ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯಲ್ಲಿ ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಕ್ರೈಸ್ ವಸತಿ ನಿಲಯಗಳಲ್ಲಿ ಹಾಸ್ಟೇಲ್ & ವಸತಿ ಶಾಲಾ ಹೊರಗುತ್ತಿಗೆ ನೌಕರರ ಬೇಡಿಕೆಗಳ ಈಡೇರಿಕೆಗೆ ಅಹೋರಾತ್ರಿ ಧರಣಿಯನ್ನು ಕರ್ನಾಟಕ ರಾಜ್ಯ ಹಾಸ್ಟೇಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರುಗಡೆ ಅಹೋರಾತ್ರಿ ಧರಣಿ ಹಮ್ಮಿಕೊಂಡಿದ್ದು, ಈ ಅಹೋರಾತ್ರಿ ಹೋರಾಟವು ೧೧ ನೇ ದಿನಕ್ಕೆ ಮುಂದುವರೆದಿದೆ.
ಬಾಕಿ ವೇತನ ಪಾವತಿಸಬೇಕು, ಬೀದರ ಮಾದರಿಯಲ್ಲಿ ಸಹಕಾರ ಸಂಘದ ಮೂಲಕ ವೇತನ ಪಾವತಿಸಬೇಕು. ಖಾಯಂ ನೌಕರರ ಸ್ಥಳದಲ್ಲಿ ಮಾತ್ರ ಖಾಯಂ ನೌಕರರ ವರ್ಗಾವಣೆ ಮಾಡಬೇಕು. ವಾರಕ್ಕೊಂದು ರಜೆ ಕಡ್ಡಾಯವಾಗಿ ಕೊಡಬೇಕು. ಖಾಯಂ ನೌಕರರು ೧೫ ದಿನಕ್ಕಿಂತ ಹೆಚ್ಚು ರಜೆ ಹಾಕಿದಾಗ ಆ ಸ್ಥಳದಲ್ಲಿ ತಾತ್ಕಾಲಿಕವಾಗಿ ಹೊರಗುತ್ತಿಗೆ ನೌಕರರನ್ನು ನೇಮಿಸಬೇಕು. ಕನಿಷ್ಟ ವೇತನ ೩೧ ಸಾವಿರ ನಿಗದಿ ಪಡಿಸಬೇಕು. ನಿವೃತ್ತಿ ವರೆಗೆ ಸೇವಾ ಭದ್ರತೆ ಕೊಡಬೇಕು. ೧೦ ವರ್ಷ ಮೆಲ್ಪಟ್ಟ ಸೇವೆ ಸಲ್ಲಿಸಿದ ನೌಕರರಿಗೆ ಕ್ಷೇಮಾಭಿವೃದ್ಧಿ ಯೋಜನೆಯಲ್ಲಿ ನೇಮಕಾತಿ ಮಾಡಬೇಕು.ಸಿಬ್ಬಂದಿ ಕಡಿತ ಮಾಡಿದ ಆದೇಶ ವಾಪಾಸ ಪಡೆಯಬೇಕು. ಹಿಂದಿನಂತೆ ೧೦೦ ವಿದ್ಯಾರ್ಥಿಗಳಿಗೆ ೫ ಜನ ಅಡಿಗೆ ಸಿಬ್ಬಂದಿ ಇರಬೇಕು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಬಾಲಕರ ವಸತಿ ನಿಲಯಗಳಿಗೆ ರಾತ್ರಿ ಕಾವಲುಗಾರರನ್ನು ನೇಮಿಸಬೇಕು.
ಈ ಅಹೋರಾತ್ರಿ ಹೋರಾಟಕ್ಕೆ ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ, ಭಾರತಿ ವಾಲಿ ಜನವಾದಿ ಮಹಿಳಾ ಸಂಘಟನೆ, ಸುರೇಖಾ ರಜಪೂತ, ರೈತ ಸಂಘದ ಮುಖಂಡರು, ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡರು, ಕರ್ನಾಟಕ ಕೃಷಿ ಕೂಲಿಕಾರರ ಸಂಘ, ಮುಖಂಡರು ತಮ್ಮ ಬೆಂಬಲವನ್ನು ಸೂಚಿಸಿದರು.
ಸಂಘದ ಹುಲಗಪ್ಪ ಎಚ್. ಚಲವಾದಿ, ಜಿಲ್ಲಾಧ್ಯಕ್ಷರು, ಲಕ್ಷ್ಮಣ ಮಸಳಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಯಮನಪ್ಪ ಬಜಂತ್ರಿ ಜಿಲ್ಲಾ ಸಹ ಕಾರ್ಯದರ್ಶಿ, ರಾಮಚಂದ್ರ ಕೋಳಿ, ಗೋಪಾಲ ಅವದಿ, ಮೀನಾಕ್ಷಿ ತಳವಾರ, ಶಾಂತಾ ಕ್ವಾಟಿ ನೂರಜಾನ ಯಲಗಾರ, ಮಲ್ಲಿಕಾರ್ಜುನ ಚಲವಾದಿ, ಗೌರಕ್ಕ ಬೀಳೂರ, ವೈಶಾಲಿ ಸಮಗೊಂಡ, ಅರವಿಂದ ಲಮಾಣಿ, ಮರೆಪ್ಪ ಚಲವಾದಿ, ಕಮಲಾಕ್ಷಿ ದೊಡಮನಿ, ಶಿವಯೋಗೆಪ್ಪ ದೊಡಮನಿ, ಲಕ್ಷ್ಮೀಪುತ್ರ ಕುರಮಲ್, ಸುಖನ್ಯಾ ದರ್ಗಾ, ನಿಂಗಪ್ಪ ವಾಲಿಕಾರ, ಸಂಗಮ್ಮ ಹಂಜಗಿ ಹಾಜರಿದ್ದರು.