ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಈ ನಾಡಿನ ಭಾಷೆ, ಜಲ, ಸಂಸ್ಕೃತಿ ಇವುಗಳ ಉಳಿವಿಗಾಗಿ ಟೊಂಕ ಕಟ್ಟಿ ನಿಂತವರು ಮಾತ್ರ ನಿಜವಾದ ಕನ್ನಡಿಗರು ಎಂದು ಕುಂಟೋಜಿ ಸಂಸ್ಥಾನ ಭಾವೈಕ್ಯತಾ ಹಿರೇಮಠದ ಡಾ.ಚನ್ನವೀರ ಶಿವಾಚಾರ್ಯರು ನುಡಿದರು.
ಪಟ್ಟಣದ ವಿಬಿಸಿ ಹೈಸ್ಕೂಲ್ ಮೈದಾನದಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಾಲಯವನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.
ಪಟ್ಟಣದಲ್ಲಿ ಫೆ೧೫ ರಂದು ನಡೆಯಲಿರುವ ೫ನೇ ಕನ್ನಡ ಸಾಹಿತ್ಯ ಸಮ್ಮೇಳನವೊಂದು ಕನ್ನಡಿಗರ ಹಬ್ಬ. ಈ ಹಬ್ಬದ ಯಶಸ್ವಿಗಾಗಿ ಎಲ್ಲ ಸಾಹಿತಿಗಳು, ಸಾಹಿತ್ಯಾಸಕ್ತರು, ಕನ್ನಡಾಭಿಮಾನಿಗಳು ಶ್ರಮಿಸಬೇಕು ಎಂದರು.
ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ ಮಾತನಾಡಿ, ಸಮ್ಮೇಳನದಲ್ಲಿ ಸಾಹಿತಿಗಳಿಗೆ ಹೆಚ್ಚಿನ ಒತ್ತು ಕೊಡಬೇಕು ಎಂಬ ಕೂಗು ಇದ್ದು ಖಂಡಿತ ಸಾಹಿತಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವದು. ಸಮ್ಮೇಳನದ ಯಶಸ್ವಿಗೆ ಎಲ್ಲ ಹಿರಿಯ ಮತ್ತು ಯುವ ಸಾಹಿತಿಗಳ, ಕನ್ನಡಾಭಿಮಾನಿಗಳ ಸಲಹೆ ಸೂಚನೆ ಅತೀ ಅವಶ್ಯ. ಚಿಕ್ಕ ಪುಟ್ಟ ಕಾರಣಗಳಿಗೆ ಬೇಸರ ಮಾಡಿಕೊಳ್ಳದೇ ಕನ್ನಡಾಂಬೆಯ ಜಾತ್ರೆಯನ್ನ ಅದ್ಧೂರಿಯಾಗಿಸಲು ಎಲ್ಲರೂ ಶ್ರಮಿಸಬೇಕು ಎಂದರು.
ಕಾಂಗ್ರೆಸ್ ಮುಖಂಡ ಸಿ.ಬಿ.ಅಸ್ಕಿ, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಎಂ.ಎಂ.ಬೆಳಗಲ್ಲ, ಮಾಜಿ ಕಸಾಪ ಅಧ್ಯಕ್ಷ ಎಂ.ಬಿ.ನಾವದಗಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಎ.ಮುದ್ನೂರ, ಸಂಗೀತಾ ನಾಡಗೌಡ, ಸುಮಲತಾ ಗಡಿಯಪ್ಪನವರ, ರುದ್ರೇಶ ಕಿತ್ತೂರ, ಅಂಬಿಕಾ ಕರಕಪ್ಪಗೋಳ, ಎಸ್.ಎ.ಬೇವಿನಗಿಡದ, ಐ.ಬಿ.ಹಿರೇಮಠ, ಸಿದ್ರಾಮಯ್ಯ ಜೀವಣಗಿಮಠ, ಸತೀಶ ಓಸ್ವಾಲ, ವಾಯ್.ಎಚ್.ವಿಜಯಕರ ಸೇರಿದಂತೆ ಹಲವರು ಮಾತನಾಡಿದರು.
ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಪ್ರಭುರಾಜ ಕಲಬುರ್ಗಿ, ಪುರಸಭೆ ಅಧ್ಯಕ್ಷ ಮಹೆಬೂಬ ಗೊಳಸಂಗಿ, ಸ್ಥಾಯಿ ಸಮಿತಿ ಅಧ್ಯಕ್ಷ ಯಲ್ಲಪ್ಪ ನಾಯಕಮಕ್ಕಳ, ದಿ ಕರ್ನಾಟಕ ಕೋ ಅಪ್ ಬ್ಯಾಂಕ್ ಅಧ್ಯಕ್ಷ ಸಿ.ಎಲ್.ಬಿರಾದಾರ, ನಿರ್ದೇಶಕ ರಾಜು ಕರಡ್ಡಿ, ಎಂಜಿವಿಸಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಎಸ್.ಜಿ.ನಂದಿ, ಬಸವರಾಜ ನಾಲತವಾಡ, ಸರಸ್ವತಿ ಪೀರಾಪೂರ ಸೇರಿದಂತೆ ಹಲವರು ಭಾಗಿಯಾಗಿದ್ದರು.
ಸಾಹಿತಿ ಬಿ.ವಿ.ಕೋರಿ ನಿರೂಪಿಸಿದರು.