ಲೇಖನ
– ವೀಣಾ ಹೇಮಂತ್ ಗೌಡ ಪಾಟೀಲ್
ಮುಂಡರಗಿ
ಗದಗ ಜಿಲ್ಲೆ
ಉದಯರಶ್ಮಿ ದಿನಪತ್ರಿಕೆ
ದಾರಿಯಲ್ಲಿ ಹೋಗುವಾಗ ನಾನು ಬೀಳಿಸಿಕೊಂಡ ಕರ ವಸ್ತ್ರವನ್ನು ಎತ್ತಿಕೊಟ್ಟ ಪುಟ್ಟ ಬಾಲಕನಿಗೆ ಥ್ಯಾಂಕ್ಸ್ ಹೇಳಿ ಮುನ್ನಡೆದ ನನ್ನ ತಲೆಯಲ್ಲಿ ನೂರಾರು ಯೋಚನೆಗಳು.
ನಾನು ಅಬಾಕಸ್ ಕಲಿಯುತ್ತಿದ್ದಾಗ ಕೊನೆಯ ಮೂರು ಗ್ರಾಂಡ್ ಮಾಸ್ಟರ್ ಲೆವೆಲ್ ಗಳನ್ನು ಬೆಂಗಳೂರಿನ ನಮ್ಮ ಸಂಸ್ಥೆಯ ಕೇಂದ್ರ ಕಚೇರಿಯಲ್ಲಿಯೇ ಮೂರು ನಾಲ್ಕು ದಿನಗಳ ತರಬೇತಿಯನ್ನು ಪಡೆಯಬೇಕಾದ ಸಂದರ್ಭದಲ್ಲಿ ನನ್ನ ಪತಿಯ ದೊಡ್ಡಪ್ಪ ನನಗೆ ಜೊತೆಯಾಗಿ ಬರುತ್ತಿದ್ದರು. ಗದಗ ಜಿಲ್ಲೆಯ ಮುಂಡರಗಿಯಂತಹ ಚಿಕ್ಕ ಪಟ್ಟಣದಿಂದ ಬೆಂಗಳೂರಿಗೆ ನನ್ನನ್ನು ಕರೆದುಕೊಂಡು ಹೋಗುತ್ತಿದ್ದ ನನ್ನ ಮಾವ (ತಮ್ಮ ಮಗನ) ನನ್ನ ಭಾವನ ಮನೆಯಲ್ಲಿ ಮನೆಯಲ್ಲಿ ಇದ್ದುಕೊಂಡು ಈ ತರಬೇತಿಗಳನ್ನು ನಾನು ಪೂರೈಸಿಕೊಂಡಾಗ ತಮ್ಮ ಎಂಬತ್ತರ ಹರೆಯದಲ್ಲಿಯೂ ಕೂಡ ನನ್ನನ್ನು ಮನೆಯಿಂದ ತರಬೇತಿಯ ಸ್ಥಳಕ್ಕೆ ನನ್ನ ಭಾವನವರು ಮುಂಜಾನೆ ಬಿಟ್ಟು ತಮ್ಮ ಕಚೇರಿಗೆ ಹೋಗುವಾಗಲೂ ಕೂಡ ನನ್ನೊಂದಿಗೆ ಕಾರಿನಲ್ಲಿ ಬರುತ್ತಿದ್ದ ನನ್ನ ದೊಡ್ಡ ಮಾವ ಕೇಂದ್ರ ಕಚೇರಿಯ ಎಲ್ಲ ಸಹೋದ್ಯೋಗಿಗಳು ಬರುವವರೆಗೆ ಕುಳಿತು ನಂತರ ಮನೆಗೆ ಮರಳುತ್ತಿದ್ದರು. ಸಾಯಂಕಾಲ ಇನ್ನೇನು ನಮ್ಮ ತರಬೇತಿ ಮುಗಿಯುವ ಸಮಯಕ್ಕೆ ಮತ್ತೆ ಹಾಜರಾಗುವ ಅವರನ್ನು ಕಂಡು ನಮ್ಮ ಸಂಸ್ಥೆಯ ಮುಖ್ಯಸ್ಥರು ನನ್ನ ತರಗತಿಗೆ ಬಂದು ‘ವೀಣಾ ಮೇಡಂ, ನಿಮ್ಮ ಮಾವ ಬಂದುಬಿಟ್ಟಿದ್ದಾರೆ! ಎಂದು ಉಸುರುತ್ತಿದ್ದರು. 80ರ ಇಳಿ ವಯಸ್ಸಿನಲ್ಲಿಯೂ ಅವರ ಜೀವನ ಪ್ರೀತಿ, ಆತ್ಮೀಯತೆಗಳನ್ನು ಕಂಡು ಬೆರಗಾಗುವ ಸರದಿ ಬೇರೆಯವರದಾದರೆ, ಇದೆಲ್ಲವನ್ನೂ ಮೊದಲಿನಿಂದಲೂ ನೋಡಿ ಅರಿತಿದ್ದ ನನಗೆ ಮಾಮೂಲು ಎಂಬಂತ ಪರಿ.
ಇನ್ನು ನನ್ನ ಜೊತೆಗೆ ತರಬೇತಿಗೆ ಹಾಜರಾಗಿದ್ದ ಎಲ್ಲ ಸ್ನೇಹಿತರು ನನ್ನ ಪತಿಯ ದೊಡ್ಡಪ್ಪನ ( ಅಪ್ಪನಂತಹ ಪ್ರೀತಿ )ಕಾಳಜಿ, ಪ್ರೀತಿ, ವಿಶ್ವಾಸಗಳನ್ನು ಕಂಡು ಅಚ್ಚರಿ ಪಡುತ್ತಿದ್ದರು.
![1000966791](https://udayarashminews.com/wp-content/uploads/2025/02/1000966791.jpg)
ನಡೆದು ಪೂರೈಸಬಹುದಾದಷ್ಟು ದೂರವಿದ್ದ ಮನೆಗೆ ಮರಳಿ ಹೋಗುವಾಗ ನನ್ನ ಮಾವ( ನಾನವರನ್ನು ದೊಡ್ಡಪ್ಪ ಎಂದೇ ಕರೆಯುತ್ತಿದ್ದೆ ) ವೀಣಾ ಹಣ್ಣು ಬೇಕಾ ವೀಣಾ ಗೋಬಿ ಮಂಚೂರಿ ತಿಂತೀಯಾ, ಕಾರ್ನ್ ತಿನ್ನುತ್ತೀಯಾ? ಎಂದು ಹಲವಾರು ಅಂಗಡಿಗಳ ಮುಂದೆ ನಿಂತು ಕೇಳುತ್ತಿದ್ದರು. ನನ್ನ ಪುಸ್ತಕ ಪ್ರೀತಿಯನ್ನು ಅರಿತಿದ್ದ ಅವರು ಪುಸ್ತಕದ ಅಂಗಡಿಯ ಒಳಗೆ ಕರೆದೊಯ್ದು ಪುಸ್ತಕ ಖರೀದಿಸಲು ಸಲಹೆ ನೀಡುತ್ತಿದ್ದರು.
ಮೊದಮೊದಲು ಸಂಕೋಚದಿಂದ ಅವರು ಏನನ್ನಾದರೂ ತಿನ್ನಿಸಲು ಕೇಳಿದಾಗ ಬೇಡ ಎಂದು ಹೇಳುತ್ತಿದ್ದ ನನಗೆ ಅವರ ತಿನ್ನುವ ಆಸೆಗೆ ನಾನು ಜೊತೆಯಾಗಬೇಕು ಎಂಬ ಅರಿವು ಮೂಡಿ, ನಂತರ ಅಲ್ಲಲ್ಲಿ ಏನನ್ನಾದರೂ ತಿಂದು ಹೊಟ್ಟೆ ತುಂಬಿಸಿಕೊಂಡು ಮನೆಗೆ ಬರುತ್ತಿದ್ದೆವು.
