ಬಬಲೇಶ್ವರ ಮತಕ್ಷೇತ್ರದಲ್ಲಿ ಪದವಿ ಕಾಲೇಜು ಪ್ರೌಢಶಾಲೆ ನೂತನ ಕಟ್ಟಡ ಭೂಮಿ ಪೂಜೆ ನೆರವೇರಿಸಿದ ಸಚಿವ ಡಾ.ಎಂ.ಬಿ. ಪಾಟೀಲ ಅಭಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಟೋಯೋಟಾ ಕಂಪನಿ ತನ್ನ ಸಿ.ಎಸ್.ಆರ್. ೨೧ ಕೋಟಿ ರೂ.ಗಳನ್ನು ಅನುದಾನವನ್ನು ವಿವಿಧ ಹಂತದಲ್ಲಿ ಬಬಲೇಶ್ವರ ಮತಕ್ಷೇತ್ರದಲ್ಲಿ ಸಾಮಾಜಿಕ ಕಾರ್ಯ ಚಟುವಟಿಕೆಗಳನ್ನು ಅನುಷ್ಠಾನಗೊಳಿಸುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ. ಪಾಟೀಲ ಹೇಳಿದರು.
ಬಬಲೇಶ್ವರ ತಾಲೂಕಿನ ಮಮದಾಪುರ ಗ್ರಾಮದಲ್ಲಿ ಟೊಯೊಟಾ ಕಿರ್ಲೋಸ್ಕರ್ ಕಂಪನಿ ತನ್ನ ಸಿ.ಎಸ್.ಆರ್. ಐದು ಕೋಟಿ ರೂ. ಅನುದಾನದಲ್ಲಿ ಸರ್ಕಾರಿ ಪದವಿ ಕಾಲೇಜು ಹಾಗೂ ಸರಕಾರಿ ಪ್ರೌಢ ಶಾಲೆಗಳ ನೂತನ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಟೋಯೋಟಾ ಶಿಸ್ತು ಹಾಗೂ ಬದ್ದತೆಗೆ ಹೆಸರಾದ ಕಂಪನಿ, ದೂರದ ಜಪಾನ್ ಮೂಲದ ಈ ಕಂಪನಿ ಮಮದಾಪೂರದ ಮಕ್ಕಳ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಲು ಅನುಕೂಲವಾಗಲಿದೆ
೨೧ ಕೋಟಿ ರೂ. ಸಿ.ಎಸ್.ಆರ್ ಅನುದಾನವನ್ನು ಬಬಲೇಶ್ವರ ಮತಕ್ಷೇತ್ರಕ್ಕೆ ನೀಡಿದೆ, ವಿವಿಧ ಹಂತಗಳಲ್ಲಿ ಶಾಲಾ ಕೊಠಡಿ ನಿರ್ಮಾಣ, ಶೈಕ್ಷಣಿಕ ಕಿಟ್ ವಿತರಣೆ, ಶೌಚಾಲಯ, ಶುದ್ಧ ಕುಡಿಯುವ ನೀರು ಹಾಗೂ ಇತರ ಮೂಲಭೂತ ಸೌಕರ್ಯ ಒದಗಿಸಲು ಮುಂದಾಗಿದೆ ನನ್ನ ಮನವಿಗೆ ಸ್ಪಂದಿಸಿ ಈ ಭಾಗದ ಶೈಕ್ಷಣಿಕ ಪ್ರಗತಿಗೆ ನೆರವಾಗುವ ಮೂಲಕ ಟೋಯೋಟಾ, ಕಿರ್ಲೋಸ್ಕರ ಅವರಿಗೆ ಹೃದಯಪೂರ್ವಕ ಧನ್ಯವಾದವನ್ನು ಅರ್ಪಿಸುವೆ ಎಂದು ಹೇಳಿದರು.
ಕೆರೆ ತುಂಬುವ ಯೋಜನೆ ಫಲವಾಗಿ ಮಮದಾಪೂರ ಐತಿಹಾಸಿಕ ಕೆರೆ ಭರ್ತಿಯಾಗಿದೆ, ಅಷ್ಟೇ ಅಲ್ಲದೇ ರಾಜ್ಯದ ಸಾವಿರಾರು ಕೆರೆ ಭರ್ತಿಯಾಗಿವೆ ಎಂದರು.
