ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಯಾವುದೇ ಕಾರ್ಯವನ್ನು ನಿರ್ವಹಿಸಿದರು ಮೊದಲು ಅದರ ಮೂಲ ಆಶಯ ಏನಿದೆ ಎನ್ನುವುದನ್ನು ಅರಿತುಕೊಂಡು ಅದರ ಮೂಲ ಉದ್ಧೇಶಕ್ಕೆ ಧಕ್ಕೆಯಾಗದ ರೀತಿಯಲ್ಲಿ ಕಾರ್ಯ ನಿರ್ವಹಿಸಬೇಕು ಎಂದು ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಸುಭಾಷ ಸಂಕದ ಹೇಳಿದರು.
೭೬ ನೇ ಗಣರಾಜ್ಯೋತ್ಸವದ ಅಂಗವಾಗಿ ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಎಕ್ಸಲಂಟ್ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಗಣರಾಜ್ಯೋತ್ಸವದ ಸಂದೇಶ ನೀಡಿದ ಅವರು; ಕಾರ್ಯ ಯಾವುದೇ ಆಗಿರಲಿ ಅದರ ಮೂಲ ಉದ್ಧೇಶ ಬಹಳ ಮುಖ್ಯವಾಗಿರುತ್ತದೆ. ಅದನ್ನು ಅರಿತುಕೊಳ್ಳದೆ ಮಾಡುವ ಕಾರ್ಯ ಎಂದಿಗೂ ಯಶಸ್ವಿಯಾಗುವುದಕ್ಕೆ ಸಾಧ್ಯವಿಲ್ಲ. ಹಾಗೆಯೇ ನಮ್ಮ ದೇಶಕ್ಕಾಗಿ ನೀಡಿದ ಸಂವಿಧಾನದ ಮೂಲ ಉದ್ಧೇಶಕ್ಕೆ ಧಕ್ಕೆಯಾಗದ ರೀತಿಯಲ್ಲಿ ನಾವುಗಳು ಬದುಕು ನಿರ್ವಹಿಸಬೇಕು. ಕೇವಲ ಹಕ್ಕುಗಳನ್ನು ಅನುಭವಿಸಿದರೆ ಸಾಲದು ಅದರ ಜೊತೆಯಲ್ಲಿ ಮೂಲಭೂತ ಕರ್ತವ್ಯಗಳನ್ನು ನೆರವೇರಿಸಬೇಕು. ಆಗ ಮಾತ್ರ ಸಂವಿಧಾನಕ್ಕೆ ನಾವು ಗೌರವ ಸಲ್ಲಿಸಿದಂತಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಅತಿಥಿ ಸ್ಥಾನವನ್ನು ಅಲಂಕರಿಸಿ, ಜನಸ್ನೇಹಿ ವಕೀಲ ಮಲ್ಲಿಕಾರ್ಜುನ ಭೃಂಗೀಮಠ, ಉದ್ದಿಮೆದಾರ ಸಿ.ಎಂ.ಮಾಲಿಪಾಟೀಲ ಮಾತನಾಡಿದರು.
ಕಾರ್ಯಕ್ರಮದಲ್ಲಿ ಹಿರಿಯಶ್ರೇಣಿ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧೀಕಾರದ ಸದಸ್ಯ ಕಾರ್ಯದರ್ಶಿಗಳು ಆದ ಅರವಿಂದ ಹಾಗರಗಿ, ಓಂಸಾಯಿರಾಮ್ ಸೇವಾ ಸಮಿತಿ ಮಹಾತ್ಮಾ ಗಾಂಧಿ ನಗರದ ಅಧ್ಯಕ್ಷ ಸಾಗರ ಪತಂಗೆ, ಕಾಲೇಜಿನ ಪ್ರಾಚಾರ್ಯ ಶ್ರೀಕಾಂತ ಕೆ. ಎಸ್., ಉಪ ಪ್ರಾಚಾರ್ಯ ಮಂಜುನಾಥ ಮ. ಜುನಗೊಂಡ ಉಪಸ್ಥಿತರಿದ್ದರು.
ಕನ್ನಡ ವಿಭಾಗದ ಉಪನ್ಯಾಸಕ ರಮೇಶ ಬಾಗೇವಾಡಿ ನಿರೂಪಿಸಿದರು, ಮುಖ್ಯಸ್ಥ ಶರಣಗೌಡ ಪಾಟೀಲ ವಂದಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಎಲ್ಲ ಬೋಧಕ ಬೋಧಕೇತರ ಸಿಬ್ಬಂದಿ ಹಾಜರಿದ್ದರು.