ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಫೆ.೧ ಮತ್ತು ೨ರಂದು ಬಾಗಲಕೋಟೆ ಜಿಲ್ಲೆಯ ಸೂಕ್ಷೇತ್ರ ಕೂಡಲ ಸಂಗಮದ ಸಭಾ ಮಂಟಪದಲ್ಲಿ ವೀರಶೈವ ಲಿಂಗಾಯತ ಹಂಡೇವಜೀರ ಸಮಾಜದ ೩ನೇ ರಾಜ್ಯಮಟ್ಟದ ಬೃಹತ್ ಸಮಾವೇಶ ಹಮ್ಮಿಕೊಂಡಿದ್ದು ಜಿಲ್ಲೆಯ ಎಲ್ಲ ಹಂಡೇವಜೀರ ಸಮಾಜ ಬಾಂಧವರು ಭಾಗಿಯಾಗುವ ಮೂಲಕ ಸಮಾವೇಶದ ಮೆರುಗನ್ನು ಹೆಚ್ಚಿಸಬೇಕು ಎಂದು ಸಮಾಜದ ರಾಜ್ಯ ಉಪಾಧ್ಯಕ್ಷ ಶಂಕರಗೌಡ ರಾಯಗೊಂಡ, ಜಿಲ್ಲಾಧ್ಯಕ್ಷ ಸಂಗನಗೌಡ ಕರಭಂಟನಾಳ, ಯುವ ಘಟಕದ ಜಿಲ್ಲಾಧ್ಯಕ್ಷ ನಾಗರಾಜ ತಂಗಡಗಿ ಮತ್ತು ತಾಲೂಕು ಅಧ್ಯಕ್ಷ ಎಂ.ಬಿ.ಬಿರಾದಾರ ವಕೀಲರು ಮನವಿ ಮಾಡಿಕೊಂಡರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಈ ಸಮಾವೇಶವನ್ನು ಅಖಿಲ ಕರ್ನಾಟಕ ವೀರಶೈವ ಲಿಂಗಾಯತ ಹಂಡೆವಜೀರ ಸಮಾಜ ಬೆಂಗಳೂರು, ಚಾಲುಕ್ಯ ಸಂಸ್ಕೃತಿ ಅಧ್ಯಯನ ಪೀಠ ಕಲ್ಬುರ್ಗಿ ಇವರ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದು, ಫೆ.೧ ರಂದು ಹಂಡೆ ಅರಸರ ಆಕರಗಳ ವಿಚಾರ ಸಂಕಿರಣ, ಹಂಡೆ ಅರಸರ ಅಭಿವೃದ್ಧಿ ಚಿಂತನೆಗಳು, ಹಂಡೆ ಅರಸರ ಪ್ರಕಟಿತ ಕೃತಿಗಳ ಪರಾಮರ್ಶೆ, ಹಂಡೆ ವಜೀರ ಜನಾಂಗದ ಅನನ್ಯತೆ ಕುರಿತು ಗೋಷ್ಠಿಗಳು ನಡೆಯಲಿವೆ. ಫೆ.೨ ರಂದು ಬೃಹತ್ ಸಮಾವೇಶ, ಹಂಡೆ ಅರಸರ ಭಾವಚಿತ್ರ ಅನಾವರಣ, ಹಂಡೆ ಅರಸು ಮನೆತನಗಳ ಗ್ರಂಥಗಳ ಲೋಕಾರ್ಪಣೆ, ವಿಶೇಶ ಉಪನ್ಯಾಸಗಳು, ರಾಷ್ಟಿçÃಯ ಹಂಡೆಸಿರಿ ಪ್ರಶಸ್ತಿ ಪ್ರಧಾನ, ಗ್ರಂಥ ಪುರಸ್ಕಾರ, ಸಮಾಜದ ಸಾಧಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ ಹೀಗೆ ವಿವಿಧ ವಿಶೇಶ ಕಾರ್ಯಕ್ರಮಗಳು ಜರುಗಲಿವೆ. ಸಕ್ಕರೆ ಮತ್ತು ಕೃಷಿ ಸಚಿವ ಶಿವಾನಂದ ಪಾಟೀಲ, ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ, ಮುದ್ದೇಬಿಹಾಳದ ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ, ಲೋಕಸಭಾ ಸದಸ್ಯರುಗಳಾದ ರಮೇಶ ಜಿಗಜಿಣಗಿ ಮತ್ತು ಪಿ.ಸಿ.ಗದ್ದಿಗೌಡರ ಸೇರಿದಂತೆ ಹಲವು ನಾಯಕರು ಭಾಗಿಯಾಗಲಿದ್ದು ಸಮಾಜದ ಎಲ್ಲ ಭಾಂಧವರು ತಪ್ಪದೇ ಭಾಗಿಯಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ವಿನಂತಿಸಿದರು.
ಈ ವೇಳೆ ಸಮಾಜದ ತಾಲೂಕು ಉಪಾಧ್ಯಕ್ಷ ಭೀಮನಗೌಡ ಬಿರಾದಾರ ಪ್ರಮುಖರಾದ ಬಾಲನಗೌಡ ಹೊಸಗೌಡರ, ಹಣಮಗೌಡ ಪಾಟೀಲ, ಸಾಗರ ಹುನಕುಂಟಿ ಇದ್ದರು.