ರಾಜಸ್ತಾನದ ಜೈಸಲ್ಮೇರ್ ಹಾಗೂ ವಿಜಯಪುರ ಅತ್ಯಂತ ಭೀಕರ ಬರಗಾಲ ಎದುರಿಸುವ ಜಿಲ್ಲೆಗಳು ಎಂದು ಬ್ರಿಟಿಷರು ದಾಖಲಿಸಿದ್ದರು, ಆದರೆ ಈಗ ಕೆರೆ ನೀರು ತುಂಬುವ ಯೋಜನೆ ಫಲವಾಗಿ ಜಿಲ್ಲೆಯ ಅಂತರ್ಜಲ ಹೆಚ್ಚಿದ್ದು ಸಮೃದ್ದತೆಯ ದಾಪುಗಾಲು ಇರಿಸಿದೆ ಎಂದರು.
ಕೃಷ್ಟಾ ನದಿ ನೀರಿನ ನ್ಯಾಯಾಧೀಕರಣ ತೀರ್ಪಿನ ನೋಟಿಫಿಕೇಷನ್ ಆದ ನಂತರ ಮಾಡಬೇಕಾದ ಕಾಲುವೆ ನಿರ್ಮಾಣ ಮೊದಲಾದ ಭೌತಿಕ ಕೆಲಸವನ್ನು ಮುಂಚಿತವಾಗಿಯೇ ಮಾಡಿದ್ದೇವೆ, ಈ ಪೂರ್ವತಯಾರಿಯ ಕೆಲಸವನ್ನೇ ಸದ್ಬಳಕೆ ಮಾಡಿಕೊಂಡು ಮುನ್ನಡೆದಿದ್ದೇವೆ ಎಂದರು. ಆಧ್ಯಾತ್ಮ, ಬಾಹ್ಯಾಕಾಶ, ಆಟೋಮೊಬೈಲ್, ತತ್ವಜ್ಞಾನ ಹೀಗೆ ಯಾವ ವಿಷಯವೇ ಇದ್ದರೂ ಅಪಾರ ಜ್ಞಾನ ಹೊಂದಿದ್ದ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಪವಿತ್ರ ಹೆಸರನ್ನು ಮಮದಾಪೂರದಲ್ಲಿ ನಿರ್ಮಾಣವಾಗುವ ವನಕ್ಕೆ ಇರಿಸಲಾಗುತ್ತಿದೆ ಹೀಗಾಗಿ ಪ್ರತಿಯೊಬ್ಬರು ಮಮದಾಪೂರ ಆದರ್ಶ ಗ್ರಾಮವಾಗಿಸುವ ಸಂಕಲ್ಪದಲ್ಲಿ ಭಾಗಿಯಾಗೋಣ. ಮುಂದಿನ ದಿನದಲ್ಲಿ ಉದ್ಯಮ ಸಂಸ್ಥೆಯ ವತಿಯಿಂದ ಬಬಲೇಶ್ವರದಲ್ಲಿ ಹೈಟೆಕ್ ಹಾಸ್ಪಿಟಲ್ ನಿರ್ಮಾಣಕ್ಕೆ ಮನವಿ ಮಾಡಿಕೊಳ್ಳಲಾಗುವುದು ಎಂದರು.
ಸುದೀಪ ಶಾಂತಾರಾಮ್ ದಳವಿ ಮಾತನಾಡಿ, ಕಿರ್ಲೋಸ್ಕರ ಟೊಯೋಟಾ ಮತ್ತು ಬಿ.ಎಲ್.ಡಿ.ಇ ಇಂಜಿನಿಯರಿಂಗ್ ಕಾಲೇಜು ತಿಳಿವಳಿಕೆ ಪತ್ರಕ್ಕೆ ಸಹಿ ಮಾಡುವ ಮೂಲಕ ವಡಂಬಡಿಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಹೇಳಿದರು.
ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಸ್ವಾಗತಿಸಿದರು. ಗ್ರಾಮ ಪಂಚಾಯತಿ ಅಧ್ಯಕ್ಷ ಮಲ್ಲಿಕಾಜುನ ಗಂಗೂರ, ವಕ್ಫ್ ಬೋರ್ಡ್ನ ಡಾ. ನಿಯಾಜ ಅಹಮ್ಮದ ಕೌಸರ, ಟೋಯೋಟಾ ಸಂಸ್ಥೆಯ ರಮೇಶ, ರೈತ ಮುಖಂಡ ಅರವಿಂದ ಕುಲಕರ್ಣಿ, ಬಸವರಾಜ ದೇಸಾಯಿ, ಕುಮಾರ ದೇಸಾಯಿ ಬಿ.ಎಲ್.ಡಿ.ಇ ಇಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ವಿ.ಜಿ. ಸಂಗಮ, ಡಾ.ಮಹಾಂತೇಶ ಬಿರಾದಾರ ಮೊದಲಾದವರು ಉಪಸ್ಥಿತರಿದ್ದರು.
