ಉದಯರಶ್ಮಿ ದಿನಪತ್ರಿಕೆ
ಕೆಂಭಾವಿ: ವಿದ್ಯಾರ್ಥಿಗಳು ಶಾಲಾ, ಕಾಲೇಜು ಹಂತದಲ್ಲಿ ನಾಡು, ನುಡಿ, ಸಂಸ್ಕೃತಿ, ಕಲೆ, ಸಾಹಿತ್ಯ, ಸಂಗೀತದ ಆಸಕ್ತಿ ಮತ್ತು ಅಭಿರುಚಿ ಅಳವಡಿಸಿಕೊಳ್ಳಿ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರು ಹಾಗೂ ಹಿರಿಯ ಸಾಹಿತಿ ಸಿದ್ದರಾಮ ಹೊನ್ಕಲ್ ಹೇಳಿದರು.
ಪಟ್ಟಣದ ಮಹಾ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು, ವಲಯ ಕನ್ನಡ ಸಾಹಿತ್ಯ ಪರಿಷತ್ತು, ಸಹೋದರಿ ನಿವೇದಿತಾ ಸಹಕಾರಿ ಸಂಘ (ನಿ) ಸಹಯೋಗದಲ್ಲಿ ಚಕೋರ ಸಾಹಿತ್ಯ ವಿಚಾರ ವೇದಿಕೆ ವತಿಯಿಂದ ರವಿವಾರ ಹಮ್ಮಿಕೊಂಡಿರುವ ವಿಶೇಷ ಉಪನ್ಯಾಸ ಹಾಗೂ ಕವಿಗೋಷ್ಠಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ವಿಶೇಷ ಉಪನ್ಯಾಸ ನೀಡಿದ ಡಾ. ಯಂಕನಗೌಡ ಎಸ್ ಪಾಟೀಲ್, ವಚನ ಸಾಹಿತ್ಯದಲ್ಲಿ ಜೀವನದ ಮೌಲ್ಯಗಳು ಅಡಗಿವೆ, ಅವು ಸಾರ್ವಕಾಲಿಕ ಸತ್ಯವಾದವುಗಳು, ಪರಸ್ಪರ ಪ್ರೀತಿ, ವಿಶ್ವಾಸ, ಸಹಕಾರ, ಸಹಬಾಳ್ವೆ, ಸಮನ್ವಯತೆ, ಸಹೋದರತ್ವ, ಶಾಂತಿ, ಪರಿಕಲ್ಪನೆಯೇ ಸೌಹಾರ್ದತೆ ಮತ್ತು ಸಮಾನತೆ ಎಂದವರು, ಬಸವಾದಿ ಶರಣರು ಸ್ಥಾಪಿಸಿದ ಅನುಭವ ಮಂಟಪವೇ ಇಂದು ದೆಹಲಿಯಲ್ಲಿ ಕಂಗೊಳಿಸುವ ಪಾರ್ಲಿಮೆಂಟ್ ಎಂದರು.
ಹಿರೇಮಠ ಸಂಸ್ಥಾನದ ಪೀಠಾಧಿಪತಿ ಚನ್ನಬಸವ ಶಿವಾಚಾರ್ಯರು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಇದೇ ವೇಳೆ ಪಿಎಲ್ ಡಿ ಬ್ಯಾಂಕ್ ನಿರ್ದೇಶಕ ವಾಮನರಾವ್ ದೇಶಪಾಂಡೆ, ಆಶ್ರಯ ಕಮಿಟಿ ಅಧ್ಯಕ್ಷ ಶರಣಬಸವ ಡಿಗ್ಗಾವಿ, ತಾಲೂಕು ಕಸಾಪ ವರ್ಷದ ವ್ಯಕ್ತಿ ನಿಂಗನಗೌಡ ದೇಸಾಯಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶರಣಕುಮಾರ ಯಾಳಗಿ, ಉಪನ್ಯಾಸಕ ಬಸನಗೌಡ ಯಾಳಗಿ ಇವರಿಗೆ ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಪತ್ರಕರ್ತ ಸಂಜೀವರಾವ್ ಕುಲ್ಕರ್ಣಿ, ಶಿವನಗೌಡ ಮಾಲಿ ಪಾಟೀಲ್, ಸುಮಿತ್ರಪ್ಪ ಸಾಹುಕಾರ ಅಂಗಡಿ, ಮಹಿಪಾಲರಡ್ಡಿ ಡಿಗ್ಗಾವಿ, ವಲಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಡಿವಾಳಪ್ಪಗೌಡ ಪಾಟೀಲ ಹೆಗ್ಗನದೊಡ್ಡಿ ಪ್ರಾಸ್ತಾವಿಕ ಮಾತನಾಡಿದರು.
ನಿಂಗನಗೌಡ ದೇಸಾಯಿ, ವಿಠ್ಠಲ ಚೌವ್ಹಾಣ್, ವೀರಣ್ಣ ಕಲಿಕೇರಿ, ಶ್ರೀಶೈಲ ಹದಗಲ್, ದೇವಿಂದ್ರಪ್ಪ ಕರಡಕಲ್, ಮಹ್ಮದ್ ದಲಾಯತ್, ಜೆಟ್ಟೇಪ್ಪ ನಡಕೂರ, ಪ್ರಕಾಶ ವಜ್ಜಲ್, ಬಸನಗೌಡ ಯಾಳಗಿ, ಮೀನಾಕ್ಷಿ ಸಾವಳಿಗಿ, ಸೇರಿದಂತೆ ಅನೇಕರು ಕವನ ವಾಚನ ಮಾಡಿದರು.
ಕವಿಗೋಷ್ಠಿ ಅಧ್ಯಕ್ಷತೆ ವಹಿಸಿ ಪಾರ್ವತಿ ಎಸ್ ಬುದೂರ ಮಾತನಾಡಿದರು.
ಬಂದೇನವಾಜ್ ನಾಲತವಾಡ ನಿರೂಪಿಸಿ, ವಂದಿಸಿದರು.