ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲರಿಗೆ ಅಖಂಡ ಕರ್ನಾಟಕ ರೈತ ಸಂಘ ಮನವಿ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ತೊಗರಿ ಬೆಳೆ ಹವಾಮಾನ ವೈಪರಿತ್ಯ ಹಾಗೂ ಕಳಪೆ ಬೀಜ ವಿತರಣೆಯಿಂದಾಗಿ ತೊಗರಿ ಬೆಳೆ ಸಂಪೂರ್ಣ ಹಾನಿಯಾಗಿದ್ದು ಹಾನಿಗೊಳಗಾದ ರೈತರಿಗೆ ಸೂಕ್ತ ಮದ್ಯಂತರ ಪರಿಹಾರ ಒದಗಿಸಬೇಕೆಂದು ಆಗ್ರಹಿಸಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ರವರಿಗೆ ಅಖಂಡ ಕರ್ನಾಟಕ ರೈತ ಸಂಘದ ವತಿಯಿಂದ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ನೇತೃತ್ವದಲ್ಲಿ ಶನಿವಾರದಂದು ಮಮದಾಪೂರ ಗ್ರಾಮದಲ್ಲಿ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಅರವಿಂದ ಕುಲಕರ್ಣಿ ಮಾತನಾಡಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ಹಾನಿಗೊಳಗಾದ ತೊಗರಿ ಮಾಹಿತಿಯನ್ನು ಸರಿಯಾಗಿ ಕಳುಹಿಸದ ಕಾರಣ ವಿಜಯಪುರ ಜಿಲ್ಲೆಯ ರೈತರು ವಿಮಾ ಕಂಪನಿ ಬಿಡುಗಡೆಮಾಡುವ ಮದ್ಯಂತರ ಪರಿಹಾರದಿಂದ ವಂಚಿತರಾಗಿದ್ದಾರೆ ಬಿತ್ತನೆ ಮಾಡಿದ ತೊಗರಿ ಬೆಳೆ ಹಾಳಾದ ಸಂದರ್ಭದಲ್ಲಿ ಬೆಳೆ ಪರಿಹಾರಕ್ಕಾಗಿ ವಿಮೆ ಮಾಡಿಸಿದ್ದರು ಕೂಡ ವಿಜಯಪುರ ಜಿಲ್ಲೆಯ ರೈತರಿಗೆ ಒಂದು ಬಿಡುಗಾಸು ಮದ್ಯಂತರ ಪರಿಹಾರ ಹಣ ಬಂದಿಲ್ಲ ಇದಕ್ಕೆ ಮೂಲ ಕಾರಣ ಜಿಲ್ಲೆಯ ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ಮಾಡಿದ ತಪ್ಪಿನಿಂದಾಗಿ ಪರಿಹಾರ ಹಣ ಬಾರದಂತಾಗಿದೆ ಇಂತಹ ಬೇಜವಾಬ್ದಾರಿ ನಿರ್ದೇಶಕರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ರಾಮನಗೌಡ ಹಾದಿಮನಿ, ಶರಣಗೌಡ ಬಿರಾದಾರ, ಶಿವರಾಜ ಖ್ಯಾದಗಿ ಇದ್ದರು.