ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದಲ್ಲಿ ಶರಣು ಸಬರದ ಅವರ ಜಿಲ್ಲಾ ಯುವ ಪರಿಷತ್, ಪ್ರೀತಿ ಪತ್ತಾರ, ಮೋಹನ ಕಟ್ಟಿಮನಿಯವರ ಮನು ಸಾಮಾಜಿಕ ಜನಜಾಗೃತಿ ವಿವಿಧೋದ್ದೇಶ ಸoಸ್ಥೆ, ಧಿಷಾ ಭೀಸೆ ಯವರ ಸ್ವಯಂಭು ಆರ್ಟ್ ಫೌಂಡೇಶನ್ ಸಹಯೋಗದಲ್ಲಿ, ಮಲ್ಲಮ್ಮಾ ಯಾಳವಾರವರ ಅಧ್ಯಕ್ಷತೆಯಲ್ಲಿ ನಾಡಿನ ಖ್ಯಾತ ರಂಗಕರ್ಮಿ, ಚಿತ್ರನಟಿ, ಹಿನ್ನೆಲೆಗಾಯಕಿ ಬಿ. ಜಯಶ್ರೀ ಅವರೊಂದಿಗೆ ಜಿಲ್ಲೆಯ ವಿವಿಧ ಕಲಾವಿದರೊಂದಿಗೆ ಸಂವಾದ ಏರ್ಪಡಿಸಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬಿ. ಜಯಶ್ರೀ, ಬಿ. ವಿ ಕಾರಂತರು ಇದ್ದಾಗಿನಿಂದ ಇಲ್ಲಿಯವರೆಗೆ, ರಂಗಭೂಮಿಯ ವಿಷಯವನ್ನು ಪಠ್ಯಕ್ರಮಕ್ಕೆ ಸೇರಿಸಬೇಕೆನ್ನುವ ನಮ್ಮ ಮೂವತ್ತು ವರ್ಷದ ಪ್ರಯತ್ನ ಇಂದಿಗೂ ಫಲಕಾರಿಯಾಗಲಿಲ್ಲ. ಹೀಗಾಗಿ ಇಂದಿನ ಯುವಜನತೆ ರಂಗಕಲೆಯಲ್ಲಿ ಸಂಪೂರ್ಣ ಆಸಕ್ತಿ ತೋರದಿರುವದಕ್ಕೆ ಸಾಕ್ಷಿಯಾಗಿದೆ ಎಂದು ವಿಷಾದ ವ್ಯಕ್ತ ಪಡಿಸಿದರು.
ಸಂವಾದದಲ್ಲಿ ಭಾಗವಹಿಸಿದ ಜಿಲ್ಲೆಯ ಖ್ಯಾತ ಶಹನಾಯಿ ವಾದಕ ಗಿರಿಮಲ್ಲಪ್ಪಾ ಭಜಂತ್ರಿ, ಮುದ್ದೇಬಿಹಾಳ ತಾಲ್ಲೂಕಿನ ಗಂಗೂರ ಗ್ರಾಮದ ಏಕತಾರಿ ಕಲಾವಿದ ಮೌನಯ್ಯ. ದಾಸರ, ಚೌಡಕಿ ಹಾಡಿನ ಕಲಾವಿದರಾದ ಸಿದ್ದು ಗು. ಅಲಗೊಂಡ ಮನಗೂಳಿ, ಪಾರಿಜಾತ ಕಲಾವಿದರು ಮತ್ತು ಬಯಲಾಟ ಅಕಾಡೆಮಿಯ ಸದಸ್ಯೆ ಅನಸೂಯಾ ವಡ್ಡರ ಹಾಗೂ ಸಂಗಡಿಗರು, ಮಲ್ಲಮ್ಮನ ಆಟದ ಕಲಾವಿದರಾದ ಶ್ರೀಶೈಲ. ಈ ಗಣ್ಣಿ, ಮಾಳನೂರಿನ ರಂಗಭೂಮಿ ಮತ್ತು ಜಾನಪದ ಕಲಾವಿದ ದಂಪತಿಗಳಾದ ಶಿವಾಜಿ ರಾಮಯ್ಯ ಮತ್ತು ದೇವಕ್ಕಿ ದೊಡಮನಿ, ಡೊಳ್ಳಿನ ಗಾ ಯಾನದ ಕಲಾವಿದರಾದ ಲಕ್ಷ್ಮೀ. ಕನ್ನಳ, ಬುಡಬುಡಕಿ ಕಲಾವಿದರಾದ ರಾಮಚಂದ್ರಾ ಗೊಂದಳಿ ನಾಲಾವತ್ತವಾಡ ಹೀಗೆ ಇನ್ನು ಅನೇಕ ಕಲಾವಿದರ ಕಲೆಯ ಪ್ರಸ್ತುತಿಯನ್ನು ಆಲಿಸಿದ ಬಿ. ಜಯಶ್ರೀಯವರು ಹರ್ಷ ವ್ಯಕ್ತಪಡಿಸಿ ಸಂಭ್ರಮಿಸಿದರು.
ನಂತರ ಸಂವಾದ ಕಾರ್ಯಕ್ರಮದಲ್ಲಿ ನಮ್ಮ ಉತ್ತರ ಕರ್ನಾಟಕದ ಪಾರಿಜಾತ ಕಲೆ ಬೆಂಗಳೂರಲ್ಲಿ ಪ್ರದರ್ಶನವಾಗಬೇಕು ಮತ್ತು ಯುವಜನತೆಗೆ ರಂಗಕಲೆ ಪ್ರೋತ್ಸಾಹ ಏಕೆ ದೊರೆಯುತ್ತಿಲ್ಲ ಎಂಬ ಕಲಾವಿದರ ಪ್ರಶ್ನೆಗೆ ಬಿ. ಜಯಶ್ರೀಯವರು ಕಲಾವಿದ ಕಲೆಗೆ ಜೀವತುಂಬಿ ಪರಿಣಾಮಕಾರಿ ಅಭಿನಯದಿಂದ ಪ್ರೇಕ್ಷಕನಿಗೆ ಅರ್ಥವಾಗುವಂತೆ ಪ್ರದರ್ಶನ ನೀಡಿದಾಗ ಮಾತ್ರ ಅದು ಪರಿಣಾಮ ಬೀರುತ್ತದೆ, ಆ ಕೊರತೆ ನಿಗಬೇಕು ಎಂದು ಉತ್ತರಿಸಿದರು.
ಈ ಕಾರ್ಯಕ್ರಮದಲ್ಲಿ ಪ್ರೊ. ಆನಂದ ಕುಲಕರ್ಣಿ, ರೋಹಿಣಿ ಜತ್ತಿ, ದೇವರಾಜಾ ಶಾಸ್ತ್ರಿ, ಭೀಸೆ ದಂಪತಿಗಳು ಮತ್ತು ಸ್ವಯಂಭು ಆರ್ಟ್ ಫೌಂಡಷನ್ ನ ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಪ್ರಕಾಶ ಗೊಂದಳೆ ನಿರೂಪಿಸಿ ವಂದಿಸಿದರು.