ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಆರೋಗ್ಯ ಮತ್ತು ಯೋಗಕ್ಷೇಮದಲ್ಲಿ ಬಾಯಿಯ ಆರೋಗ್ಯವು ಪ್ರಮುಖ ಪಾತ್ರವಹಿಸುತ್ತದೆ ಎಂದು ಬೆಂಗಳೂರಿನ ದಂತವೈದ್ಯ ಡಾ.ಪ್ರಮೋದ ಜಿ.ಪಾಟೀಲ ಅಭಿಪ್ರಾಯಪಟ್ಟರು.
ಸಿಂದಗಿ ನಗರದ ಆಲಮೇಲ ರಸ್ತೆಯಲ್ಲಿರುವ ಪಿ.ಇ.ಎಸ್ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ಸಿಂದಗಿ ಲಯನ್ಸ್ ಕ್ಲಬ್ ಹಮ್ಮಿಕೊಂಡ ಉಚಿತ ದಂತ ತಪಾಸಣೆ ಹಾಗೂ ಔಷಧ ವಿತರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಹಲ್ಲುಗಳ ಸ್ವಚ್ಛತೆ ಕಾಪಾಡಿಕೊಳ್ಳುವ ಜೊತೆಗೆ ಸೊಪ್ಪು, ತರಕಾರಿ, ಹಣ್ಣುಗಳಂತಹ ಖನಿಜಯುಕ್ತ ಆಹಾರ ಸೇವಿಸುವುದರಿಂದ ಹಲ್ಲುಗಳ ರಕ್ಷಣೆಯಾಗುತ್ತದೆ. ಪ್ರತಿಯೊಬ್ಬರು ಪ್ರತ್ಯೇಕ ಬ್ರಷ್‌ನಲ್ಲಿ ಹಲ್ಲು ಉಜ್ಜುವ ಅಭ್ಯಾಸ ಇಟ್ಟುಕೊಳ್ಳಬೇಕು. ಯಾವುದೇ ಆಹಾರ ಪದಾರ್ಥ ಸೇವಿಸಿದ ಮೇಲೆ ನೀರಿನಲ್ಲಿ ಬಾಯಿ ಮುಕ್ಕಳಿಸಬೇಕು. ಹಲ್ಲು ಉಜ್ಜುವಾಗ ವಸಡಿನಲ್ಲಿ ರಕ್ತಸ್ರಾವವಾಗುತ್ತಿದ್ದರೆ ವೈದ್ಯರ ಸಲಹೆ ಪಡೆದುಕೊಳ್ಳಬೇಕು. ಬೆಳಿಗ್ಗೆ ಮತ್ತು ರಾತ್ರಿ ತಪ್ಪದೆ ಬ್ರಷ್ ಮಾಡಬೇಕು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಈ ವೇಳೆ ದಂತ ವೈದ್ಯ ಸಿದ್ದು ಚಿಂಚೋಳ್ಳಿ ಮಾತನಾಡಿ, ಹಲ್ಲುಗಳಲ್ಲಿ ಸಣ್ಣ ಬ್ಯಾಕ್ಟೀರಿಯಾದಿಂದ ಸಮಸ್ಯೆ ಪ್ರಾರಂಭವಾಗಿ ಮುಂದೆ ದೊಡ್ಡ ಸಮಸ್ಯೆಗೆ ಕಾರಣವಾಗುತ್ತದೆ. ಹಾಗಾಗಿ ಹಲ್ಲಿನ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು. ಸಮಾರಂಭದ ಅಧ್ಯಕ್ಷತೆ ವಹಿಸಿದ ಪಿ.ಇ.ಎಸ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಬಿ.ಪಿ.ಕರ್ಜಗಿ ಮಾತನಾಡಿದರು. ಎಂ.ಜೆ.ಎಫ್. ಲಾಯಿನ್ ಕೆ.ಎಚ್. ಸೋಮಾಪೂರ ಹಾಗೂ ಲಾಯನ್ಸ್ ಕ್ಲಬ್ ಅಧ್ಯಕ್ಷ ಮಾಧು ಲೋಣಿ, ಎಸ್.ಬಿ. ಚಾಗಶೆಟ್ಟಿ ವೇದಿಕೆ ಮೇಲಿದ್ದರು.
ಈ ವೇಳೆ ೪೦೦ಕ್ಕೂ ಅಧಿಕ ವಿದ್ಯಾರ್ಥಿಗಳು ದಂತ ಚಿಕಿತ್ಸೆ ಪಡೆದುಕೊಂಡರು. ಶಿಬಿರದಲ್ಲಿ ನಿವೃತ್ತ ಪ್ರಾಚಾರ್ಯ ಆಯ್.ಬಿ.ಬಿರಾದಾರ, ಪದವಿ ಕಾಲೇಜಿನ ಪ್ರಾಚಾರ್ಯ ಜಿ.ಎಸ್.ಕಡಣಿ, ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಆರ್.ಬಿ.ಗೋಡಕರ ಸೇರಿದಂತೆ ಕಾಲೇಜಿನ ಬೋಧಕ ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಇದ್ದರು.