ಉದಯರಶ್ಮಿ ದಿನಪತ್ರಿಕೆ
ಮಮದಾಪುರ: ಗ್ರಾಮೀಣ ಕರ್ನಾಟಕದಲ್ಲಿ ಶೈಕ್ಷಣಿಕ ವ್ಯವಸ್ಥೆಯನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಡುತ್ತಿರುವ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ಕಂಪನಿ ವಿಜಯಪುರದಲ್ಲಿ ತನ್ನ ಸಮಗ್ರ ಶೈಕ್ಷಣಿಕ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯ ಉದ್ಘಾಟನಾ ಸಮಾರಂಭವನ್ನು ಆಯೋಜಿಸಿತ್ತು.
ಕೈಗಾರಿಕಾ ಸಚಿವ ಡಾ.ಎಂ.ಬಿ.ಪಾಟೀಲ್ ಅವರು ಮಾತನಾಡಿ, “ಸುಸ್ಥಿರ ಬೆಳವಣಿಗೆಗೆ ಮತ್ತು ಸಮಾಜದ ಏಳಿಗೆಗೆ ಗುಣಮಟ್ಟದ ಶಿಕ್ಷಣವೇ ಅಡಿಪಾಯ. ವಿಜಯಪುರದಲ್ಲಿ ಶೈಕ್ಷಣಿಕ ಮೂಲಸೌಕರ್ಯಗಳನ್ನು ಅಭಿವೃದ್ಧಿ ಪಡಿಸಲು ಮುಂದಾಗಿರುವ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಸಂಸ್ಥೆಗೆ ಬದ್ಧತೆ ಮೆಚ್ಚುಗೆಗೆ ಅರ್ಹ. ಈ ಯೋಜನೆಯು ವಿದ್ಯಾರ್ಥಿಗಳ ತಕ್ಷಣದ ಅಗತ್ಯಗಳನ್ನು ಪೂರೈಸುತ್ತದೆ ಮತ್ತು ಅತ್ಯುತ್ತಮ ಭವಿಷ್ಯವನ್ನು ರೂಪಿಸಲು ಸೂಕ್ತ ಅಡಿಪಾಯವನ್ನು ಹಾಕಿಕೊಡಲಿದೆ. ಈ ಯೋಜನೆಯು ಸಾವಿರಾರು ಯುವ ಮನಸ್ಸುಗಳ ಮೇಲೆ ಸಕಾರಾತ್ಮಕ ಪರಿಣಾಮ ಬೀರುವುದನ್ನು ನೋಡಲು ನಾನು ಉತ್ಸುಕನಾಗಿದ್ದೇನೆ ಎಂದು ಹೇಳಿದರು.
ಟಿಕೆಎಂನ ರಾಜ್ಯ ವ್ಯವಹಾರಗಳ ಮುಖ್ಯಸ್ಥರು, ಮುಖ್ಯ ಸಂವಹನ ಅಧಿಕಾರಿ, ಹಿರಿಯ ಉಪಾಧ್ಯಕ್ಷ ಸುದೀಪ್ ಎಸ್ ದಳವಿ, ಶಿಕ್ಷಣವು ಸಮಾಜದಲ್ಲಿ ಅರ್ಥಪೂರ್ಣ ಬದಲಾವಣೆ ಉಂಟು ಮಾಡುವ ಶಕ್ತಿಯನ್ನು ಹೊಂದಿದೆ ಎಂಬುದು ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ನ ನಂಬಿಕೆಯಾಗಿದೆ. ವಿಜಯಪುರದಲ್ಲಿ ಶೈಕ್ಷಣಿಕ ಮೂಲಸೌಕರ್ಯಗಳನ್ನು ಒದಗಿಸಿ ಸುಸ್ಥಿರ ಸಮಾಜವನ್ನು ರಚಿಸುವ ನಮ್ಮ ಉದ್ದೇಶದ ಭಾಗವಾಗಿ ಈ ಯೋಜನೆಯು ರೂಪುಗೊಂಡಿದೆ ಎಂದರು.
ಅತ್ಯುತ್ತಮ ಕಲಿಕಾ ವಾತಾವರಣ ಕಲ್ಪಿಸುವ ಜೊತೆಗೆ ಹೆಚ್ಚು ವಿದ್ಯಾರ್ಥಿಗಳಿಗೆ ಕಲಿಕೆಯ ಅವಕಾಶ ಒದಗಿಸಲಾಗುತ್ತದೆ. ಈ ಯೋಜನೆಯ ಲಾಭ ಪಡೆಯಲಿರುವ ಶಾಲೆಗಳ ಹೆಸರುಗಳು ಹೀಗಿವೆ: ಸರ್ಕಾರಿ ಪದವಿ ಕಾಲೇಜು, ಮಮದಾಪುರ, ಸರಕಾರಿ ಪಿಯು ಕಾಲೇಜು, ಅರ್ಜುಣಗಿ, ಕೆಪಿಎಸ್ ಮಮದಾಪುರ, ಸರ್ಕಾರಿ ಪ್ರೌಢಶಾಲೆ, ಬೊಳ್ಚಿಕಲಕ್ಕಿ, ಸರ್ಕಾರಿ ಪ್ರೌಢಶಾಲೆ, ಹೆಬ್ಬಲಹಟ್ಟಿ (ಆರ್ ಎಂ ಎಸ್ ಎ), ಸರ್ಕಾರಿ ಪ್ರೌಢಶಾಲೆ, ಕಣಮುಚ್ಚನಾಳ
ಜನರಲ್ ಮ್ಯಾನೇಜರ್ ರೋಶನ್ ಅವರು ಉಪಸ್ಥಿತರಿದ್ದರು.