ಉದಯರಶ್ಮಿ ದಿನಪತ್ರಿಕೆ
ಗಣತಂತ್ರದ ಮೌಲ್ಯ ಎಲ್ಲರೂ ಅರಿಯಬೇಕು- ಮಲ್ಲು ದಾನಗೌಡ
ಚಿಕ್ಕಪಡಸಲಗಿ : ನಮ್ಮೆಲ್ಲರಲ್ಲಿ ರಾಷ್ಟ್ರೀಯ ಪ್ರಜ್ಞೆ ಮೂಡಬೇಕು. ಏಕತೆ,ಐಕ್ಯತೆಯುಳ್ಳ ಸಾಮರಸ್ಯದ ಭಾವ ಮೈದೇಳಬೇಕು.ಸಾರ್ವಭೌಮ ಪ್ರಬುದ್ಧಕ್ಕಾಗಿ ದೇಶಭಕ್ತಿವೆಂಬ ದಿವ್ಯತೆ ಮಂತ್ರ ಉತ್ಸಾಹದಿಂದ ಹೃದಯಾಂತರದಲ್ಲಿ ಹೊಂಕರಿಸಬೇಕು ಎಂದು ಶಾಲಾ ಆಡಳಿತ ಮಂಡಳಿ ಸದಸ್ಯ ಮಲ್ಲು ದಾನಗೌಡ ಹೇಳಿದರು.
ಚಿಕ್ಕಪಡಸಲಗಿ ಗ್ರಾಮದಲ್ಲಿ ಗದುಗಿನ ಜಗದ್ಗುರು ತೋಂಟದಾರ್ಯ ವಿದ್ಯಾಪೀಠ ಸಂಸ್ಥೆಯ ಶಿವಶರಣ ಹರಳಯ್ಯ ಸ್ಮಾರಕ ಪ್ರೌಢಶಾಲೆಯಲ್ಲಿ ಜರುಗಿದ 76 ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ಸಂವಿಧಾನ ಜಾರಿಗೆ ಬಂದು ಇಂದಿಗೆ ಏಪ್ಪತ್ತೈದು ವಸಂತಗಳು ಸಂದಿವೆ. ಯುವಜನತೆ ಸೇರಿದಂತೆ ನಾವೆಲ್ಲರೂ ಇಂದು ಸಂವಿಧಾನದ ಆಶಯಗಳಿಗೆ ತಕ್ಕಂತೆ ಪ್ರಾಮಾಣಿಕತೆಯಿಂದ ನಡೆದುಕೊಂಡು ಸಾರ್ಥಕತೆ ಮೆರೆಯಬೇಕಾಗಿದೆ ಎಂದರು.
ಪ್ರಜಾಸತ್ತಾತ್ಮಕ ಗಣರಾಜ್ಯ ಹೊಂದಿರುವ ನಾವುಗಳು ನಮ್ಮ ಕಾಯಕ ತತ್ವಗಳು ನ್ಯಾಯ ಸಮ್ಮತವಾಗಿರಬೇಕು. ಭ್ರಾತೃತ್ವದ ಮನೋಭಾವದಿಂದ ಸಾಗಬೇಕು.ಸಕಾರಾತ್ಮಕ ಧೋರಣೆಯೊಂದಿಗೆ ಮೌಲ್ಯಯುತ ಭಾವನೆಗಳನ್ನು ಮೈಗೂಡಿಸಿಕೊಳ್ಳಬೇಕೆಂದ ಅವರು, ಸರಕಾರದ ಹಲವಾರು ಸೌಲಭ್ಯಗಳನ್ನು ಇಲ್ಲಿನ ಶಾಲಾ ಮಕ್ಕಳಿಗೆ ಒದಗಿಸಿಕೊಡುವ ಪ್ರಯತ್ನ ತಾವು ಪ್ರಾಮಾಣಿಕವಾಗಿ ಮಾಡುವುದಾಗಿ ಭರವಸೆ ನೀಡಿದರು.
ಸ್ಥಾನಿಕ ಶಾಲಾ ಆಡಳಿತ ಮಂಡಳಿ ಹಿರಿಯ ಸದಸ್ಯ ರಾಮಪ್ಪ ಸನಾಳ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಸ್ಥಾನಿಕ ಶಾಲಾ ಆಡಳಿತ ಮಂಡಳಿಯ ಇನ್ನೋರ್ವ ಸದಸ್ಯರಾದ ಪದ್ಮಣ್ಣ ಜಕನೂರ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಸದಸ್ಯರಾದ ಮಹಾದೇವ ಕಲ್ಯಾಣಿ, ಬಸಪ್ಪ ನ್ಯಾಮಗೌಡ, ರಾಮಪ್ಪ ಕಲ್ಯಾಣಿ, ಶಿವಪ್ಪ ಜಕನೂರ, ರಾಜು ತೇರದಾಳ ಸೇರಿದಂತೆ ಗ್ರಾಮದ ಸುರೇಶ ಯಣಗಾಯಿ ವೇದಿಕೆಯಲ್ಲಿದ್ದರು.
ದೇಶಭಕ್ತಿ ಗೀತೆ,ನೃತ್ಯ ಕಲರವ…!
