ಮಹಿಳಾ ವಿವಿಯ ಹಂಗಾಮಿ ಕುಲಪತಿ ಪ್ರೊ.ಶಾಂತಾದೇವಿ ಟಿ ಅಭಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಮಹಿಳೆಯರು ಎಲ್ಲ ಸಮಸ್ಯೆಗಳಿಂದ ಹೊರಬರಲು ಆರ್ಥಿಕವಾಗಿ ಸ್ವಾವಲಂಬಿಯಾಗಬೇಕು ಎಂದು ಮಹಿಳಾ ವಿವಿಯ ಹಂಗಾಮಿ ಕುಲಪತಿ ಪ್ರೊ. ಶಾಂತಾದೇವಿ ಟಿ ಹೇಳಿದರು.
ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಅಹಲ್ಯಾಬಾಯಿ ಸ್ನಾತಕೋತ್ತರ ಮಹಿಳಾ ಅಧ್ಯಯನ, ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರ, ಮತ್ತು ಸೆಲ್ಕೋ ಸೋಲಾರ್ ಲೈಟ್ ಪ್ರೈವೇಟ್ ಲಿಮಿಟೆಡ್ ಬೆಂಗಳೂರು, ವಿಜಯಪುರ ಶಾಖೆ ಇವರ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ‘ಸಮೃದ್ಧಿ ಸಂತೃಪ್ತಿ’ ಗ್ರಾಮೀಣ ಮಹಿಳೆಯರ ಸಬಲೀಕರಣದಲ್ಲಿ ಸೌರಶಕ್ತಿಯ ಪಾತ್ರ ಎಂಬ ವಿಷಯದ ಕುರಿತು ಎರಡು ದಿನಗಳ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸ್ವಾವಲಂಬಿತನವೆಂದರೆ ದೊಡ್ಡ ಉದ್ಯಮಿಯಾಗುವುದು ಅಥವಾ ಅಪಾರ ಸಂಪತ್ತು ಸಂಪಾದಿಸುವುದಲ್ಲ, ಆದರೆ ತಮಗಾಗಿ ಮತ್ತು ತಮ್ಮ ಕುಟುಂಬಕ್ಕಾಗಿ ಆರ್ಥಿಕವಾಗಿ ಸುಸ್ಥಿರ ಜೀವನವನ್ನು ರೂಪಿಸಿಕೊಳ್ಳುವುದು. ಮಹಿಳೆಯರು ತಮ್ಮ ನೈಪುಣ್ಯತೆಯನ್ನು ಅರಿತು, ಅದನ್ನು ಅಭಿವೃದ್ಧಿಪಡಿಸಿಕೊಂಡರೆ, ಸ್ವತಂತ್ರವಾಗಿ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಮಹಿಳಾ ವಿವಿಯ ಕುಲಸಚಿವ ಶಂಕರಗೌಡ ಸೋಮನಾಳ ಮಾತನಾಡಿ, ಮಹಿಳಾ ಸ್ವಸಹಾಯ ಸಂಘಗಳ ಪಾತ್ರ ಶ್ಲಾಘನೀಯ. ಎಲ್ಲರು ಸಂತೃಪ್ತಿ ಮತ್ತು ಸಮೃದ್ಧಿಯಿಂದ ಬದುಕನ್ನು ನಡೆಸಲು ಹಲವಾರು ಕೌಶಲ್ಯಗಳನ್ನು ಕಲಿತುಕೊಳ್ಳಬೇಕು ಎಂದರು.
