾರ್ಯದರ್ಶಿ, ರಾಜ್ಯ ಉಪಾಧ್ಯಕ್ಷರನ್ನು ಮಾಡಿಕೊಂಡಿದ್ದಾರೆ. ಇವತ್ತಿನ ರಾಜ್ಯಾಧ್ಯಕ್ಷ ಮಿಸ್ಟರ್ ಬಿ.ವೈ. ವಿಜಯೇಂದ್ರ ಅವರ ಧೋರಣೆ ಬೇಸರ ತಂದಿದೆ ಎಂದು ಅಸಮಾಧಾನ ಹೊರಹಾಕಿದರು.
ಬಿಜೆಪಿಯನ್ನು ನಂಬಿ ಇಲ್ಲಿ ಆಂತರಿಕ ಪ್ರಜಾಪ್ರಭುತ್ವ, ಆರ್ಎಸ್ಎಸ್ ಆದರ್ಶ ಇದೆ ಎಂದು ಪಕ್ಷದ ತತ್ವ ಸಿದ್ದಾಂತ ಒಪ್ಪಿ ಚಿಕ್ಕಬಳ್ಳಾಪುರದಿಂದ ಸ್ಪರ್ಧೆ ಮಾಡಿದೆ. ಬಿಜೆಪಿಗೆ ಮರಳು ಭೂಮಿಯಂತಿದ್ದ ಚಿಕ್ಕಬಳ್ಳಾಪುರದಲ್ಲಿ ನನ್ನ ರಾಜಕೀಯ ಭವಿಷ್ಯವನ್ನು ಒತ್ತೆ ಇಟ್ಟು ಬಿಜೆಪಿ ಸೇರಿದ್ದೆ. ಯಡಿಯೂರಪ್ಪನವರನ್ನು ಸಿಎಂ ಮಾಡಬೇಕು ಎಂದು 17 ಜನ ಬಿಜೆಪಿಗೆ ಬಂದೆವು. ಯಡಿಯೂರಪ್ಪನವರು ರಾಜೀನಾಮೆ ಕೊಟ್ಟ ಮೇಲೆ ಬೊಮ್ಮಾಯಿ ಅವರ ಜೊತೆ ಕೂಡಾ ಅಷ್ಟೇ ವಿಶ್ವಾಸದಿಂದ ಕೆಲಸ ಮಾಡಿದ್ದೇನೆ. ಅಂತಿಮವಾಗಿ ನನಗೆ ಬಿಜೆಪಿ ತತ್ವ ಸಿದ್ದಾಂತ ಅಷ್ಟೇ ಮುಖ್ಯ. ಪಕ್ಷ ಏನು ಹೇಳಿದೆಯೋ ಅದನ್ನು ಮಾಡಿಕೊಂಡು ಬಂದಿದ್ದೇನೆ. ಒಂದು ಬಾರಿ ನನಗೆ ಚಿಕ್ಕಬಳ್ಳಾಪುರದಲ್ಲಿ ಆಘಾತ ಆಯಿತು. ಇವತ್ತು ಪಕ್ಷ ಕಟ್ಟುತ್ತೇವೆ ಎಂದು ಹೊರಟಿದ್ದವರು ಟಾರ್ಗೆಟ್ ಮಾಡಿ ಸೋಲಿಸುವಂತಹ ಪ್ರಯತ್ನ ಮಾಡಿದರು ಎಂದು ಪರೋಕ್ಷವಾಗಿ ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿದರು.