ಮೈಕ್ರೊ ಪೈನಾನ್ಸ ಕಂಪನಿಗಳು ಆರ್.ಬಿ.ಐ ನಿರ್ದೇಶನಗಳನ್ನು ಮತ್ತು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಖಡಕ್ ಸೂಚನೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕೃತ ಫೈನಾನ್ಸಗಳು ಸಂಸ್ಥೆಗಳು ಆರ್.ಬಿ.ಐನಲ್ಲಿ ನೋಂದಣಿ ಕುರಿತ ಸಮಗ್ರ ಮಾಹಿತಿಯನ್ನು ಒಂದು ವಾರದೊಳಗೆ ಸಲ್ಲಿಸುವಂತೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಮೈಕ್ರೋ ಫೈನಾನ್ಸ ಕಂಪನಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲೆಯ ಮೈಕ್ರೋ ಫೈನಾನ್ಸ್ ಕಂಪನಿಗಳ ವ್ಯವಸ್ಥಾಪಕರು ಹಾಗೂ ಸಿಬ್ಬಂದಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಈಗಾಗಲೇ ಫೈನಾನ್ಸ್ ಸಿಬ್ಬಂದಿಗಳು ಸಾಲ ವಸೂಲಾತಿ ಸಂದರ್ಭದಲ್ಲಿ ಸಾರ್ವಜನಿಕರೊಂದಿಗೆ ಅನುಚಿತವಾಗಿ ವರ್ತಿಸುವುದು ಹಾಗೂ ದೌರ್ಜಗಳ ಕುರಿತು ದೂರು ಬಂದಿವೆ. ಈ ಹಿನ್ನೆಲೆಯಲ್ಲಿ ಆರ್.ಬಿ.ಐ ನಿರ್ದೇಶನದಡಿಯಲ್ಲಿ ಫೈನಾನ್ಸ ಕಂಪನಿಗಳು ಕಾರ್ಯ ನಿರ್ವಹಿಸಬೇಕಾಗುತ್ತದೆ. ಒಂದು ವೇಳೆ ಆರ್.ಬಿ.ಐ ನಿರ್ದೇಶನದಂತೆ ನಡೆದುಕೊಳ್ಳದೆ ಇದ್ದಲ್ಲಿ ಅಂತಹ ಪ್ರಕರಣಗಳು ಕಂಡು ಬಂದಲ್ಲಿ ಅಥವಾ ದೂರುಗಳು ಬಂದಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು. ಮೈಕ್ರೋ ಪೈನಾನ್ಸ ಕಂಪನಿಗಳು ಆರ್.ಬಿ.ಐ ನಿರ್ದೇಶನಗಳನ್ನು ಸರಿಯಾಗಿ ಮನವರಿಕೆ ಮಾಡಿಕೊಳ್ಳಬೇಕು ಹಾಗೂ ಕಟ್ಟು ನಿಟ್ಟಾಗಿ ನಿಯಮಗಳನ್ನು ಪಾಲಿಸಬೇಕು ಹಾಗೂ ತಮ್ಮ ಸಿಬ್ಬಂದಿಗಳಿಗೂ ಆರ್.ಬಿ.ಐ ನಿರ್ದೇಶನಗಳ ಕುರಿತು ಮಾಹಿತಿ ನೀಡಬೇಕು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ, ಉಪವಿಭಾಗಾಧಿಕಾರಿಗಳಾದ ಅಭೀದ ಗದ್ಯಾಳ, ಗುರುನಾಥ ದಡ್ಡಿ, ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ವಿಜಯಕುಮಾರ ಆಜೂರ ಮೈಕ್ರೋ ಕಂಪನಿಗಳ ವ್ಯವಸ್ಥಾಪಕರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
“ಸಾರ್ವಜನಿಕರಿಗೆ ಸಾಲ ವಿತರಿಸುವ ಮುಂಚೆ ಅವರ ಪೂರ್ವಾಪರ ವಿವರಗಳನ್ನು ಪಡೆದು ಸಾಲ ನೀಡಬೇಕು. ಸಾಲ ವಸೂಲಾತಿ ಸಂದರ್ಭಗಳಲ್ಲಿ ಸಾರ್ವಜನಿಕರೊಂದಿಗೆ ಸೌಜನ್ಯಯುತವಾಗಿ ವರ್ತಿಸಬೇಕು ಹಾಗೂ ಸಾಲ ನೀಡುವ ಸಂದರ್ಭಗಳಲ್ಲಿ ಸಾಲಗಾರರಿಂದ ತಾವುಗಳು ಪಡೆದ ದಾಖಲೆಗಳನ್ನು ಪರೀಶಿಲಿಸಬೇಕು. ಸಾಲವನ್ನು ನಿಯಮಾನುಸಾರ ವಸೂಲಿ ಮಾಡಬೇಕಾದಲ್ಲಿ ನ್ಯಾಯಾಲಗಳ ಮೊರೆ ಹೋಗಿ ಅನುಮತಿ ಪಡೆದು ಸಾಲ ವಸೂಲಾತಿ ಕ್ರಮ ವಹಿಸಬೇಕು. ಜಿಲ್ಲೆಯಲ್ಲಿ ಅನಧಿಕೃತ ಮೈಕ್ರೋ ಫೈನಾನ್ಸ್ ಕಂಪನಿಗಳ ಕುರಿತು ಜಿಲ್ಲಾಧಿಕಾರಿಗಳ ಕಚೇರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೂ ಮಾಹಿತಿ ಒದಗಿಸಬೇಕು.”
– ಲಕ್ಷ್ಮಣ ನಿಂಬರಗಿ
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ದೂರು ಇಲ್ಲಿ ದಾಖಲಿಸಿ
ದೂರುಗಳನ್ನು ಜಿಲ್ಲಾಧಿಕಾರಿಗಳ ಕಚೇರಿ ಪ್ರ.ದ.ಸ ಬಿ.ಎಮ್ ಕರ್ನಾಳ ಮೋ.ಸಂ ೮೨೧೭೭೦೮೦೧೬ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮೋ.ಸಂ೯೪೮೦೮೦೪೨೦೧ ವಾಟ್ಸ ಆಪ್‌ಗೆ ಮಾಹಿತಿಯನ್ನು ಸಲ್ಲಿಸಬಹುದಾಗಿದೆ.