ಇದೇ ಸಂದರ್ಭದಲ್ಲಿ ಮೌಲ್ಯಮಾಪನ ಕುಲಸಚಿವ ಪ್ರೊ.ಎಚ್.ಎಂ ಚಂದ್ರಶೇಖರ ಮಾತನಾಡಿ, ಉತ್ಪಾದನೆಯನ್ನು ಮಾಡಲು ವಿದ್ಯುತಚ್ಛಕ್ತಿಯ ಅವಶ್ಯಕತೆಯಿದೆ. ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ಚಚಕ್ತಿ ಕೊರತೆಯು ಇದ್ದು ನೈಸರ್ಗಿಕವಾಗಿ ದೊರಕುವ ಸೌರಶಕ್ತಿಯನ್ನು ಬಳಸಿಕೊಂಡು ಸುಸ್ಥಿರ ಅಭಿವೃದ್ಧಿಯನ್ನು ಸುಲಭವಾಗಿ ಮಾಡಿಕೊಳ್ಳಬಹುದು. ಮತ್ತು ಜಾಗತಿಕ ತಾಪಮಾನವನ್ನು ತಡೆಗಟ್ಟಲು ಇದರಿಂದ ಸಾಧ್ಯವಾಗುತ್ತದೆ ಎಂದರು.
ಕಾರ್ಯಗಾರದಲ್ಲಿ ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಜಿ.ಎಸ್.ರಾಠೋಡ ಮಾತನಾಡಿ, ಸ್ವಸಹಾಯ ಸಂಘಗಳ ಉದ್ದೇಶವೇ ಮಹಿಳಾ ಸಬಲೀಕರಣವಾಗಿದೆ. ಸ್ತ್ರೀ ಶಕ್ತಿಸಂಘಗಳ ಮೂಲಕ ಗುಂಪು ಚಟುವಟಿಕೆಗಳನ್ನು ಮಾಡಲು ಸರ್ಕಾರ ಯೋಜನೆಗಳನ್ನು ರೂಪಿಸಿದೆ. ಯಾವುದೇ ಒಂದು ಉದ್ಯಮ ಬೆಳೆಯಬೇಕಾದರೆ ಗುಂಪು ಚಟುವಟಿಕೆಗಳು ಅಗತ್ಯವೆಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಕೌಶಲ್ಯ ಅಭಿವೃದ್ಧಿ ಅಧಿಕಾರಿ ಸಿ.ಬಿ.ಕುಂಬಾರ, ಲೀಡಬ್ಯಾಂಕ್‌ನ ವ್ಯವಸ್ಥಾಪಕ ನೇತಾಜಿ ಗೌಡರ, ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ವಿಶ್ವನಾಥ ಶಹಾಪುರ, ಸೆಲ್ಕೋಸೋಲಾರ ಉದ್ಯಮಿ ಶಾಂತಾಬಾಯಿ ತೋಳನೂರ, ಉಮಾ ಪಾಟೀಲ, ಸೆಲ್ಕೋ ಸೋಲಾರನ ಮುಖ್ಯ ವ್ಯವಸ್ಥಾಪಕಿ ಮತ್ತು ಸಾಂಸ್ಥಿಕ ಸಂಪರ್ಕಾಧಿಕಾರಿ ಸಂಹಿತಾ ಮಜುಂದಾರ ಭಟ್ಟಾಚಾರ್ಯ ಮಾತನಾಡಿದರು.
ಕಾರ್ಯಾಗಾರದಲ್ಲಿ ಮಹಿಳಾ ಅಧ್ಯಯನ ಕೇಂದ್ರದ ಸಿಬ್ಬಂದ್ದಿ ಡಾ. ಸರೋಜಾ ಸಂತಿ, ಡಾ. ಭಾಗ್ಯಶ್ರೀ ದೊಡಮನಿ, ಡಾ.ರಜಿಯಾ, ಸೆಲ್ಕೋ ಸೋಲಾರನ ಸಿಬ್ಬಂದ್ಧಿ ಶಿವಪ್ರಸಾದ, ಗುರುಮೂರ್ತಿ, ಶಿವಕುಮಾರ, ಸಹನಾ, ನಿವೇದಿತಾಭಟ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮಹಿಳಾ ಅಧ್ಯಯನ ಕೇಂದ್ರದ ನಿರ್ದೇಶಕಿ ಪ್ರೊ. ಲಕ್ಷ್ಮೀದೇವಿ ವೈ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಡಾ.ಶಶಿಕಲಾ ರಾಠೋಡ ನಿರೂಪಿಸಿದರು. ನಿವೇಧಿತಾಭಟ್ ವಂದಿಸಿದರು.