ವಿಜಯಪುರ: ನಮ್ಮವರು ಪ್ರತಿಯೊಬ್ಬರೂ ಒಂದಾಗಬೇಕು. ಇಲ್ಲದಿದ್ದರೇ ಒಂದಾಗಿರುವ ಮುಸ್ಲಿಂ ಸಮುದಾಯ ನಮ್ಮ ಆಟ ಬಂದ್ ಮಾಡುತ್ತಾರೆ ಎಚ್ಚರವಿರಲಿ ಎಂದು ನಗರ ಶಾಸಕ ಬಸನಗೌಡ ರಾ ಪಾಟೀಲ ಯತ್ನಾಳ ಕಿವಿಮಾತು ಹೇಳಿದರು.
ನಗರದ ಮತಕ್ಷೇತ್ರ ವ್ಯಾಪ್ತಿಯ ವಾ.ನಂ.೧೮ ರ ಹರಣಶಿಖಾರಿ ಓಣಿಯ ಸುಂದರೇಶ್ವರ ದೇವಸ್ಥಾನ ಹತ್ತಿರ, ಕಮಾಲಖಾನ ಬಜಾರ್ ಓಣಿಯ ಗಣಪತಿ ಗುಣಿ ಹತ್ತಿರ ಹಾಗೂ ವಾ.ನಂ.೬ರ ಶಹಾಪುರ ಅಗಸಿ, ಕಲಾಲ ಗಲ್ಲಿ, ಅಗಸರ ಓಣಿ, ಡೋರಗಲ್ಲಿ, ಗೌಳಿ ಗಲ್ಲಿ ಜನರೊಂದಿಗೆ ಮತಯಾಚನೆ ಮಾಡಿ ಅವರು ಮಾತನಾಡಿದರು.
ವಿರೋಧ ಪಕ್ಷದ ಅಭ್ಯರ್ಥಿ ತಮ್ಮ ಸಮುದಾಯದ ಆಸ್ತಿಯನ್ನೇ ಕಬಳಿಸಿದ್ದಾನೆ. ಇನ್ನೂ ಅಧಿಕಾರಕ್ಕೆ ಬಂದರೆ ನಮ್ಮವರನ್ನು ಹೇಗೆ ನಡೆಸಿಕೊಳ್ಳಬಹುದು ಒಂದು ಕ್ಷಣ ಯೋಚಿಸುವ ಅಗತ್ಯವಿದೆ. ನಿರೀಕ್ಷೆಗೂ ಮೀರಿ ನಗರದ ಅಭಿವೃದ್ಧಿ ಮಾಡಿದಲ್ಲದೇ, ಶಾಂತಿಯ ವಾತಾವರಣ ನೆಲೆಸುವಂತೆ ಉತ್ತಮ ಆಡಳಿತ ಕೊಟ್ಟಿರುವ ಹೆಮ್ಮೆಯಿದೆ. ಅಭಿವೃದ್ಧಿಗಾಗಿ ಯಾರ ಮುಲಾಜಿಲ್ಲದೇ, ತೆರೆವು ಕಾರ್ಯಾಚರಣೆ ನಡೆಸುವ ದಿಟ್ಟ ನಿರ್ಧಾರ ಕೈಗೊಂಡ ಪರಿಣಾಮ ಹೈಟೆಕ್ ರಸ್ತೆಗಳು ಆಗಿವೆ ಎಂದು ಹೇಳಿದರು.

ಕಾಯಿಪಲ್ಯ ಮಾರುಕಟ್ಟೆಗೆ ಹೋಗಲು ನಮ್ಮ ಮನೆಯ ಹೆಣ್ಣು ಮಕ್ಕಳು ಹೆದರುತ್ತಿದ್ದರು. ಅಷ್ಟೊಂದು ಅವಮಾನ ಆಗುತ್ತಿತ್ತು. ಇದನ್ನೆ ತಡೆಯಲೆಂದೆ, ನಗರ ೩೫ ಕಡೆಗೆ ಕಾಯಿಪಲ್ಲೆ ಮಾರುಕಟ್ಟೆ ಆರಂಭಿಸಿ, ನಿತ್ಯ ತಾಜಾ ಕಾಯಿಪಲ್ಲೆ ಹಾಗೂ ಗೌರವ ಸಿಗುವಂತೆ ಮಾಡಿರುವೆ. ಅಲ್ಲದೇ, ಗ್ರಾಮೀಣ ಭಾಗದ ರೈತರ ವ್ಯಾಪಾರಕ್ಕೂ ತುಂಬಾ ಅನುಕೂಲವಾಗಿದೆ ಎಂದು ತಿಳಿಸಿದರು.
ಜನ ಬಹಳ ಜಾಣರಾಗಿದ್ದಾರೆ. ಯಾರನ್ನು ಆಯ್ಕೆ ಮಾಡಬೇಕು, ಯಾರ ಮಾತು ಕೇಳಬೇಕು ಎಂಬ ಅರಿವಿದೆ. ಅದಕ್ಕಾಗಿಯೇ ಜನ ಪ್ರಚಾರಕ್ಕೆ ಹೋದ ಕಡೆಯಲ್ಲ ಯಾಕ ಬರ್ತಿರಿ. ನಿಮ್ಮನ್ನು ಬಿಟ್ಟು ಮತ್ಯಾರಿಗೆ ಮತ ಹಾಕೋಣ ಎನ್ನುತ್ತಿದ್ದಾರೆ. ಇದಕ್ಕಿಂತ ಬೇರೆ ಏನ್ ಬೇಕು. ಆದರೆ, ಕೆಲವರು ತಮ್ಮ ಸ್ವಾರ್ಥಕ್ಕಾಗಿ ಇಲ್ಲಸಲ್ಲದ್ದು ಹೇಳಿ, ದಾರಿ ತಪ್ಪಿಸುವ ಕೆಲಸ ಮಾಡುತ್ತಾರೆ. ಅದಕ್ಕೆ ಯಾರು ಕೂಡ ಕಿವಿಗೊಡದೆ, ಹಿಂದುತ್ವ, ಸುರಕ್ಷತೆ, ಅಭಿವೃದ್ಧಿಗಾಗಿ ಮತ್ತೊಮ್ಮೆ ಆಶೀರ್ವದಿಸಿ ಎಂದು ಮನವಿ ಮಾಡಿದರು.
ಮಹಾನಗರ ಪಾಲಿಕೆ ಸದಸ್ಯರು, ಹಿರಿಯ ನಾಗರಿಕರು, ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು, ಮಹಿಳೆಯರು ಮತಯಾಚನೆ ವೇಳೆ ಸಾಥ್ ನೀಡಿದರು.
ಪಕ್ಷ ಸ್ಟಾರ್ ಪ್ರಚಾರಕನ್ನಾಗಿ ನೇಮಿಸಿ, ವಿವಿಧ ಜಿಲ್ಲೆಗಳ ಅಭ್ಯರ್ಥಿಗಳನ್ನು ಗೆಲ್ಲಿಸುವ ಜವಾಬ್ದಾರಿ ನೀಡಿದೆ. ಹೀಗಾಗಿ ನಗರದಲ್ಲಿ ಪ್ರತಿಯೊಬ್ಬ ಮತದಾರ ಬಸನಗೌಡ ಪಾಟೀಲ ಯತ್ನಾಳನಾಗಿ ಕೆಲಸ ಮಾಡಬೇಕು.
ಬಸನಗೌಡ ಪಾಟೀಲ ಯತ್ನಾಳ, ನಗರ ಶಾಸಕರು