ರಾಜ್ಯ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಹಾಗೂ ಶಾಸಕ ಸಿ.ಎಸ್.ನಾಡಗೌಡ ರಿಂದ ಸನ್ಮಾನ
ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಕ್ರೀಡೆಗಳು ಮಕ್ಕಳ ದೈಹಿಕ ಬೆಳವಣಿಗೆ ಜೊತೆಗೆ ಬುದ್ಧಿಮಟ್ಟವನ್ನು ಹೆಚ್ಚಿಸುತ್ತವೆ. ದೈಹಿಕವಾಗಿ, ಮಾನಸಿಕವಾಗಿ, ಆರೋಗ್ಯಕರ ಸ್ಥಿರವಾದ ದೇಹ ಇದ್ದಲ್ಲಿ ಮಕ್ಕಳು ಯಶಸ್ಸು ಕಾಣಲು ಸಾಧ್ಯ ಎಂದು ರಾಜ್ಯ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಹಾಗೂ ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ಹೇಳಿದರು.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಏಕಲವ್ಯ ಸ್ಕೆಟಿಂಗ್ ಅಕಾಡಮಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ರಾಜ್ಯ ಮಟ್ಟದ ಸ್ಕೆಟಿಂಗ್ ಸ್ಪರ್ದೆಗೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅವರು ಮಾತನಾಡಿದರು.
ಸಧ್ಯದ ಕಾಲಘಟ್ಟದಲ್ಲಿ ಬಹುತೇಕ ಪಾಲಕರು ತಮ್ಮ ಮಕ್ಕಳನ್ನು ಅಂಕಗಳ ಹಿಂದೆ ಓಡುವಂತೆ ಮಾಡಿದ್ದಾರೆ. ದೈಹಿಕ ಕ್ರೀಡೆಗಳಲ್ಲಿ ಹೆಚ್ಚಿನ ಆಸಕ್ತಿ ತೋರಿಸುತ್ತಿಲ್ಲ. ಆಟವಾಡುವ ಮಕ್ಕಳನ್ನು ಗದರಿಸಿ ಪುಸ್ತಕ ನೀಡುತ್ತಿದ್ದಾರೆ. ಇದರಿಂದ ಮಕ್ಕಳಲ್ಲಿರುವ ಶಕ್ತಿ ಖರ್ಚಾಗುತ್ತಿಲ್ಲ. ಮಕ್ಕಳಲ್ಲಿರುವ ದೈಹಿಕ ಮತ್ತು ಮಾನಸಿಕ ಶಕ್ತಿ ಖರ್ಚಾದಾಗ ಮಾತ್ರ ಮನಸ್ಸು ಶಾಂತವಾಗುತ್ತದೆ. ಮನಸ್ಸು ಶಾಂತವಾದಾಗ ಮಕ್ಕಳಲ್ಲಿ ಏಕಾಗ್ರತೆ ಹೆಚ್ಚುತ್ತದೆ. ಹಾಗಾಗಿ ಎಲ್ಲ ಪಾಲಕರು ತಮ್ಮ ಮಕ್ಕಳಿಗೆ ಓದಿನ ಜೊತೆಗೆ ದೈಹಿಕ ಕ್ರೀಡೆಗಳಲ್ಲಿ ಭಾಗವಹಿಸಲು ಪ್ರೋತ್ಸಾಹಿಸಬೇಕು ಎಂದರು.
ಜಿಲ್ಲಾ ಪಂಚಾಯತ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಮಾತನಾಡಿ, ಶ್ರೀಮಂತರ ಕ್ರೀಡೆಯಾಗಿದ್ದ ಸ್ಕೆಟಿಂಗ್ ಸಧ್ಯ ಮನೆ ಮನೆಗೆ ಪಾದಾರ್ಪಣೆ ಮಾಡಿ ನಮ್ಮೂರಿನ ಪ್ರತಿಭೆಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಆಯ್ಕೆಯಾಗುವಂತೆ ಯಾವುದೇ ಲಾಪೇಕ್ಷೆ ಇಲ್ಲದೇ ತರಬೇತಿ ನೀಡಿದ ಶಿಕ್ಷಕ ಶಿವಕುಮಾರ ಶಾರದಳ್ಳಿ ಸೇವೆ ಶ್ಲಾಘನೀಯ ಎಂದರು.
ಪ್ರಗತಿಪರ ಚಿಂತಕ ಅರವಿಂದ ಕೊಪ್ಪ, ಪು.ಸದಸ್ಯೆ ಸಹನಾ ಬಡಿಗೇರ, ಕರ್ನಾಟಕ ಸ್ಕೆಟಿಂಗ್ ರಾಜ್ಯಾಧ್ಯಕ್ಷ ಕಟ್ಟೆಸ್ವಾಮಿ, ಪ್ರಧಾನ ಕಾರ್ಯದರ್ಶಿ ಸೋಮಶೇಖರ, ಅಬ್ದುಲ್ ರಜಾಕ್, ತಿಲಕ, ಶ್ರೀನಿವಾಸ ಮಾತನಾಡಿದರು.
ಅಂತರಾಷ್ಟ್ರೀಯ ಸ್ಕೆಟಿಂಗ್ ಸ್ಪರ್ದೆಯಲ್ಲಿ ಭಾಗಿಯಾದ ಮಕ್ಕಳನ್ನು ಸನ್ಮಾನಿಸಿ ಗೌರವಿಸಲಾಯಿತು.
ತಹಶೀಲ್ದಾರ ಬಲರಾಮ ಕಟ್ಟಿಮನಿ, ಪುರಸಭೆ ಅಧ್ಯಕ್ಷ ಮಹೆಬೂಬ ಗೊಳಸಂಗಿ, ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ ಸೇರಿದಂತೆ ಪಾಲಕರು ಹಾಜರಿದ್ದರು. ಶಿಕ್ಷಕ ಮತ್ತು ಕಲಾವಿದ ಟಿ.ಡಿ.ಲಮಾಣಿ ಕಾರ್ಯಕ್ರಮ ನಿರ್ವಹಿಸಿದರು.