ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಬೇಸಿಗೆಯ ಮುನ್ನವೇ ನೀರಿಲ್ಲದೇ ಒಣಗಿ ನಿಂತಿರುವ ಗ್ರಾಮದ ಕೆರೆಗೆ ನೀರು ಹರಿಸಿ ಜನ, ಜಾನುವಾರಗಳಿಗೆ ಅನುಕೂಲ ಕಲ್ಪಿಸುವಂತೆ ಹುಣಶ್ಯಾಳ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ತಾಲ್ಲೂಕಿನ ಹುಣಶ್ಯಾಳ ಗ್ರಾಮದ ಕೆರೆ ಬರುವ ಬೇಸಿಗೆಯ ಮುನ್ನವೇ ಹನಿ ನೀರು ಇಲ್ಲದೇ ಒಣಗಿದ್ದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ. ಪ್ರತಿ ವರ್ಷ ಬೇಸಿಗೆಯ ಬಿಸಿಲು ಹೆಚ್ಚಾಗುತ್ತಲೇ ಇದ್ದು, ಬರುವ ಬೇಸಿಗೆಯ ಪ್ರಖರತೆ ಈಗಲೇ ಆರಂಭಗೊಂಡಿದೆ. ಒಂದು ವೇಳೆ ಬಿಸಿಲು ಹೆಚ್ಚಾದಲ್ಲಿ ಗ್ರಾಮದಲ್ಲಿ ನೀರಿನ ತಾಪತ್ರಯ ತಪ್ಪಿದ್ದಲ್ಲ. ಆದ್ದರಿಂದ ಬೇಸಿಗೆಯ ಆರಂಭಕ್ಕೆ ಮುನ್ನವೇ ಕೆರೆಗೆ ನೀರು ಹರಿಸುವುದು ಅಗತ್ಯವಾಗಿದೆ. ಈ ಬಗ್ಗೆ ಗ್ರಾಮದ ಯುವಧುರೀಣ ಮೈನೂದ್ಧಿನ್ ಬಾಗವಾನ ಹಾಗೂ ಶಾಂತಗೌಡ ಕೋಟಿಖಾನಿ ಮಾತನಾಡಿ, ನಮ್ಮೂರಿನ ಕೆರೆ ಬೂದಿಹಾಳ ಪೀರಾಪೂರ ಏತ ನೀರಾವರಿ ಯೋಜನೆಯ ಪೈಪ ಲೈನ್‌ನಿಂದ ಕೇವಲ ಒಂದು ಕಿಲೋಮೀಟರ್ ಅಂತರದಲ್ಲಿದೆ. ರಾಂಪೂರ ಕ್ರಾಸ್ ಹತ್ತಿರ ವಾಲ್ ಅಳವಡಿಸುವುದರ ಮೂಲಕ ಕೆರೆಗೆ ನೀರು ಪೂರೈಸಲು ಅವಕಾಶವಿದೆ. ಇದಕ್ಕೆ ಕೆಬಿಜೆಎನ್‌ಎಲ್ ಅಧಿಕಾರಿಗಳು ಕ್ರಮವಹಿಸಬೇಕಾಗಿದೆ.
೨೦೧೯ರಲ್ಲಿ ಹುಣಶ್ಯಾಳ ಕೆರೆಗೆ ನೀರು ತುಂಬಿಸಲು ಆಗ್ರಹಿಸಿ ಸತತ ೨೧ ದಿನಗಳ ಕಾಲ ಸತ್ಯಾಗ್ರಹ ಮಾಡಿ ಆಗ್ರಹಿಸಲಾಯಿತು. ಆಗ ಜನಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡಿ ಭರವಸೆ ನೀಡಿದ್ದರು. ನಂತರ ಸರ್ಕಾರ ಹಾಗೂ ಜನಪ್ರತಿನಿಧಿಗಳು ಬದಲಾದರೂ, ಆದರೆ ನೀರು ಹರಿಸುವ ಕ್ರಮಕ್ಕೆ ಯಾರು ಮುಂದಾಗಲಿಲ್ಲ. ಗ್ರಾಮಸ್ಥರ ದಶಕದ ಹೋರಾಟಕ್ಕೆ ಈಗಲಾದರೂ ಸ್ಪಂದಿಸುವ ಮೂಲಕ ಜನಪ್ರತಿನಿಧಿಗಳು ಹಾಗೂ ಅಧಿಕಾರಿವರ್ಗ ಕೂಡಲೇ ನೀರು ಹರಿಸಲು ಮುಂದಾಗಬೇಕು ಎಂದು ಮನವಿ ಮಾಡಿದರು.
ಗ್ರಾಮದ ಪೀರ್‌ಅಹ್ಮದ್ ಸಿಪಾಯಿ, ಶಂಕ್ರೆಪ್ಪ ಬಂಗಾರಗುಂಡ, ಹುಸೇನ್‌ಸಾಬ್ ನಾಗಾವಿ, ಗುತ್ತಪ್ಪಗೌಡ ಕೋಟಿಖಾನಿ, ಎನ್.ಎಸ್.ಪಾಕಿ, ಶಫೀಕ್ ಸಿಪಾಯಿ, ರಮೇಶ ಪಾಟೀಲ, ಇಬ್ರಾಹಿಂ ಹವಾಲ್ದಾರ, ಶ್ರೀಪಾಲ ಪಾಕಿ, ಗೋಪಾಲ ನಾಯ್ಕೋಡಿ, ಶಕೀಲ ಪೋಲಾಸಿ ಇದ್ದರು.