ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ನಾಗಠಾಣ ಕಾಲುವೆಯ ನಿರ್ಮಾಣ ಹಂತದ ಉಪಕಾಲುವೆ ಒಡೆದು ಜಮೀನುಗಳಿಗೆ ನೀರು ನುಗ್ಗಿದ ಪರಿಣಾಮ ಈರುಳ್ಳಿ ಬೆಳೆ ಹಾನಿಗೊಳಗಾದ ಘಟನೆ ಬುಧವಾರ ಜರುಗಿದೆ.
ತಾಲ್ಲೂಕಿನ ಹರನಾಳ ಗ್ರಾಮ ರಸ್ತೆಯಲ್ಲಿನ ನಾಗಠಾಣ ಕಾಲುವೆಯ ನಿರ್ಮಾಣ ಹಂತದಲ್ಲಿರುವ ಉಪಕಾಲುವೆ ಸೋಮವಾರ ರಾತ್ರಿ ಒಡೆದಿದ್ದು ಕಾಲುವೆ ನೀರು ಇಂಗಳಗಿ ಗ್ರಾಮದ ದೇವಪ್ಪ ಕೋಣ್ಣೂರ, ಶಾಂತಗೌಡ ಗೋಡ್ಯಾಳ ಇವರ ಜಮೀನುಗಳಲ್ಲಿ ನಿಂತು ನಂತರ ಈಗಷ್ಟೇ ಈರುಳ್ಳಿ ಭಿತ್ತನೆ ಮಾಡಿದ ಶರಣಗೌಡ ಗೋಡ್ಯಾಳ ಅವರ ಜಮೀನುಗಳಿಗೆ ಹರಿದಿದೆ. ಈಗ ಈರುಳ್ಳಿ ಭಿತ್ತನೆ ಮಾಡಿದ ೪ ಎಕರೆ ಜಮೀನು ಬಹುತೇಕ ನೀರಿನಿಂದ ಆವೃತ್ತವಾಗಿದ್ದು ಸಾಲ ಪಡೆದು ಭಿತ್ತನೆ ಮಾಡಿದ ರೈತ ಕಂಗಾಲಾಗಿದ್ದಾನೆ.
ಉಪಕಾಲುವೆ ನಿರ್ಮಾಣ ಹಂತದಲ್ಲಿ ಅವೈಜ್ಞಾನಿಕ ಕಾಮಗಾರಿ ಅಳವಡಿಸಿಕೊಂಡಿದ್ದೇ ಇಂದು ಕಾಲುವೆ ಒಡೆಯಲು ಮುಖ್ಯ ಕಾರಣ ಎಂದು ಆರೋಪಿಸಿರುವ ರೈತರು, ಕಾಲುವೆ ಒಡೆದು ಹಾನಿಯಾದ ಕುರಿತು ಗುತ್ತಿಗೆದಾರರಿಗೆ ದೂರವಾಣಿ ಮೂಲಕ ತಿಳಿಸಿದಾಗ ಅವರಿಂದ ಪ್ರಾಣ ಬೆದರಿಕೆ ಬಂತೆ ವಿನಹಃ ಯಾವುದೇ ಸಮಾಧಾನ ಬರಲಿಲ್ಲ.
ಒಡೆದ ಕಾಲುವೆಯ ಸ್ಥಳಕ್ಕೆ ಕೂಡಲೇ ಕೆಬಿಜೆಎನ್‌ಎಲ್ ಅಧಿಕಾರಿಗಳು ಭೇಟಿ ನೀಡಿ ಉತ್ತಮ ಗುಣಮಟ್ಟದ ಕಾಲುವೆ ಕಾಮಗಾರಿಗೆ ನಿರ್ದೇಶನ ನೀಡಬೇಕು ಜೊತೆಗೆ ಬೇಜವಾಬ್ದಾರಿ ಕಾಮಗಾರಿ ಕೈಗೊಂಡ ಗುತ್ತಿಗೆದಾರರಿಂದ ರೈತರಿಗೆ ಆದ ಹಾನಿ ಭರಿಸಬೇಕು ಇಲ್ಲವಾದಲ್ಲಿ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಇಂಗಳಗಿ ಗ್ರಾಮದ ರೈತರು ಎಚ್ಚರಿಸಿದ್ದಾರೆ.