ತರಬೇತಿಯ ಮಧ್ಯಂತರದ ವಿರಾಮದಲ್ಲಿ ನನಗೆ ಕರೆ ಮಾಡಿ ವಿಚಾರಿಸಿಕೊಳ್ಳುತ್ತಿದ್ದ ಓರಗಿತ್ತಿಯರ ಫೋನ್ ಕರೆಗಳು… ನಮ್ಮ ಮಾತುಕತೆಗಳನ್ನು ಆಲಿಸುತ್ತಿದ್ದ ಸ್ನೇಹಿತರು ನಾವು ಸ್ವಂತ ಓರಗಿತ್ತಿಯರನ್ನು ಭಾವಂದಿರನ್ನು ಹೊಂದಿದ್ದರೂ ಈ ಮಟ್ಟದ ಆತ್ಮೀಯತೆ ನಮಗೆ ಇಲ್ಲವೇ ಇಲ್ಲ ಎಂದು ಕರುಬುತ್ತಿದ್ದರು.
ಇನ್ನು ಹುಬ್ಬಳ್ಳಿಯಲ್ಲಿ ಮೊದಲ ಎಂಟು ಲೆವೆಲ್ ಗಳ ತರಬೇತಿಯನ್ನು ನಾನು ಪಡೆಯುವಾಗ ನನಗೆ ಸಹಾಯ ಸಹಕಾರ ನೀಡಿದ ಇನ್ನೋರ್ವ ಓರಗಿತ್ತಿ ಮತ್ತು ನನ್ನ ಸ್ನೇಹಿತೆ ಮತ್ತು ನನ್ನನ್ನು ತಮ್ಮ ಮನೆಯಲ್ಲಿ ಇರಿಸಿಕೊಂಡ ಇನ್ನೊಬ್ಬ ಸ್ನೇಹಿತೆಯ ತಾಯಿ ನನಗೆ ನೀಡಿದ ಸಹಕಾರ ಮರೆಯಲಾಗದ್ದು.
ನನ್ನೊಬ್ಬಳನ್ನೇ ಟ್ರೈನಿಂಗ್ ಗೆ ಕಳುಹಿಸಲು ನನ್ನ ಪತಿ ಹಿಂಜರಿಯುತ್ತಾರೆ ಎಂಬ ಕಾರಣದಿಂದ ಮತ್ತೋರ್ವ ಸ್ನೇಹಿತೆ ತನ್ನ ಪುಟ್ಟ ಮಕ್ಕಳನ್ನು ಮನೆಯಲ್ಲಿ ಬಿಟ್ಟು ಬಹುದೊಡ್ಡ ಟ್ರೈನಿಂಗ್ ಮೊತ್ತವನ್ನು ಕಟ್ಟಿ ಆ ಎಲ್ಲ ತರಬೇತಿಯ ದಿನಗಳಲ್ಲಿ ನನ್ನ ಜೊತೆಗೆ ತಾನು ಕೂಡ ಟ್ರೇನಿಂಗ್ ಪಡೆದದ್ದನ್ನು ಕೂಡ ನಾನು ಮರೆತಿಲ್ಲ.
ನಾನು ತರಬೇತಿ ಪಡೆಯುವ ಅವಧಿಯಲ್ಲಿ ನಮ್ಮ ಮನೆಗೆ ಬಂದು ನನ್ನ ಮಕ್ಕಳನ್ನು ಮನೆಯನ್ನು ಸಂಭಾಳಿಸುತ್ತಿದ್ದ ನನ್ನ ತಾಯಿ, ನನ್ನ ಗೈರು ಹಾಜರಿಯಲ್ಲಿ ಮಕ್ಕಳ ಮತ್ತು ಮನೆಯ ಎಲ್ಲಾ ಆಗುಹೋಗುಗಳನ್ನು ನೋಡಿಕೊಳ್ಳುತ್ತಿದ್ದ ನನ್ನ ಪತಿಯ ಸಹಕಾರವನ್ನು ಮರೆಯಲು ಸಾಧ್ಯವೇ ಇಲ್ಲ.
