ಉದಯರಶ್ಮಿ ದಿನಪತ್ರಿಕೆ
ಇಂಡಿ: ಹೆಣ್ಣು ಮಕ್ಕಳನ್ನು ಸಮಾಜದಲ್ಲಿ ಆತ್ಮಸ್ಥೆರ್ಯದಿಂದ ಬದುಕಲು ಮಾನಸಿಕವಾಗಿ ಸದೃಢವಾಗಿರುವಂತೆ ಬೆಳೆಸಬೇಕೆಂದು ಕಂದಾಯ ಉಪವಿಭಾಗ ಅಧಿಕಾರಿ ಅಬೀದ್ ಗದ್ಯಾಳ ಹೇಳಿದರು.
ಸೋಮವಾರ ಜಿ.ಪಂ, ತಾ.ಪಂ ಹಾಗೂ ಶಿಶು ಅಭಿವೃದ್ಧಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ಜರುಗಿದ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಅಂಗವಾಗಿ ಬೇಟಿ ಬಚಾವೋ, ಬೇಟಿ ಪಡಾವೋ ದಶಮಾನೋತ್ಸವ ಹಾಗೂ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ತಾಲ್ಲೂಕು ಆಡಳಿತ ಸೌದಧ ಕಚೇರಿ ಆವರಣದಲ್ಲಿ ಚಾಲನೆ ನೀಡಿ ಮಾತನಾಡಿದರು.
ಹೆಣ್ಣು ಮಗು ಮನೆಯ ನಂದಾದೀಪ, ಹೆಣ್ಣು ಮಕ್ಕಳ ಲಿಂಗಾನುಪಾತ ಹೆಚ್ಚಿಸುವುದರ ಜೊತೆಗೆ ಹೆಣ್ಣು ಭ್ರೂಣಹತ್ಯೆ ಹೊಗಲಾಡಿಸಲು ಇಲಾಖೆ ಅನೆಕ ಕ್ರಮಗಳನ್ನು ಕೈಗೊಳ್ಳುತ್ತಿದೆ. ಮನೆಯಲ್ಲಿ ಹೆಣ್ಣು ಮಕ್ಕಳಿಗೆ ಮಾತ್ರ ಉತ್ತಮ ನಡವಳಿಕೆಗಳ ಬಗ್ಗೆ ತಿಳುವಳಿಕೆ ನೀಡುವುದು ಮಾತ್ರವಲ್ಲದೆ ಗಂಡು ಮಕ್ಕಳಿಗೂ ಸಹ ಉತ್ತಮ ಸಂಸ್ಕಾರ ನೀಡಿ ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಗೌರವ ಹಾಗೂ ರಕ್ಷಣೆ ನೀಡುವ ಬಗ್ಗೆ ತಿಳಿಹೇಳಬೇಕು ಎಂದರು.
ಅನೀಮೀಯಾ ಮುಕ್ತ ಪೌಷ್ಠಿಕ ಕರ್ನಾಟಕ ಯೋಜನೆ ಹೆಣ್ಣು ಮಕ್ಕಳ ರಕ್ತ ಹೀನತೆ ಹೋಗಲಾಡಿಸುವಲ್ಲಿ ಮಹತ್ವದ ಯೋಜನೆಯಾಗಿದೆ. ಶುಚಿ ಯೋಜನೆ, ಜನನಿ ಸುರಕ್ಷಾ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಶಿಕ್ಷಣ, ಪೋಷಣೆ, ಬಲವಂತದ ಬಾಲ್ಯವಿವಾಹ, ಕಾನೂನು ಹಕ್ಕುಗಳು ಮತ್ತು ವೈದ್ಯಕೀಯ ಹಕ್ಕುಗಳಂತಹ ಅಂತರಾಷ್ಟ್ರೀಯ ಮಟ್ಟದಲ್ಲಿ ಹುಡುಗಿಯರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವುದು ಹಾಗೂ ಹೆಣ್ಣನ್ನು ಉಳಿಸಿ, ಬೆಳೆಸಿ, ಕಲಿಸಿ, ಹೆಣ್ಣು ಇರುವ ಮನೆ ನಂದಾಗೊಕುಲದಂತೆ ಎಂದು ಹೇಳಿದರು.
ಸಿಡಿಪಿಒ ಗೀತಾ ಗುತ್ತರಗಿಮಠ ಪ್ರಾಸ್ತಾವಿಕ ಮಾತನಾಡಿದರು.
ಈ ಸಂದರ್ಭದಲ್ಲಿ ತಹಶಿಲ್ದಾರ ಬಿ ಎಸ್ ಕಡಕಭಾವಿ, ಪಿ ಎಮ್ ಬಜಂತ್ರಿ, ವಿಠ್ಠಲ ಕಾಂಬಳೆ, ಚಿದಾನಂದ ಬಳಗಾನೂರ ಸೇರಿದಂತೆ, ಗಾಂಧಿ ಬಾಜಾರ ಮಕ್ಕಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿಯರು ಹಾಗೂ ಶಿಕ್ಷಕರು ಪಾಲ್ಗೊಂಡಿದ್ದರು.