ಗಣರಾಜ್ಯೋತ್ಸವ ಅಂಗವಾಗಿ ಶಾಲಾ ಮಕ್ಕಳಿಂದ ಜರುಗಿದ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ದೇಶಭಕ್ತಿ ಗೀತೆ,ನೃತ್ಯಗಳ ನಿನಾದ ಮೊಳಗಿದವು. ಪ್ರಾಥಮಿಕ ಶಾಲೆಗಳ ಪುಟ್ಟ ಮಕ್ಕಳು ಸೊಗಸಾಗಿ ಭಾಷಣ, ದೇಸಿ ಕುಣಿತ ಪ್ರದಶಿ೯ಸಿ ಗಮನ ಸೆಳೆದರು. ಹರಳಯ್ಯ ಪ್ರೌಢಶಾಲೆಯ ಸ್ನೇಹಾ ಸಿದ್ದಾಪುರ ಬಾಲಕಿ ಪ್ರಸ್ತುತ ಪಡಿಸಿದ ವಿಶೇಷ ಭರತನಾಟ್ಯ ಜನಮನ ಸೆಳೆದು ನೋಡಗ ಕಂಗಳಗಳನ್ನು ಮಂತ್ರ ಮುಗ್ದಗೊಳಿತು.ಈ ಪ್ರತಿಭಾವಂತೆ ಬಾಲೆ ಪ್ರಾಥಿ೯ಸಿದ ಗೀತೆಯೂ ಮಧುರವಾಗಿ ಮೂಡಿಬಂತು.
ಎಸ್.ಜಿ.ಬಾಳೆಕುಂದ್ರಿ ಆಂಗ್ಲ ಮಾದ್ಯಮದ ಹಾಗೂ ಕನ್ನಡ ಮಾದ್ಯಮದ ಶಿವಶರಣ ಹರಳಯ್ಯ ಸ್ಮಾರಕ ಪ್ರಾಥಮಿಕ ಶಾಲೆ ಮಕ್ಕಳು ಸಹ ಆಕರ್ಷಣೆಯ ಸಾಂಸ್ಕೃತಿಕ ಚಟುವಟಿಕೆ ಸಾದರಪಡಿಸಿ ಭೇಷ್ ಎನಿಸಿಕೊಂಡರು. ಹಲ ಪ್ರತಿಭೆಗಳು ಅತಿಥಿಗಳಿಂದ ನಗದು ಬಹುಮಾನ ಪಡೆದರು.
ಹರಳಯ್ಯ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಬಸವರಾಜ ಜಾಲೋಜಿ, ವಿಶ್ರಾಂತ ಶಿಕ್ಷಕ ಬಸವರಾಜ ಅನಂತಪೂರ, ಗುಲಾಬಚಂದ ಜಾಧವ, ಈರಪ್ಪ ದೇಸಾಯಿ, ಲೋಹಿತ ಮಿಜಿ೯, ಶ್ರೀಶೈಲ ಹುಣಶಿಕಟ್ಟಿ, ಸಹನಾ ಹತ್ತಳ್ಳಿ (ಕಲ್ಯಾಣಿ), ಶೃತಿ ಲಿಗಾಡೆ, ಮಡಿವಾಳ ಮಾಚಿದೇವ ಕೈಗಾರಿಕಾ ತರಬೇತಿ ಕೇಂದ್ರದ ಪ್ರಾಂಶುಪಾಲ ರಾಯಪ್ಪ ಸಣ್ಣಮನಿ, ಉಪನ್ಯಾಸಕರಾದ ಸದಾಶಿವ ಹೊಸಮನಿ, ಆನಂದ ಸಾವಂತ,ಮಲ್ಲಯ್ಯ ಮಠಪಕಿ, ಉಪನ್ಯಾಸಕಿ ಶಾಂತಾ ರೋಣಿಹಾಳ ಹಾಗೂ ಸದಾಶಿವ ಬೋದ್ಲಿ, ಎಸ್.ಜಿ.ಬಾಳೆಕುಂದ್ರಿ ಆಂಗ್ಲ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಮೂಲಾಶ್ರೀ ಕಲ್ಯಾಣಿ, ಅಶ್ವಿನಿ ಕಲ್ಯಾಣಿ, ಅಯಾ ಪೂಜಾ ಅಂಬಿ, ಹರಳಯ್ಯ ಕನ್ನಡ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಶಿವಕುಮಾರ ಅರಬಳ್ಳಿ, ಹಣಮಂತ ಗದಿಗೆಪ್ಪ, ಸುರೇಶ ಸಂತಿ, ಕುಮಾರ ವಾಣಿ, ಸುನಂದಾ ಬಬಲಾದಿಮಠ, ರೇಶ್ಮಾ ಕನಾಳ, ಚಂಪಾ ದಯಗೊಂಡ, ಭಾಗ್ಯಶ್ರೀ ವಿಭೂತಿಮಠ, ರೇಣುಕಾ ಲಾಳಸಂಗಿ, ಶೋಭಾ ಹಿರೇಮಠ,ಲಕ್ಷ್ಮೀ ಸನದಿ ಮೊದಲಾದವರು ಉಪಸ್ಥಿತರಿದ್ದರು.
ವಿವಿಧ ಶಾಲಾ,ಕಾಲೇಜು ಮಕ್ಕಳು ಸಂತಸದಿಂದ ಗಣತಂತ್ರ ಸಮಾರಂಭದಲ್ಲಿ ಪಾಲ್ಗೊಂಡು ದೇಶಭಕ್ತಿ ರಸ ಮೆರೆದರು. ಬಸವರಾಜ ಅನಂತಪೂರ ಸ್ವಾಗತಿಸಿದರು.ಸುರೇಶ ಸಂತಿ ನಿರೂಪಿಸಿದರು. ಗದಿಗೆಪ್ಪ ವಂದಿಸಿದರು.