![1000966788](https://udayarashminews.com/wp-content/uploads/2025/02/1000966788.jpg)
ಆದರೆ ಇವರೆಲ್ಲರಿಗೂ ಎಂದಾದರೂ ಕೃತಜ್ಞತೆ ಸಲ್ಲಿಸಿದ್ದೇನೆಯೇ? ಎಂದು ನನ್ನನ್ನು ನಾನು ಪ್ರಶ್ನಿಸಿಕೊಂಡಾಗ ಉಹೂಂ! ಇಲ್ಲ ಎಂಬ ಸಿದ್ದ ಉತ್ತರ ನನಗೆ ದೊರೆತು ಮನ ಪೆಚ್ಚಾಗುತ್ತದೆ
ಹೌದಲ್ವೇ! ಯಾರನ್ನಾದರೂ ಸರಿಯಿರಿ ಎಂದು ಹೇಳುವಾಗ ‘ಎಕ್ಸ್ಕ್ಯೂಸ್ ಮಿ’ ಎಂದು ಅವರ ಗಮನ ಸೆಳೆಯುವ ನಾವು ನಮ್ಮಿಂದ ಅವರಿಗೆ ಅಲ್ಪ ತೊಂದರೆಯಾದರೂ ಕ್ಷಮೆ ಕೇಳುತ್ತೇವೆ. ಮನುಷ್ಯ ಸಹಜವಾಗಿ ಮಾಡಬಹುದಾದ ಅತಿ ಚಿಕ್ಕ ಸಹಾಯಕ್ಕೂ ಧನ್ಯವಾದಗಳನ್ನು ಅರ್ಪಿಸುತ್ತೇವೆ. ಬೇರೆಯವರ ಅದರಲ್ಲೂ ಗುರುತು ಪರಿಚಯವಿಲ್ಲದವರ ಸಹಾಯಕ್ಕೆ ಧನ್ಯವಾದಗಳನ್ನು ಅರ್ಪಿಸುವ ನಾವುಗಳು ನಮ್ಮ ಹತ್ತಿರದ, ಕುಟುಂಬದ ಸದಸ್ಯರಿಗೆ ಎಂದಾದರೂ ಹೀಗೆ ಮಾಡಿದ್ದೇವೆಯೇ?
ಉಹೂಂ!ಖಂಡಿತವಾಗಿಯೂ ಇಲ್ಲ.
ಯಾವತ್ತಾದರೂ ಈ ಬಗ್ಗೆ ಯೋಚಿಸಿದ್ದೇವೆಯೇ? ಎಂದರೆ ಅದು ಕೂಡ ಇಲ್ಲ. ಬಹುಶಹ ನಮಗೆ ಅವರು ಹತ್ತಿರದವರು, ಅವರಿಗೆ ನಮ್ಮ ಕೆಲಸ ಮಾಡಿ ಕೊಡುವುದರ ಹೊರತು ಬೇರೇನೂ ಕೆಲಸಗಳು ಇಲ್ಲ ಎಂಬ ನಮ್ಮ ಸುಪ್ತ ಮನಸ್ಸಿನ ನಗಣ್ಯ ಭಾವ, ನಮ್ಮವರಿಗೆ ನಾವು ಥ್ಯಾಂಕ್ಸ್ ಹೇಳಬೇಕೇ ಎಂಬ ಸರಳ ಸಿದ್ದ ಉತ್ತರ ಇದಕ್ಕೆ ಕಾರಣವೇ? ಎಂದರೆ ಇರಬಹುದು ಎಂದು ಮನ ತಲೆದೂಗುತ್ತದೆ.
