ವಿಜಯಪುರ: ವಿಜಯಪುರ ಜಿಲ್ಲೆಯ ೮ ವಿಧಾನಸಭಾ ಮತಕ್ಷೇತ್ರಗಳ ವ್ಯಾಪ್ತಿಯಲ್ಲಿ ಮೇ.೧೦ ರಂದು ಜರುಗುವ ಮತದಾನ ಹಾಗೂ ಮೇ. ೧೩ ರಂದು ನಡೆಯುವ ಮತ ಏಣಿಕೆ ಕಾರ್ಯಕ್ಕೆ ಎಲ್ಲ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ತಿಳಿಸಿದರು.
ಜಿಲ್ಲಾ ಪಂಚಾಯತ್ ಕಟ್ಟಡದಲ್ಲಿರುವ ಎನ್‌ಐಸಿ ಕೇಂದ್ರದಲ್ಲಿ ಚುನಾವಣಾ ಆಯೋಗದೊಂದಿಗೆ ವಿಜಯಪುರ ಜಿಲ್ಲೆಯ ಸಿದ್ಧತೆಗಳ ಕುರಿತು ವಿಡಿಯೋ ಕಾನ್ಫರೆನ್ಸ್ನಲ್ಲಿ ಮಾಹಿತಿ ನೀಡಿದ ಅವರು, ಜಿಲ್ಲೆಯ ೮ ವಿಧಾನಸಭಾ ಮತಕ್ಷೇತ್ರಗಳಲ್ಲಿ ೯೬೬೫೩೫ ಪುರುಷ, ೯೨೬೦೯೬ ಮಹಿಳಾ ಮತದಾರರು, ೨೨೧ ಇತರರು ಸೇರಿದಂತೆ ಒಟ್ಟು ೧೮,೯೨,೮೫೨ ಮತದಾರರಿದ್ದು, ಜಿಲ್ಲೆಯಾದ್ಯಂತೆ ೨೦೭೨ ಹಾಗೂ ಹೆಚ್ಚುವರಿಯಾಗಿ ೬ ಮತಗಟ್ಟೆಗಳು ಸೇರಿದಂತೆ ೨೦೭೮ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ೧,೪೭,೫೫೪ ಎಪಿಕ್ ಕಾರ್ಡ್ಗಳನ್ನು ಪೂರ್ಣ ಪ್ರಮಾಣದಲ್ಲಿ ವಿತರಿಸಲಾಗಿದೆ. ಮತದಾರರಿಗೆ ಓಟರ್ ಸ್ಲೀಪ್‌ಗಳನ್ನು ತಲುಪಿಸಲಾಗುತ್ತಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಸ್ಥಾಪಿಸಲಾದ ಮತಗಟ್ಟೆಗಳಲ್ಲಿ ಮೂಲಭೂತ ಸೌಕರ್ಯಗಳಾದ ವಿಶ್ರಾಂತಿ ಕೊಠಡಿ, ಶಾಮಿಯಾನಾ, ಆಸನ, ಕುಡಿಯುವ ನೀರು, ಶೌಚಾಲಯಗಳನ್ನು ಸ್ಥಾಪಿಸಲಾಗಿದೆ. ಮತಗಟ್ಟೆ ಮುಂದೆ ಸರತಿ ಸಾಲು ನಿಲ್ಲುವುದನ್ನು ತಪ್ಪಿಸಲು ಅವಶ್ಯಕ ಕ್ರಮ ವಹಿಸಲಾಗಿದೆ. ಮತದಾನ ಸಂದರ್ಭದಲ್ಲಿ ಜನಸಂದಣಿ ಉಂಟಾಗದAತೆ ನೋಡಿಕೊಳ್ಳಲು ಬ್ಯಾರಿಕೇಡ್ ವ್ಯವಸ್ಥೆ, ಎನ್‌ಎಸ್‌ಎಸ್ ಸ್ವಯಂ ಸೇವಕರ ಸೇವೆಯನ್ನು ಪಡೆಯಲಾಗುತ್ತಿದೆ ಎಂದು ಹೇಳಿದರು.
ಮನೆಯಿಂದ ಅಂಚೆ ಪತ್ರದ ಮೂಲಕ ಮತದಾನ ಮಾಡುವ ೮೦ ವರ್ಷ ಮೇಲ್ಪಟ್ಟ ಹಾಗೂ ವಿಶೇಷಚೇತನ ಮತದಾರರ ಮತದಾನ ಪ್ರಕ್ರಿಯೆ ಜಿಲ್ಲೆಯ ೮ ವಿಧಾನಸಭಾ ಮತಕ್ಷೇತ್ರಗಳಲ್ಲಿ ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ. ಪಾರದರ್ಶಕ, ನ್ಯಾಯಸಮ್ಮತ ಚುನಾವಣೆ ನಡೆಸಲು ಚುನಾವಣಾ ಕಾರ್ಯಕ್ಕೆ ನಿಯೋಜಿತ ಅಧಿಕಾರಿಗಳಿಗೆ ಎರಡು ಹಂತದ ತರಬೇತಿ ಯಶಸ್ವಿಯಾಗಿ ನೀಡಲಾಗಿದೆ. ಈಗಾಗಲೇ ಸಾಮಾನ್ಯ ವೀಕ್ಷಕರ ಜೊತೆ ಮತ ಏಣಿಕೆ ಕೇಂದ್ರವಾದ ಸೈನಿಕ್ ಶಾಲೆಗೆ ಭೇಟಿ ನೀಡಿ ಅಗತ್ಯ ಸಿದ್ಧತೆಗಳ ಕುರಿತು ಪರಿಶೀಲನೆ ನಡೆಸಲಾಗಿದ್ದು, ಅಗತ್ಯ ಪೋಲಿಸ್ ಸಿಬ್ಬಂದಿ ವ್ಯವಸ್ಥೆ ಸೇರಿದಂತೆ ಯಾವುದೇ ಗೊಂದಲವಿಲ್ಲದೇ ಮತ ಏಣಿಕೆ ಕಾರ್ಯಕ್ಕೆ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಎಚ್.ಡಿ.ಆನಂದಕುಮಾರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ, ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರೂ ಆದ ಸಾಮಾಜಿಕ ಜಾಲತಾಣ ಪರಿಶೀಲನಾ ಕೋಶದ ನೋಡಲ್ ಅಧಿಕಾರಿ ರಾಮನಗೌಡ ಕನ್ನೊಳ್ಳಿ, ಅಬಕಾರಿ ಉಪ ಆಯುಕ್ತ ಶಿವಲಿಂಗಪ್ಪ ಬನ್ನೆಟ್ಟಿ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಸಿದ್ಧರಾಮ ಬರಗಿಮಠ, ಚುನಾವಣಾ ತಹಶೀಲ್ದಾರ ಸುರೇಶ ಅಂಕಲಗಿ ಉಪಸ್ಥಿತರಿದ್ದರು.