“ಶೈಕ್ಷಣಿಕವಾಗಿ ವಿಜಯಪುರ ಜಿಲ್ಲೆ ಕೊಡುಗೆ ಅನನ್ಯ, ಜಿಲ್ಲೆಯ ಸಾಧನೆ ಪರಂಪರೆ ಮುಂದುವರೆಯಲಿ ಎಂಬ ದಿವ್ಯ ಆಶಯದೊಂದಿಗೆ ನಾವು ಸಹ ಕೈ ಜೋಡಿಸಿದ್ದೇವೆ, ಮಕ್ಕಳು ದೇಶದ ಭವಿಷ್ಯ, ಹೀಗಾಗಿ ಮಕ್ಕಳ ಶೈಕ್ಷಣಿಕ ಸೌಲಭ್ಯಗಳನ್ನು ಉನ್ನತಿಕರಿಸುವ ಕಾರ್ಯದಲ್ಲಿ ಸಮಾಜ ಸೇವೆಯ ರೂಪದಲ್ಲಿ ತೊಡಗಿಸಿಕೊಂಡಿದೆ.”
– ಸುದೀಪ್ ಶಾಂತಾರಾಮ ದಳವಿ
ಕಿರ್ಲೋಸ್ಕರ್ ಉದ್ಯಮ ಸಂಸ್ಥೆ
“ಶಿಕ್ಷಣ ಸೇವೆ ಸರ್ವೋತ್ತಮ ಸೇವೆ, ಶಿಕ್ಷಣ ಸೇವೆ ಎನ್ನುವುದು ಭಗವಂತನ ಸೇವೆ ಇದ್ದಂತೆ, ಶಿಕ್ಷಕರು ಕೇವಲ ಜ್ಞಾನ ಅಷ್ಟೇ ಅಲ್ಲ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ, ಕೌಶಲ್ಯ ಬೋಧಿಸಿ ಜೀವನ ರೂಪಿಸುವ ಮಹಾನ್ ಕಾರ್ಯ ಮಾಡುತ್ತಾರೆ. ವಿದ್ಯಾರ್ಥಿಗಳು ತಾವು ಏನಾಗಬೇಕು ಎಂಬ ಬಗ್ಗೆ ಗುರಿ ಹೊಂದಬೇಕು, ಪಾಲಕರು ಸಹ ತಮ್ಮ ಮಕ್ಕಳು ಯಾವ ರೀತಿ ಓದುತ್ತಿದ್ದಾರೆ ಎಂಬುದರ ಬಗ್ಗೆ ಗಮನ ಹರಿಸಬೇಕಾಗಿರುವುದು ಅಗತ್ಯ.”
– ರಿಷಿ ಆನಂದ
ಜಿಪಂ ಸಿಇಓ ವಿಜಯಪುರ
ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವರು ಚಾಲನೆ
ಸಿ.ಎಸ್.ಆರ್. ಅನುದಾನದಲ್ಲಿ ಮಮದಾಪುರ ಗ್ರಾಮದಲ್ಲಿ ರೂ. ೩.೫ ಕೋಟಿ ಅನುದಾನದಲ್ಲಿ ಸರಕಾರಿ ಪದವಿ ಕಾಲೇಜು ಕಟ್ಟಡವು ಒಟ್ಟು ೧೨ ಕೊಠಡಿಗಳನ್ನು ನಿರ್ಮಿಸಲಾಗುತ್ತಿದೆ. ಅದರಲ್ಲಿ ೮ ತರಗತಿ ಕೊಠಡಿಗಳು, ಸಿಬ್ಬಂದಿಗೆ, ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಶೌಚಾಲಯ, ಪ್ರಾಚಾರ್ಯರ ಮತ್ತು ಶಿಕ್ಷಕರ ಕೋಣೆಗಳನ್ನು ನಿರ್ಮಿಸಲಾಗುತ್ತಿದೆ. ಕಣಮುಚನಾಳ ಗ್ರಾಮದಲ್ಲಿ ೧.೫ ಕೋಟಿ ರೂ. ಅನುದಾನದಲ್ಲಿ ನಿರ್ಮಾಣವಾಗುವ ಸರಕಾರಿ ಪ್ರೌಢ ಶಾಲೆ ನೂತನ ಕಟ್ಟಡವು ಎರಡು ತರಗತಿ ಕೋಣೆಗಳು, ಸಿಬ್ಬಂದಿ ಕೋಣೆ, ಊಟದ ಕೊಠಡಿ, ಅಡುಗೆ ಕೋಣೆ ಸೇರಿದಂತೆ ಸಿಬ್ಬಂದಿ, ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಶೌಚಾಲಯ ಸೇರಿದಂತೆ ಸೇರಿದಂತೆ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವರು ಚಾಲನೆ ನೀಡಿದರು.