ಚಿಕ್ಕ ಪುಟ್ಟ ಸಹಾಯಗಳಿಗೆಲ್ಲ ಧನ್ಯವಾದಗಳನ್ನು, ಸಣ್ಣ ಪುಟ್ಟ ತಪ್ಪುಗಳಿಗೆ ಸಾರಿ ಎಂದು ಕೇಳುವ ನಮಗೆ ನಮ್ಮ ಬದುಕಿಗಾಗಿ ತಮ್ಮ ಬದುಕನ್ನೇ ತೇಯುವ ತಂದೆ ತಾಯಿ, ಸಂಗಾತಿ, ಒಡಹುಟ್ಟಿದವರು, ಸ್ನೇಹಿತರು ಮಕ್ಕಳು ಮುಂತಾದವರಿಗೆ ಒಂದು ಕೃತಜ್ಞತೆಯ ಮಾತನ್ನು ಹೇಳಲು ಯಾವುದೋ ರೀತಿಯ ಸಂಕೋಚ, ಅರಿಯದ ಅಹಮ್ಮಿನ ಅಗೋಚರ ಗೋಡೆ ಅಡ್ಡ ಬರುತ್ತದೆಯಲ್ಲವೇ?
ಎಷ್ಟೋ ಬಾರಿ ಮನದಾಳದ ದುಃಖದ, ಅನಾರೋಗ್ಯದ, ಸಾವಿನ ಹತ್ತಿರ ಇರುವಾಗ ನಾವು ಹತ್ತಿರದವರ ಮುಂದೆ ತೋಡಿಕೊಳ್ಳುವ ಭಾವನೆಗಳನ್ನು
ಮೈಯಲ್ಲಿ ಕಸುವಿದ್ದಾಗ,ಮಾನಸಿಕ ಚೈತನ್ಯವಿದ್ದಾಗ
ಹೇಳಿಕೊಳ್ಳದೆ… ಮುಂದೆ ಅನಿರೀಕ್ಷಿತವಾದ ಘಟನೆಗಳು ಸಂಭವಿಸಿ ಹೇಳಿಕೊಳ್ಳಲು ಸಾಧ್ಯವಾಗದೇ ಹೋದಾಗ ಅಯ್ಯೋ! ಹೇಳಿಕೊಂಡು ಹಗುರಾಗಿ ಬಿಡಬಹುದಿತ್ತು ಎಂಬ ಪಶ್ಚಾತಾಪ ಭಾವ ಮೂಡಿ ಕೈ ಕೈ ಹಿಸುಕಿಕೊಳ್ಳುತ್ತೇವೆ. ನನ್ನ ದೊಡ್ಡ ಮಾವನವರು ತೀರಿ ಹೋದಾಗ ಇಂಥದ್ದೇ ಭಾವ ನನ್ನನ್ನು ಆವರಿಸಿತ್ತು. ನನ್ನ ಅತ್ತೆ ಮಾವರ ಮರಣದ ನಂತರ ಬೇಸಿಗೆಯ ರಜಾ ದಿನಗಳಲ್ಲಿ ಪ್ರತಿದಿನ ನಾನು ತರಗತಿಗಳನ್ನು ತೆಗೆದುಕೊಳ್ಳುವಾಗ ತಾವು ಇರುವ ಊರಿನಿಂದ ಸರಿಸುಮಾರು 25 ಕಿಲೋಮೀಟರ್ ದೂರ ಪಯಣಿಸಿ ನಮ್ಮಲ್ಲಿಗೆ ಬಂದು ಒಂದು ಕಪ್ ಚಹಾ ಕುಡಿದು ಆ ಎಲ್ಲ ದಿನಗಳಲ್ಲಿ ಮನೆಯ ಕಟ್ಟೆಯ ಮೇಲೆ ಕುಳಿತು ಮನೆಗೆ ಬರುವ ಹೋಗುವವರಿಗೆ ಉತ್ತರ ಕೊಡಲು ಕುಳಿತುಕೊಳ್ಳುತ್ತಿದ್ದ ಅವರ ಪರಿ ಅನನ್ಯವಾದದ್ದು.
