ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ರಾಷ್ಟ್ರೀಯ ಮತದಾರರ ದಿನ-೨೦೨೫ ಅಂಗವಾಗಿ ತಾಲೂಕು ಆಡಳಿತ, ತಾಲೂಕು ಪಂಚಾಯತ ಹಾಗೂ ತಾಲೂಕು ಸ್ವೀಪ್ ಸಮಿತಿಯಿಂದ ಮತದಾನ ಜಾಗೃತಿ ಜಾಥಾ ನಡೆಸಲಾಯಿತು.
ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಜಾಗೃತ ಜಾಥಾಕ್ಕೆ ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷರೂ ಆದ ನಿಂಗಪ್ಪ ಎಸ್. ಮಸಳಿ ಅವರು ಚಾಲನೆ ನೀಡಿದರು. ಜಾಥಾವು ಕಿತ್ತೂರು ರಾಣಿ ಚೆನ್ನಮ್ನ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಮೂಲಕ ಬಸವೇಶ್ವರ ವೃತ್ತಕ್ಕೆ ತಲುಪಿತು. ಜಾಥಾದಲ್ಲಿ ಮತದಾನ ಜಾಗೃತಿ ಫಲಕಗಳನ್ನು ಹಿಡಿದು ಶಾಲಾ ವಿದ್ಯಾರ್ಥಿಗಳು ಹೆಜ್ಜೆಹಾಕಿದರು. ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡುವಂತೆ ಅರಿವು ಮೂಡಿಸಲಾಯಿತು.
ಈ ಸಂದರ್ಭದಲ್ಲಿ ತಹಶೀಲ್ದಾರ ಬಲರಾಮ ಕಟ್ಟಿಮನಿ, ಬಿಇಒ ಬಿ.ಎಸ್.ಸಾವಳಗಿ, ಕಾಲೇಜು ಪ್ರಾಂಶುಪಾಲ ಎಸ್.ಎಸ್.ಅಂಗಡಿ, ತಾ.ಪಂ.ಯೋಜನಾಧಿಕಾರಿ ಖೂಬಸಿಂಗ್ ಜಾಧವ್ ಸೇರಿದಂತೆ ಹಲವರು ಇದ್ದರು.