ಪ್ರತಿದಿನ ಮುಂಜಾನೆಯಿಂದ ರಾತ್ರಿ ಮಲಗುವವರೆಗೆ ಮನೆಯ ಸರ್ವ ಸದಸ್ಯರ ಬೇಕು ಬೇಡಗಳನ್ನು ಪೂರೈಸುವ ತಾಯಿ ಮನದ ಹೆಣ್ಣು ಮಕ್ಕಳಿಗಂತೂ ಈ ಒಂದು ಹೇಳಿಕೊಳ್ಳುವಿಕೆ ನೂರಾನೆಯ ಬಲವನ್ನು ತರುವುದರಲ್ಲಿ ಆಶ್ಚರ್ಯವಿಲ್ಲ. ತನ್ನ ಬದುಕಿನ ಕನಸುಗಳೆಲ್ಲವನ್ನು ಮೂಟೆ ಕಟ್ಟಿಟ್ಟು ಉಳಿದೆಲ್ಲರ ಬದುಕನ್ನು ಕಟ್ಟಿಕೊಳ್ಳಲು ನೆರವಾಗುವ ಆಕೆಗೆ ನಮ್ಮ ಒಂದು ಕೃತಜ್ಞತೆಯ ಮಾತು ಪ್ರೀತಿಯ ಕಾಳಜಿಯ ಸೆಲೆ ಜೀವನೋತ್ಸಾಹವನ್ನು ಹೆಚ್ಚಿಸುತ್ತದೆ.
ಹೇಳಿಕೊಳ್ಳದೆ ಇದ್ದರೆ ಮನದಲ್ಲಿನ ಕೃತಜ್ಞತಾ ಭಾವ ಅಳಿಸಿಹೋಗುವುದೇ ಎಂಬ ಪ್ರಶ್ನೆ ಮೂಡಬಹುದು. ನಾವು ಹೇಳಲಿ ಎಂಬ ಭಾವದಿಂದ ಅವರೇನು ನಮಗೆ ಸಹಾಯ ಮಾಡಿರುವುದಿಲ್ಲ ನಿಜ, ಆದರೆ ವಿನೀತವಾಗಿ ಹೇಳಿಕೊಂಡಾಗ ನಮ್ಮಲ್ಲಿ ಮೂಡುವ ಕೃತಜ್ಞತಾ ಭಾವ ಮತ್ತು ಅವರಲ್ಲಿ ಮೂಡುವ ಸಾರ್ಥಕ್ಯ ಭಾವಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ ಅಲ್ಲವೇ?
ಹೇಳದೆ ಉಳಿದ ಇಂತಹ ಎಷ್ಟೋ ಮಾತುಗಳು ಸದಾ ನಮ್ಮನ್ನು ಕಾಡುತ್ತವೆ.
ಆದ್ದರಿಂದ ಸ್ನೇಹಿತರೆ, ಕಾಲ ಮಿಂಚುವ ಮುನ್ನ ನಮ್ಮ ಬದುಕಿನ ಹಲವಾರು ಉತ್ತಮ ಘಟನೆಗಳಿಗೆ ಕಾರಣವಾಗುವ ತಂದೆ ತಾಯಿ ಮತ್ತಿತರ ಕುಟುಂಬದ ಸದಸ್ಯರಿಗೆ, ಬಂಧು ಮಿತ್ರರಿಗೆ ಮಕ್ಕಳಿಗೆ ಸ್ನೇಹಿತರಿಗೆ ಒಂದು ಪುಟ್ಟ ಧನ್ಯವಾದವನ್ನು ಹೇಳುವ ಮೂಲಕ ನಮ್ಮ ಹೇಳದೆ ಉಳಿದ ಮಾತುಗಳನ್ನು… ಮನದಾಳದಿಂದ ಆಡಿ ಪೂರೈಸೋಣ ಏನಂತೀರಾ..?
![1000966869](https://udayarashminews.com/wp-content/uploads/2025/02/1000966869.jpg)